ಕಳಪೆ ಗುಣಮಟ್ಟದ ಮೋತಿಚೂರ್ ಲಡ್ಡು: ಧಾರವಾಡ ಮಿಶ್ರಾ ಪೇಢಾಗೆ ದಂಡ; ಮಿತಿಗಿಂತ ಹೆಚ್ಚು ಟಾರ್ಟ್ರಜೀನ್ ಪತ್ತೆ ಎಂದ FSSAI
ನವದೆಹಲಿ: ಕರ್ನಾಟಕದ ಮೆ. ಧಾರವಾಡ ಮಿಶ್ರಾ ಪೇಢಾ ಅಂಡ್ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿಯ ಲೂಸ್ ಮೋತಿಚೂರ್ ಲಡ್ಡು ಮಾದರಿ ಕಳಪೆ ಗುಣಮಟ್ಟದ್ದೆಂದು ಘೋಷಿಸಲಾಗಿದ್ದು, ಅದರಲ್ಲಿ ಟಾರ್ಟ್ರಜೀನ್ ಪ್ರಮಾಣ ಪ್ರತಿ ಕೆ.ಜಿಗೆ 267.05 ಮಿ.ಗ್ರಾಂ ಪತ್ತೆಯಾಗಿದೆ. ಅನುಮತಿಸಲಾದ ಮಿತಿ ಪ್ರತಿ ಕೆ.ಜಿಗೆ 100 ಮಿ.ಗ್ರಾಂ ಆಗಿದ್ದು, ಇದನ್ನು ಮೀರಿರುವ ಹಿನ್ನೆಲೆಯಲ್ಲಿ ತಯಾರಕರಿಗೆ ದಂಡ ವಿಧಿಸಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತಿಳಿಸಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಅನ್ನು ಉಲ್ಲಂಘಿಸಿ ಕಳಪೆ ಗುಣಮಟ್ಟದ ಮೋತಿಚೂರ್ ಲಡ್ಡು ತಯಾರಿಸಿ ವಿತರಕರಿಗೆ ಪೂರೈಸಿದ ಆರೋಪವನ್ನು ತಯಾರಕರ ವಿರುದ್ಧ ಹೊರಿಸಲಾಗಿದ್ದು, ಇದು ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ದಂಡನೀಯವಾಗಿದೆ.
ಗುಜರಾತ್ನ ಕಚ್ನ ಮೆ. ಶ್ರೀ ಕೆಮ್ಫುಡ್ ಪ್ರೈವೇಟ್ ಲಿಮಿಟೆಡ್ನ ಅಯೋಡೀಕೃತ ಉಪ್ಪಿನ ಮಾದರಿಗಳು ಕಳಪೆ ಗುಣಮಟ್ಟದವು ಹಾಗೂ ತಪ್ಪು ಲೇಬಲಿಂಗ್ ಹೊಂದಿರುವುದಾಗಿ ಘೋಷಿಸಿದ ಬಳಿಕ ಆ ಕಂಪನಿಗೂ ದಂಡ ವಿಧಿಸಲಾಗಿದೆ ಎಂದು FSSAI ತಿಳಿಸಿದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಅಯೋಡಿನ್ ಪ್ರಮಾಣ, ಸೋಡಿಯಂ ಕ್ಲೋರೈಡ್ ಮಟ್ಟ ಹಾಗೂ ಕರಗದ ಪದಾರ್ಥಗಳಿಗೆ ಸಂಬಂಧಿಸಿದ ನ್ಯೂನತೆಗಳು ಕಂಡುಬಂದಿವೆ. ಕಂಪನಿಯು ಕಾಯ್ದೆಯ ಸೆಕ್ಷನ್ 26(2)(ii), 26(2)(v) ಮತ್ತು 27(1) ಉಲ್ಲಂಘಿಸಿರುವುದಾಗಿ ಕಂಡುಬಂದಿದ್ದು, ಸೆಕ್ಷನ್ 51 ಮತ್ತು 52ರ ಅಡಿಯಲ್ಲಿ ದಂಡನೀಯವಾಗಿದೆ.

