ಬೆಂಗಳೂರಿನ ‘ಟೊಮಾಟಿನಾ ಫೆಸ್ಟಿವಲ್’ಗೆ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ವಿರೋಧ; ಅನುಮತಿ ನಿರಾಕರಿಸಲು ಪೊಲೀಸರಿಗೆ ಆಗ್ರಹ
ಬೆಂಗಳೂರು: ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ‘ಟೊಮಾಟಿನಾ ಫೆಸ್ಟಿವಲ್’ಗೆ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ವಿರೋಧ ವ್ಯಕ್ತಪಡಿಸಿದ್ದು, ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಆಗ್ರಹಿಸಿದ್ದಾರೆ. ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.
ತಮ್ಮ ಫೇಸ್ಬುಕ್ ವಾಲ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಶೇಷರಾಘವಾಚಾರ್, ಸುಮಾರು 10 ವರ್ಷಗಳ ಹಿಂದೆ ಇದೇ ರೀತಿಯ ಕಾರ್ಯಕ್ರಮ ನಡೆಸಲು ಪ್ರಯತ್ನಿಸಲಾಗಿತ್ತು ಎಂದು ಹೇಳಿದ್ದಾರೆ. ಆಗ ಜಯನಗರ ಶಾಸಕರಾಗಿದ್ದ ವಿಜಯ್ ಕುಮಾರ್ ಅವರು ನಡೆಸಿದ ಹೋರಾಟದ ಬಳಿಕ ಕಾರ್ಯಕ್ರಮ ರದ್ದಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈಗ ಮತ್ತೊಮ್ಮೆ ಇಂತಹ ಕಾರ್ಯಕ್ರಮ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿರುವ ಅವರು, ಯಾವುದೇ ಕಾರಣಕ್ಕೂ ಇದನ್ನು ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ತಿನ್ನುವ ಪದಾರ್ಥವನ್ನು ಮನರಂಜನೆಗಾಗಿ ಬಳಸುವುದಕ್ಕೂ ಶೇಷರಾಘವಾಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಹಾರವು ದೈವಕ್ಕೆ ಸಮಾನವಾಗಿದ್ದು, ಅದನ್ನು ಮೋಜು-ಮಸ್ತಿಗಾಗಿ ಬಳಸುವ ವಸ್ತುವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಅವರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿರುವ ಅವರು, ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿರುವ ಡಿಪಿಎಆರ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪೋಸ್ಟ್ನೊಂದಿಗೆ ಹಂಚಿಕೊಳ್ಳಲಾದ ಪ್ರಚಾರ ಚಿತ್ರದಲ್ಲಿ ‘ಟೊಮಾಟಿನಾ ಫೆಸ್ಟಿವಲ್’ ಅನ್ನು ಸೆಪ್ಟೆಂಬರ್ 6ರಂದು ಮಧ್ಯಾಹ್ನ 12 ಗಂಟೆಯಿಂದ ಬೆಂಗಳೂರಿನ ಅರಮನೆ ಮೈದಾನದ ಪೆಬಲ್, ದಿ ಜಂಗಲ್ ಲೌಂಜ್ನಲ್ಲಿ ಆಯೋಜಿಸುವುದಾಗಿ ತಿಳಿಸಲಾಗಿದೆ. ಪೋಸ್ಟರ್ನಲ್ಲಿ ಟೊಮ್ಯಾಟೊ ವಾರ್, ಲೈವ್ ಡಿಜೆ, ಆಹಾರ ಮತ್ತು ಪಾನೀಯಗಳು, ಆಟಗಳು ಹಾಗೂ ಇತರ ಚಟುವಟಿಕೆಗಳನ್ನು ಉಲ್ಲೇಖಿಸಲಾಗಿದೆ.
