Home ರಾಜಕೀಯ ಕೇಂದ್ರದ ಬಜೆಟ್-ಬರ್ಬಾದ್ ಬಜೆಟ್ : ಸಿದ್ದರಾಮಯ್ಯ

ಕೇಂದ್ರದ ಬಜೆಟ್-ಬರ್ಬಾದ್ ಬಜೆಟ್ : ಸಿದ್ದರಾಮಯ್ಯ

31
0
Representational Image
Advertisement
bengaluru

ಬೆಂಗಳೂರು :

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್ ಬರ್ಬಾದ್ (ನಾಶ, ದಿವಾಳಿ) ಆಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಕುರಿತು ನನಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ಹೇಳಿದ್ದೆ. ಅದು ನಿಜವಾಗಿದೆ ಎಂದರು.

ಆತ್ಮ ನಿರ್ಭರ ಯೋಜನೆಲ್ಲಿ ಹಣಕಾಸು ಸಚಿವರು ಮೂರು ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಬಜೆಟ್ ಅದರ ಮುಂದುವರಿದ ಭಾಗವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಇದೀಗ ಆತ್ಮ ಬರ್ಬರ ಬಜೆಟ್ ಕೊಟ್ಟಿದ್ದಾರೆ. ಅದು ಆತ್ಮ ಬರ್ಬಾದ್ (ನಾಶ, ದಿವಾಳಿ) ಬಜೆಟ್ ಆಗಿದೆ ಎಂದು ಹೇಳಿದರು.

bengaluru bengaluru

ಸಾಮಾನ್ಯ ಜನರು ಬಜೆಟ್ ಕುರಿತು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಉತ್ತಮವಾದ ಬಜೆಟ್ ನಿರೀಕ್ಷೆ ಮಾಡಿದ್ದರು. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿರುವುದರಿಂದ ಕೇಂದ್ರ ಸರ್ಕಾರದಿಂದ ಚೇತರಿಕೆಯ ಹಾದಿ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ಹುಸಿಯಾಗಿದೆ.

ಲಾಕ್‍ಡೌನ್ ಪರಿಣಾಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಕೈಗಾರಿಕೆಗಳ ಪುನಶ್ಚೇತನದ ನಿರೀಕ್ಷೆಯೂ ಹುಸಿಯಾಗಿದೆ. ಆರ್ಥಿಕ ತಜ್ಞರು ನೀಡಿದ್ದ ಸಲಹೆಗಳನ್ನೂ ಕೇಂದ್ರ ಸರ್ಕಾರ ಗಾಳಿಗೆ ತೂರಿದೆ.

ಹೊಸದಾಗಿ ಕೃಷಿ ಸೆಸ್ ಘೋಷಣೆ ಮಾಡಲಾಗಿದೆ. ಎರಡೂವರೆ ಪರ್ಸೆಂಟ್‍ನಿಂದ ನೂರು ಪರ್ಸೆಂಟ್ ವರೆಗೆ ಸೆಸ್ ವಿಧಿಸಲಾಗಿದೆ. ಒಂದೆಡೆ ದೇಶಕ್ಕೆ ಬರುವ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಿ ಮತ್ತೊಂದೆಡೆ ಕೃಷಿ ಸೆಸ್ ವಿಧಿಸಲಾಗಿದೆ. ಕೃಷಿ ಉತ್ತೇಜನಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಜೆಟ್‍ನಲ್ಲಿ ತಿಳಿಸಲಾಗಿದೆ.

ಗೊಬ್ಬರ, ಸೇಬು, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳ ಮೇಲೆ ಸೆಸ್ ವಿಧಿಸಿ ಆಮದು ಸುಂಕ ಕಡಿಮೆ ಮಾಡಿರುವುದು ಯಾವ ಆರ್ಥಿಕತೆ ಎಂಬುದು ಅರ್ಥವಾಗಿಲ್ಲ. ಅದರ ಬದಲಿಗೆ ರೈತರಿಗೆ ಸಾಲ ವಿತರಿಸುವ ಕಾರ್ಯಕ್ರಮ ಘೋಷಣೆ ಮಾಡಬಹುದಾಗಿತ್ತು.