ರಾಜಸ್ಥಾನದಲ್ಲಿ ನಡೆದ ಪ್ರತ್ಯೇಕ ಆಹಾರ ಸುರಕ್ಷತಾ ಕ್ರಮದಲ್ಲಿ, ಮೂರು ಉತ್ಪನ್ನಗಳ ಮಾದರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಅಸುರಕ್ಷಿತವೆಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಮೆ. ಶ್ರೀ ಶ್ಯಾಮ್ ಫುಡ್ಸ್, ಮೆ. ಭಾರತ್ ಫುಡ್ ಪ್ರಾಡಕ್ಟ್ಸ್ ಮತ್ತು ಮೆ. ಕೆಡಿಪಿ ಫುಡ್ ಇಂಡಸ್ಟ್ರಿ ವಿರುದ್ಧ ನಿಷೇಧ ಆದೇಶ ಹೊರಡಿಸಲಾಗಿದೆ.
ಶ್ರೀ ಶ್ಯಾಮ್ ಫುಡ್ಸ್ ತಯಾರಿಸಿದ ನ್ಯಾಚುರಲ್ ಟೆಸ್ಟ್ ಬ್ರ್ಯಾಂಡ್ನ ಗ್ರೀನ್ ಚಿಲ್ಲಿ ಸಾಸ್ ಮಾದರಿಯನ್ನು ಜೈಪುರದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಅಸುರಕ್ಷಿತವೆಂದು ಘೋಷಿಸಿದೆ. ಭಾರತ್ ಫುಡ್ ಪ್ರಾಡಕ್ಟ್ಸ್ ತಯಾರಿಸಿದ ಡೆಲ್ಲಿ ಡೈರಿ ಬ್ರ್ಯಾಂಡ್ನ ತುಪ್ಪವನ್ನೂ ಜೈಪುರ ಪ್ರಯೋಗಾಲಯ ಅಸುರಕ್ಷಿತವೆಂದು ಘೋಷಿಸಿದೆ. ಕೆಡಿಪಿ ಫುಡ್ ಇಂಡಸ್ಟ್ರಿ ತಯಾರಿಸಿದ ಡೈರಿ ಸರಸ್ ಬ್ರ್ಯಾಂಡ್ನ ಪ್ಯೂರ್ ದೇಸಿ ಘೀ ಮಾದರಿಯನ್ನು ಅಲ್ವಾರ್ನ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಅಸುರಕ್ಷಿತವೆಂದು ಘೋಷಿಸಿದೆ.
ಈ ಉತ್ಪನ್ನಗಳ ಮಾರಾಟ, ವಿತರಣೆ, ತಯಾರಿಕೆ, ಸಂಗ್ರಹಣೆ, ಪ್ರದರ್ಶನ ಹಾಗೂ ಮಾರಾಟಕ್ಕೆ ಒದಗಿಸುವುದನ್ನು ರಾಜಸ್ಥಾನದಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ಎರಡು ತಿಂಗಳ ಅವಧಿಗೆ ನಿಷೇಧಿಸಲಾಗಿದೆ. ಚಿಲ್ಲರೆ ವ್ಯಾಪಾರಿಗಳು, ವಿತರಕರು, ಸಗಟು ವ್ಯಾಪಾರಿಗಳು, ಗೋದಾಮುಗಳು ಹಾಗೂ ಈ ಉತ್ಪನ್ನಗಳನ್ನು ಹೊಂದಿರುವ ಇತರರು ಅವುಗಳನ್ನು ಮಾರಾಟ ಮತ್ತು ಪ್ರದರ್ಶನದಿಂದ ತಕ್ಷಣ ತೆಗೆದುಹಾಕುವಂತೆ ಸೂಚಿಸಲಾಗಿದೆ.
ಸಾಕಷ್ಟು ಪರಿಹಾರಾತ್ಮಕ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಸಂಬಂಧಿಸಿದ ಅನುಸರಣೆ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಆಹಾರ ಉದ್ಯಮ ನಿರ್ವಾಹಕರಿಗೆ ನಿರ್ದೇಶಿಸಲಾಗಿದೆ. ಇದನ್ನು ಪಾಲಿಸದಿದ್ದರೆ ನಿಷೇಧದ ಅವಧಿಯನ್ನು ವಿಸ್ತರಿಸಬಹುದು. ನಿಷೇಧ ಆದೇಶಗಳನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅನ್ವಯ ಕಾನೂನು ಕ್ರಮ, ಪರವಾನಗಿ ಅಮಾನತು ಅಥವಾ ರದ್ದತಿ ಹಾಗೂ ಆರ್ಥಿಕ ದಂಡ ವಿಧಿಸಬಹುದಾಗಿದೆ.
