ಬ್ಲೂ ಲೈನ್ ಫೇಸ್ 2ಎ ಪರೀಕ್ಷಾರ್ಥ ಸಂಚಾರ ಪರಿಶೀಲನೆ ವೇಳೆ ಅಧಿಕಾರಿಗಳೊಂದಿಗೆ ಸಚಿವ ಕೃಷ್ಣ ಬೈರೇಗೌಡ. ಚಿತ್ರ: ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬೆಂಗಳೂರು: ನಮ್ಮ ಮೆಟ್ರೋದ ಬ್ಲೂ ಲೈನ್ ಫೇಸ್ 2ಎ ಮಾರ್ಗದಲ್ಲಿ ಕೆ.ಆರ್. ಪುರಂನಿಂದ ಮಹದೇವಪುರದ ಕಡೆಗೆ ಪರೀಕ್ಷಾರ್ಥ ಸಂಚಾರ ಆರಂಭವಾಗಿದ್ದು, 19 ಕಿ.ಮೀ. ಉದ್ದದ ಕೆ.ಆರ್. ಪುರಂ–ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗವನ್ನು ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ತಿಳಿಸಿದರು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಮೊದಲ ನಾಲ್ಕು ಮೆಟ್ರೋ ನಿಲ್ದಾಣಗಳ ನಡುವೆ ಪರೀಕ್ಷಾರ್ಥ ಸಂಚಾರ ಆರಂಭವಾಗಿದ್ದು, ಮುಂದಿನ ವಾರಗಳಲ್ಲಿ ಹಂತ ಹಂತವಾಗಿ ಇತರ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು. ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆ.ಆರ್. ಪುರಂ, ಹೆಬ್ಬಾಳ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಇಡೀ 58.2 ಕಿ.ಮೀ. ಬ್ಲೂ ಲೈನ್ ಅನ್ನು ಮುಂದಿನ 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನೂ ಸರ್ಕಾರ ಹೊಂದಿದೆ ಎಂದು ಪ್ರಕಟಣೆ ಹೇಳಿದೆ.
ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣದಲ್ಲಿ ಪರೀಕ್ಷಾರ್ಥ ಸಂಚಾರದ ಪ್ರಗತಿ ಪರಿಶೀಲಿಸಿದ ಸಚಿವರು, ಸುಮಾರು 11–12 ಲಕ್ಷ ಜನ ಕೆಲಸ ಮಾಡುವ ಹೊರ ವರ್ತುಲ ರಸ್ತೆ (ಒಆರ್‌ಆರ್) ಉದ್ಯೋಗ ಮತ್ತು ಸಂಚಾರದ ಪ್ರಮುಖ ಕಾರಿಡಾರ್ ಆಗಿರುವುದರಿಂದ ಬ್ಲೂ ಲೈನ್ ಅತ್ಯಂತ ನಿರ್ಣಾಯಕ ಎಂದರು. ಒಆರ್‌ಆರ್‌ನಲ್ಲಿ ಮೆಟ್ರೋ ಸಂಪರ್ಕದ ಅಗತ್ಯವನ್ನು 2016–17ರಲ್ಲೇ ಗುರುತಿಸಿ ಫೇಸ್ 2ಎ ಮತ್ತು 2ಬಿ ಯೋಜನೆ ಪ್ರಕ್ರಿಯೆ ಆರಂಭಿಸಲಾಗಿತ್ತು. 2017ರಲ್ಲಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಯಿತು; ನಿರ್ಮಾಣ ಕಾಮಗಾರಿ 2020ರಲ್ಲಿ ಆರಂಭವಾಯಿತು ಎಂದು ಅವರು ಹೇಳಿದರು.
ಫೇಸ್ 2ಎ:
- ಕೆ.ಆರ್. ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ 19 ಕಿ.ಮೀ. ಮಾರ್ಗದಲ್ಲಿ 13 ನಿಲ್ದಾಣಗಳಿವೆ. ಕೆ.ಆರ್. ಪುರಂನಿಂದ ಮೊದಲ ನಾಲ್ಕು ನಿಲ್ದಾಣಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, ಈ ತಿಂಗಳು ಪೂರ್ತಿ ಮುಂದುವರಿಯಲಿದೆ; ಮುಂದಿನ ತಿಂಗಳು ಇನ್ನೂ ನಾಲ್ಕು ನಿಲ್ದಾಣಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ.
- ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆ ಬಾಕಿಯಿದ್ದು, ಮುಂದಿನ ಎರಡು–ಮೂರು ತಿಂಗಳಲ್ಲಿ, ಜನವರಿ ವೇಳೆಗೆ ಪೂರ್ಣಗೊಳಿಸುವ ಗುರಿಯಿದೆ. ಫೆಬ್ರವರಿಯ ನಂತರ ಕಡ್ಡಾಯ ಸುರಕ್ಷತಾ ಪ್ರಮಾಣೀಕರಣ ಆರಂಭವಾಗಲಿದೆ.