ಬಡ್ಡಿ ರಹಿತವಾಗಿ ರೈತರಿಗೆ ಸಾಲ ನೀಡುವ, ಸಾಲ, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ನಿರೀಕ್ಷೆ ರೈತರಿಗೆ ಇತ್ತು. ಅದು ಅವರ ಬಹು ದಿನಗಳ ಬೇಡಿಕೆಯಾಗಿತ್ತು. ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ವಸೂಲಿ ಮಾಡುವ ಕೃಷಿ ಸೆಸ್ ನ್ನು ರೈತರ ಕಲ್ಯಾಣಕ್ಕೆ ಖರ್ಚು ಮಾಡಲು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲ. ಕೃಷಿ ಪದಾರ್ಥಗಳ ಬೆಲೆ ಕುಸಿದಾಗ ಮಾರುಕಟ್ಟೆ ಮಧ್ಯೆ ಪ್ರವೇಶ ಮಾಡಿ ಬೆಂಬಲ ಬೆಲೆ ನೀಡುವ ಪ್ರಯತ್ನ ಆಗಿಲ್ಲ.

ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಿಮಾ ಕ್ಷೇತ್ರದಲ್ಲಿ ಶೇ. 74ರಷ್ಟು ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣವಾದರೆ ರೈತರಿಗೆ ಉಪಯೋಗ ಏನು ? ಕಡಿಮೆ ಬೆಲೆಗೆ ಅವರಿಗೆ ವಿದ್ಯುತ್ ನೀಡಲು ಸಾಧ್ಯವೇ ? ಖಾಸಗೀಕರಣದಿಂದ ವಿದ್ಯುತ್ ದರ ಹೆಚ್ಚಾಗುತ್ತದೆ. ಇದು ರೈತರು ಮತ್ತು ಸಾಮಾನ್ಯ ಜನರಿಗೆ ಹೊರೆ ಆಗುತ್ತದೆ. ವಿಮಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಾದರೆ ಇಡೀ ಕ್ಷೇತ್ರ ಖಾಸಗಿಯವರ ಕೈಗೆ ಹೋಗುತ್ತದೆ. ಆಗ ವಿಮೆಯಿಂದ ಯಾರಿಗೂ ಸಹಾಯ ಮಾಡಲು ಆಗದು.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಯಾವುದೇ ಪರಿಹಾರ ಬಜೆಟ್‍ನಿಂದ ಸಿಕ್ಕಿಲ್ಲ. ಚುನಾವಣೆ ನಡೆಯುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಿಗೆ ಹೆಚ್ಚು ಹಣ ನೀಡಲಾಗಿದೆ. ಮೆಟ್ರೋ ಯೋಜನೆಗೆ ತಮಿಳುನಾಡಿಗೆ 5.30 ಲಕ್ಷ ಸಾವಿರ ಕೋಟಿ, ಕರ್ನಾಟಕಕ್ಕೆ 14,780 ನೀಡಲಾಗಿದೆ. ಪ್ರತಿ ವರ್ಷ ಚುನಾವಣೆ ನಡೆಸಿದರೆ ನಮಗೂ ಹೆಚ್ಚಿನ ಅನುದಾನ ನೀಡಬಹುದು ಎಂಬ ಭಾವನೆ ನನ್ನದು ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.

