ಬೆಂಗಳೂರು, ಆಗಸ್ಟ್ 13: ಇತ್ತೀಚೆಗೆ ನಿಧನರಾದ ರಾಜಕೀಯ ನಾಯಕರು, ಗಣ್ಯರು ಹಾಗೂ ಸಾಧಕರಿಗೆ ವಿಧಾನಮಂಡಲದಲ್ಲಿ ಗುರುವಾರ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾವಿನ ಅನಿವಾರ್ಯತೆಯನ್ನು ಸ್ಮರಿಸಿ, ತಮ್ಮ ಆತ್ಮೀಯ ಗೆಳೆಯ ಡಿ. ಸುಧಾಕರ್ ಅವರ ಹೆಸರಿನಲ್ಲಿ ಸಣ್ಣ ನೀರಾವರಿ ಯೋಜನೆಗೆ ನಾಮಕರಣ ಮಾಡುವುದಾಗಿ ಘೋಷಿಸಿದರು.
“ಸಾವಿನ ಯಜಮಾನ ಭಗವಂತ. ಈ ಜಗತ್ತಿನ ತೋಟಗಾರ ಅವನು. ನಾವು ಈ ತೋಟದಲ್ಲಿ ನಮ್ಮ ನಮ್ಮ ಬೀಜಗಳನ್ನು ಬಿತ್ತಿ, ಪ್ರತಿಯೊಬ್ಬರ ಸ್ವಭಾವಕ್ಕೆ ತಕ್ಕಂತೆ ಬೆಳೆದು, ಕೊನೆಗೆ ಸಾವನ್ನು ಪಡೆದುಕೊಂಡು ಹೋಗುತ್ತಿದ್ದೇವೆ,” ಎಂದು ಶಿವಕುಮಾರ್ ಹೇಳಿದರು.
ಅಗಲಿದ ಗಣ್ಯರು, ರಾಜಕೀಯ ನಾಯಕರು ಹಾಗೂ ರಾಷ್ಟ್ರದ ಸಾಧಕರಿಗೆ ಗೌರವ ಸಲ್ಲಿಸುವ ಸಂತಾಪ ಸೂಚಕ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಶ್ಲೋಕ ಮತ್ತು ಸುಭಾಷಿತಗಳ ಮೂಲಕ ನುಡಿನಮನ ಸಲ್ಲಿಸಿದರು. ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ; ಅವೆರಡರ ನಡುವಿನ ಬದುಕು ಮಾತ್ರ ನಮ್ಮದು ಎಂದು ಹೇಳಿದರು.
ಡಿ. ಸುಧಾಕರ್ ಅವರನ್ನು ಸ್ಮರಿಸಿದ ಶಿವಕುಮಾರ್, ಅವರು ತಮ್ಮ ಆತ್ಮೀಯ ಗೆಳೆಯರಾಗಿದ್ದು ಇಬ್ಬರೂ ಒಂದೇ ವಯಸ್ಸಿನವರು ಎಂದರು. ಸುಧಾಕರ್ ಇಷ್ಟು ಬೇಗ ಅಗಲುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ತಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂಬ ಆಸೆ ಸುಧಾಕರ್ ಅವರಿಗೆ ಇತ್ತು ಮತ್ತು ತಮ್ಮ ಸಂಪುಟದಲ್ಲಿ ಸಚಿವರಾಗದಿದ್ದರೂ ಚಿಂತೆ ಇಲ್ಲ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.
ಕಾಲಿನ ಶಸ್ತ್ರಚಿಕಿತ್ಸೆ ವೇಳೆ ಉಂಟಾದ ಸಮಸ್ಯೆಯ ಬಳಿಕ ಸುಧಾಕರ್ ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಕೊನೆಯ ಒಂದು ತಿಂಗಳು ಅವರು ನಡೆಸಿದ ಹೋರಾಟವನ್ನು ನೆನಸಿಕೊಂಡರೆ ದುಃಖವಾಗುತ್ತದೆ ಎಂದರು.
ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಸಂದರ್ಭವನ್ನೂ ಶಿವಕುಮಾರ್ ಸ್ಮರಿಸಿದರು. ಸಹಕಾರಿ ಸಪ್ತಾಹ ಕಾರ್ಯಕ್ರಮದ ಬಳಿಕ ಹಿರಿಯ ಅಧಿಕಾರಿಯೊಬ್ಬರು ಸಂಸ್ಕೃತ ಶ್ಲೋಕ ಹೇಳಿ, ಪ್ರತಿಯೊಂದು ಕ್ಷಣವೂ ಪವಿತ್ರವಾಗಿದ್ದು ಒಳ್ಳೆಯ ಕೆಲಸ ಮಾಡಲು ಕಾಯಬಾರದು ಎಂದು ಸಲಹೆ ನೀಡಿದ್ದರು. ಮರುದಿನ ಬೆಳಗ್ಗೆಯೇ ಆ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಬಂದಿತ್ತು. ಈ ಘಟನೆ ಯಾರೂ ಚಿರಂಜೀವಿಗಳಲ್ಲ ಎಂಬುದನ್ನು ನೆನಪಿಸಿತು ಎಂದು ಹೇಳಿದರು.
ಸುಧಾಕರ್ ಸೌಮ್ಯ ಸ್ವಭಾವದ, ಹಸನ್ಮುಖಿ ರಾಜಕಾರಣಿಯಾಗಿದ್ದರು ಎಂದು ಬಣ್ಣಿಸಿದ ಶಿವಕುಮಾರ್, ಭಾರತ್ ಜೋಡೋ ಯಾತ್ರೆ ವೇಳೆ ಮಳೆಯಿಂದ ತೊಂದರೆಯಾದಾಗ ಕಾರ್ಯಕರ್ತರ ತಂಡವನ್ನು ಕಟ್ಟಿಕೊಂಡು ಯಾತ್ರೆ ಯಶಸ್ವಿಗೊಳಿಸಲು ಅವರು ಶ್ರಮಿಸಿದ್ದರು ಎಂದರು. ಅವರ ಶ್ರಮವನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ಸುಧಾಕರ್ ಕುಟುಂಬದೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದರು ಎಂದು ತಿಳಿಸಿದರು.
ಸುಧಾಕರ್ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಮುಜರಾಯಿ ಖಾತೆ ನೀಡಲಾಗಿತ್ತು. ನಂತರ ಮುಜರಾಯಿ ಖಾತೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡಿದಾಗ, ಸಚಿವ ಸ್ಥಾನ ಇಲ್ಲದೆಯೂ ತಮ್ಮಗಾಗಿ ಕೆಲಸ ಮಾಡಬಲ್ಲೆ ಎಂದು ಸುಧಾಕರ್ ಹೇಳಿದ್ದರು ಎಂದು ಶಿವಕುಮಾರ್ ನೆನಪಿಸಿಕೊಂಡರು.
ಸುಧಾಕರ್ ನೀರಾವರಿ ಅಭಿವೃದ್ಧಿ ಕುರಿತು ಹಲವು ಕನಸುಗಳನ್ನು ಹೊಂದಿದ್ದರು. ಚಿತ್ರದುರ್ಗ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗೆ ಚಾಲನೆ ನೀಡಲು ಜಿಲ್ಲೆಯ ಶಾಸಕರು ಪ್ರಯತ್ನಿಸಿದ್ದರು. ಸುಧಾಕರ್ ಅವರ ನೆನಪನ್ನು ಶಾಶ್ವತಗೊಳಿಸಲು ಸಣ್ಣ ನೀರಾವರಿ ಯೋಜನೆಗೆ ಅವರ ಹೆಸರಿಡಲು ನಿರ್ಧರಿಸಿದ್ದೇನೆ ಎಂದು ಶಿವಕುಮಾರ್ ಘೋಷಿಸಿದರು.
ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ ಅವರನ್ನು ಸ್ಮರಿಸಿದ ಅವರು, ಅವರನ್ನು ‘ತೋಳ’ ಎಂದು ಕರೆಯುತ್ತಿದ್ದೆವು ಎಂದರು. ಸಣ್ಣ ಕೈಗಾರಿಕೆ, ರೇಷ್ಮೆ ಮತ್ತು ಜವಳಿ ಸಚಿವರಾಗಿದ್ದ ವೆಂಕಟರಮಣಪ್ಪ ಕುಡಿಯುವ ನೀರಿಗಾಗಿ ದೊಡ್ಡ ಹೋರಾಟ ನಡೆಸಿದ್ದು, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಾಗಿ ಶ್ರಮಿಸಿದ್ದರು ಎಂದು ಹೇಳಿದರು.