- ಪರೀಕ್ಷೆ ಮತ್ತು ಪ್ರಮಾಣೀಕರಣ ಪರಿಗಣಿಸಿದರೆ ಇನ್ನೂ ಏಳೆಂಟು ತಿಂಗಳು ಬೇಕಾಗಬಹುದು; ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯಿದೆ.
ಫೇಸ್ 2ಬಿಯಲ್ಲಿ ಕೆ.ಆರ್. ಪುರಂ–ಹೆಬ್ಬಾಳ ಮಾರ್ಗದಲ್ಲಿ ಕಾಮಗಾರಿ ಚುರುಕುಗೊಳಿಸಲು ಹಾಗೂ ಗುತ್ತಿಗೆದಾರರೊಂದಿಗೆ ನಿಕಟ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು. ಇಡೀ 58.2 ಕಿ.ಮೀ. ಮಾರ್ಗ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಬೇಕಾಗಬಹುದು ಎಂದರು.
ಹಣಕಾಸಿನ ಕೊರತೆಯಿಂದ ಯೋಜನೆಗಳು ನಿಧಾನವಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳುತ್ತಿದೆ. ಸಾಲ ಮರುಪಾವತಿಯ ಹೊರೆಯನ್ನು ರಾಜ್ಯವೇ ಹೊರುತ್ತಿದ್ದು, ಮೆಟ್ರೋ ನಿಗಮದ ಕಾರ್ಯಾಚರಣೆ ನಷ್ಟಕ್ಕೂ ನೆರವು ನೀಡುತ್ತಿದೆ. ಸಾಲ ಪಡೆದ ಸಮಯದಲ್ಲಿ ಡಾಲರ್ ಮೌಲ್ಯ ₹70–80 ಇದ್ದದ್ದು ಈಗ ಸುಮಾರು ₹100 ಆಗಿದ್ದು, ಸಾಲದ ಹೊರೆ ಸುಮಾರು ಶೇ 30ರಷ್ಟು ಹೆಚ್ಚಿದೆ; ಅನುಮೋದನೆ ವಿಳಂಬದಿಂದ ನಿರ್ಮಾಣ ವೆಚ್ಚವೂ ಏರಿದೆ ಎಂದು ಅವರು ತಿಳಿಸಿದರು.
ಪ್ರಸ್ತಾವಿತ ರೆಡ್ ಲೈನ್ ಕುರಿತು ಮುಖ್ಯಮಂತ್ರಿ ಹಾಗೂ ತಾವು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿ ಸುಮಾರು 22 ತಿಂಗಳಾಗಿದ್ದು, ಅಂತಿಮ ಅನುಮೋದನೆ ಇನ್ನೂ ಬಾಕಿಯಿದೆ ಎಂದು ಸಚಿವರು ಹೇಳಿದರು. ದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರಸ್ತಾವ ರಚನಾತ್ಮಕವಾಗಿ ಚರ್ಚೆಯಾಯಿತಾದರೂ ಅಂತಿಮ ತೀರ್ಮಾನವಾಗಿಲ್ಲ. ಸರ್ಜಾಪುರದಿಂದ ಇಬ್ಬಲೂರು ಜಂಕ್ಷನ್ ಮೂಲಕ ಸೇಂಟ್ ಜಾನ್ಸ್‌ವರೆಗೆ ಡಬಲ್ ಡೆಕ್ಕರ್ ಕಾರಿಡಾರ್ ಪ್ರಸ್ತಾವವನ್ನೂ ರಾಜ್ಯ ಕೇಂದ್ರದ ಮುಂದಿಟ್ಟಿದೆ.
ಮೆಟ್ರೋ ನಿಗಮದ ಆದಾಯ ಅದರ ಪೂರ್ಣ ಕಾರ್ಯಾಚರಣೆ ವೆಚ್ಚ ಭರಿಸಲು ಸಾಕಾಗುವುದಿಲ್ಲ. ಸವಕಳಿ ಸೇರಿಸಿದರೆ ವಾರ್ಷಿಕ ನಷ್ಟ ಸುಮಾರು ₹600–700 ಕೋಟಿ; ಸವಕಳಿ ಹೊರತುಪಡಿಸಿದರೆ ₹50–60 ಕೋಟಿ ಕಾರ್ಯಾಚರಣೆ ಹೆಚ್ಚುವರಿ ಇದೆ ಎಂದು ಅಂದಾಜಿಸಲಾಗಿದೆ. ಮೆಟ್ರೋ ದರ ಹೆಚ್ಚಳದ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಮಹದೇವಪುರ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:
