ಅಕ್ರಮ ಕಸ ಸುರಿವು: ಬ್ಲಿಂಕಿಟ್ಗೆ ₹80,000 ದಂಡ, ಕಟ್ಟುನಿಟ್ಟಿನ ಕ್ರಮ
ಬೆಂಗಳೂರು: ಉತ್ತರ ಬೆಂಗಳೂರು ನಗರ ಪಾಲಿಕೆಯ ವ್ಯಾಪ್ತಿಯ ಬ್ಯಾಟರಾಯಣಪುರ ವಿಭಾಗದ ವಾರ್ಡ್ ಸಂಖ್ಯೆ 9ರಲ್ಲಿ ಅಕ್ರಮವಾಗಿ ಕಸ ಸುರಿದ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಸಂಸ್ಥೆ ಬ್ಲಿಂಕಿಟ್ಗೆ ₹80,000 ದಂಡ ವಿಧಿಸಲಾಗಿದೆ.
ರೈಲ್ವೆ ಪ್ಯಾರಲಲ್ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಸವನ್ನು ಅಕ್ರಮವಾಗಿ ಸುರಿದಿರುವುದು ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸಂಬಂಧಿಸಿದ ಸಂಸ್ಥೆಯ ವಿರುದ್ಧ ತಕ್ಷಣ ಕ್ರಮ ಕೈಗೊಂಡು ₹80,000 (ರೂ. ಎಂಬತ್ತ ಸಾವಿರ) ದಂಡ ವಿಧಿಸಲಾಗಿದೆ.


ಪರಿಶೀಲನೆ ವೇಳೆ ಸಹಾಯಕ ಮಹಾಪ್ರಬಂಧಕರಾದ ತೀರ್ಥಪ್ರಸಾದ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕೆಯಾದ ಕವಿತಾ ಉಪಸ್ಥಿತರಿದ್ದು ಕಾರ್ಯಾಚರಣೆ ನಡೆಸಿದರು.
ಅಕ್ರಮ ಕಸ ಸುರಿವು ಸಾರ್ವಜನಿಕ ಆರೋಗ್ಯ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರಿಂದ, ಇಂತಹ ಉಲ್ಲಂಘನೆಗಳ ವಿರುದ್ಧ ಪಾಲಿಕೆ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಅನುಸರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಬೆಂಗಳೂರು ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನಿಲ್ ಕುಮಾರ್ ಅವರು ಕೂಡ ಇಂತಹ ಘಟನೆಗಳು ಮರುಕಳಿಸಿದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