ರಾಮಚಂದ್ರೇಗೌಡರನ್ನು ಸಜ್ಜನ ರಾಜಕಾರಣಿ ಎಂದು ಸ್ಮರಿಸಿದ ಶಿವಕುಮಾರ್, ಅವರು ತಮ್ಮ ಸಂಬಂಧಿಕರೂ ಆಗಿದ್ದರು ಎಂದರು. ರಾಮಚಂದ್ರೇಗೌಡರು ಕಾರ್ಪೊರೇಟರ್ ಆಗಿದ್ದಾಗ ತಾವು ವಿದ್ಯಾರ್ಥಿ ನಾಯಕರಾಗಿದ್ದುದನ್ನು ನೆನಪಿಸಿಕೊಂಡ ಅವರು, ಗೌಡರು ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಾಗಿದ್ದು, ಐದು ದಶಕಗಳ ರಾಜಕೀಯ ಜೀವನದಲ್ಲಿ ಸರಳತೆ, ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು ಎಂದರು.
ಬಿಜೆಪಿ ಕಟ್ಟಲು ರಾಮಚಂದ್ರೇಗೌಡರು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದು, ಐದು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಆರೋಪ ಎದುರಾದ ತಕ್ಷಣ ರಾಜೀನಾಮೆ ನೀಡಲು ಮುಂದಾದಾಗ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ತಾವು ಸಲಹೆ ನೀಡಿದ್ದರೂ, ನೈತಿಕತೆಯ ಕಾರಣ ನೀಡಿ ತನಿಖೆ ಎದುರಿಸಲು ಅವರು ನಿರ್ಧರಿಸಿದ್ದರು. ಬಳಿಕ ಆರೋಪಮುಕ್ತರಾದರು ಎಂದು ಶಿವಕುಮಾರ್ ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರನ್ನು ಸ್ಮರಿಸಿದ ಶಿವಕುಮಾರ್, ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ತಾವು ದೃಢ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದರು. ಚೆನ್ನಮ್ಮ ಸರಳವಾಗಿ ಬದುಕಿದ ಹಿರಿಯ ಜೀವಿಯಾಗಿದ್ದು, ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎಂಬುದಕ್ಕೆ ಅವರ ಬದುಕು ಉದಾಹರಣೆ ಎಂದರು.
ದೇವೇಗೌಡರು ಪ್ರಧಾನಿಯಾಗಲು ಮತ್ತು ಅವರ ಮಕ್ಕಳು ರಾಜ್ಯದ ಜನರ ಸೇವೆಯಲ್ಲಿ ತೊಡಗಿಕೊಳ್ಳಲು ಚೆನ್ನಮ್ಮ ಅವರ ಮಾರ್ಗದರ್ಶನವಿತ್ತು. ಅಧಿಕಾರ ಇರಲಿ, ಇಲ್ಲದಿರಲಿ ಆ ಕುಟುಂಬ ಜನಸೇವೆಯಲ್ಲಿ ತೊಡಗಿಕೊಂಡಿದ್ದು, ಆ ಕುಟುಂಬಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ಹನುಮಂತಪ್ಪ ಅವರನ್ನು ಸ್ಮರಿಸಿದ ಶಿವಕುಮಾರ್, ತಾವು ಜನರಲ್ ಹಾಸ್ಟೆಲ್ನ 108ನೇ ಕೊಠಡಿಯಲ್ಲಿ ಮತ್ತು ಹನುಮಂತಪ್ಪ 110ನೇ ಕೊಠಡಿಯಲ್ಲಿ ವಾಸವಾಗಿದ್ದುದನ್ನು ನೆನಪಿಸಿಕೊಂಡರು. ಹನುಮಂತಪ್ಪ ರೈಲ್ವೆ ಆಯೋಗದ ಅಧ್ಯಕ್ಷರಾಗಿದ್ದರು, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಮಾರ್ಗದರ್ಶನ ನೀಡಿದ್ದರು, ಚಿತ್ರದುರ್ಗದಲ್ಲಿ ಪಕ್ಷದ ಕಚೇರಿಗೆ ಬುನಾದಿ ಹಾಕಿದ್ದರು ಹಾಗೂ ನಿಜಲಿಂಗಪ್ಪ ಅವರ ಆಸ್ತಿ ಖರೀದಿಗೆ ಒತ್ತಾಯಿಸಿದ್ದರು ಎಂದು ಹೇಳಿದರು.
ಜಾಫರ್ ಷರೀಫ್ ಅವರ ಅಳಿಯ ಸಯ್ಯದ್ ಯಾಸೀನ್ ತಮ್ಮೊಂದಿಗೆ ಮೂರು ಬಾರಿ ಶಾಸಕರಾಗಿದ್ದರು ಎಂದು ಶಿವಕುಮಾರ್ ನೆನಪಿಸಿಕೊಂಡರು. ಮಾಜಿ ಸಚಿವ ವೆಂಕಟಾಚಲಯ್ಯ ಅವರೊಂದಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದನ್ನು ಹಾಗೂ ನಂತರ ಅವರು ಶಾಸಕರಾದುದನ್ನು ಸ್ಮರಿಸಿದರು. ಉಗ್ರಪ್ಪ ಅವರ ಮಾವ ಮಾಜಿ ಸಚಿವ ವೀರಣ್ಣ 1972ರಲ್ಲಿ ರಾಜಕೀಯ ಪ್ರವೇಶಿಸಿ, 1983ರಲ್ಲಿ ಸಚಿವರಾಗಿದ್ದು, ಬಂಧಿಖಾನೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು ಎಂದರು.
ಗಾಯಕಿ ಎಸ್. ಜಾನಕಿ ಅವರನ್ನು ಸ್ಮರಿಸಿದ ಶಿವಕುಮಾರ್, ಪ್ರೀತಿ, ನೋವು, ಭಕ್ತಿ, ತಾಯ್ತನ ಮತ್ತು ಗೆಳೆತನ ಸೇರಿದಂತೆ ಬದುಕಿನ ಅನೇಕ ಭಾವನೆಗಳಿಗೆ ಧ್ವನಿ ನೀಡಿದ ಗಾಯಕಿ ಎಂದು ಬಣ್ಣಿಸಿದರು. ಕಲಾವಿದರಿಗೆ ಸಾವಿಲ್ಲ, ಅವರು ತಮ್ಮ ಕಲೆಯ ಮೂಲಕ ಜೀವಂತವಾಗಿರುತ್ತಾರೆ ಎಂದ ಅವರು, ಜಾನಕಿ ತಮ್ಮ ಅಂತಿಮ ಸಂಸ್ಕಾರ ಮೈಸೂರಿನಲ್ಲೇ ನಡೆಯಬೇಕು ಎಂದು ಬಯಸಿದ್ದರು ಎಂಬುದನ್ನು ಕುಟುಂಬದವರು ತಿಳಿಸಿದಾಗ ಆಶ್ಚರ್ಯವಾಗಿತ್ತು ಎಂದರು. ಹಿಂದಿ ಚಿತ್ರರಂಗದ ಗಾಯಕಿ ಆಶಾ ಭೋಸ್ಲೆ ಅವರನ್ನೂ ಉಲ್ಲೇಖಿಸಿ, ಗಾಯಕರು ತಮ್ಮ ಧ್ವನಿಯ ಮೂಲಕ ಅಜರಾಮರರಾಗುತ್ತಾರೆ ಎಂದರು.
ಮಾಜಿ ಸಚಿವರು ಹಾಗೂ ಶಾಸಕರಾದ ವಿ. ಶ್ರೀನಿವಾಸನ್, ಕೆ.ಆರ್. ಶ್ರೀನಿವಾಸಯ್ಯ ಮತ್ತು ಎಚ್.ಎಸ್. ಪುಟ್ಟರಂಗನಾಥ್ ಅವರನ್ನೂ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಸ್ಮರಿಸಿದರು.