ವಿತ್ತೀಯ ಕೊರತೆ ಶೇ. 3.5ಕ್ಕೆ ತರುವುದಾಗಿ ಹೇಳಲಾಗಿತ್ತು. ಈಗ ಶೇ. 9.7ಕ್ಕೆ ಹೋಗಿದೆ. ಇದರಿಂದ ಸಿಕ್ಕಾಪಟ್ಟೆ ಸಾಲ ಮಾಡಬೇಕಾಗುತ್ತದೆ. ನನ್ನ ಪ್ರಕಾರ ವಿತ್ತೀಯ ಕೊರತೆ ಶೇ.14-15 ಇದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಜಿಡಿಪಿ ಬೆಳವಣಿಗೆ ಕುಸಿಯುತ್ತಲೇ ಇದೆ. ಡಾ. ಮನಮೋಹನಸಿಂಗ್ ಅವರ ಅವಧಿಯಲ್ಲಿ ಇದ್ದಿದುಕ್ಕಿಂತ ಕಡಿಮೆಯಾಗುತ್ತಿದೆ.

ಈ ವರ್ಷ ಕೊರೊನಾ ಸಂಕಷ್ಟ ಎದುರಾಗಿತ್ತು. ಆದರೆ, ಕಳೆದ ವರ್ಷ ಏನಾಗಿತ್ತು. ನಿರುದ್ಯೋಗ ಪ್ರಮಾಣ ನಗರದಲ್ಲಿ ಶೇ.9.2. ಇದರಿಂದ ಯುವಕರಿಗೆ ಉದ್ಯೋಗ ಎಲ್ಲಿ ಸಿಗುತ್ತದೆ. ಅವರು ಪಕೋಡಾ ಮಾರಲು ಹೋಗಬೇಕಾಗುತ್ತದೆ. ಈ ವರ್ಷ ಜಿಡಿಪಿ ಬೆಳವಣಿಗೆ -7.7%.

2020-2021ನೇ ಸಾಲಿಗೆ ಜಿಡಿಪಿ ಬೆಳವಣಿಗೆಯನ್ನು ಶೇ. 11ಕ್ಕೆ ಏರಿಸುವುದಾಗಿ ಕೇಂದ್ರ ಘೋಷಣೆ ಮಾಡಿದೆ. ಇದು ನಂಬಲು ಸಾಧ್ಯವೇ ? ಇದು ಸುಳ್ಳಿನ ಕಂತೆ. ಅಂಕಿ-ಅಂಶಗಳನ್ನು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ.

ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಅಲ್ಪಸಂಖ್ಯಾತರು, ಪರಿಶಿಷ್ಟರಿಗೆ ಬಜೆಟ್‍ನಲ್ಲಿ ಯಾವುದೇ ಕಾರ್ಯಕ್ರಮಗಳು ಇಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. 80 ಕೋಟಿ ಮಂದಿಗೆ ಅಂದರೆ ಶೇ. 80ರಷ್ಟು ಮಂದಿಗೆ ಪಡಿತರ ಚೀಟಿ ಮೂಲಕ ಆಹಾರ ಧಾನ್ಯ ನೀಡಲಾಗುತ್ತಿದೆ. ಶಾಂತಕುಮಾರ್ ಅವರ ಸಮಿತಿ ವರದಿ ಜಾರಿಗೆ ತಂದರೆ ಶೇ.20ರಷ್ಟು ಮಂದಿ ಮಾತ್ರ ಪಡಿತರ ಮೂಲಕ ಆಹಾರ ಧಾನ್ಯ ಪಡೆಯಲು ಅರ್ಹರಾಗುತ್ತಾರೆ.

ರೈಲ್ವೆ ನಿಲ್ದಾಣ, ಬಂದರು, ವಿಮಾನ ನಿಲ್ದಾಣಗಳನ್ನು ಅಂಬಾನಿ, ಅಂದಾನಿ ಮತ್ತಿತರ ಬಂಡವಾಳಶಾಹಿಗಳಿಗೆ ಕೊಟ್ಟು ಕೇಂದ್ರ ಸರ್ಕಾರ ಕೈ ತೊಳೆದುಕೊಳ್ಳಲು ಹೊರಟಿದೆ. ದಕ್ಷತೆಯಿಂದ ನಡೆಸುವುದನ್ನು ಬಿಟ್ಟು ಬಂಡವಾಳ ಹಿಂತೆಗೆದುಕೊಂಡರೆ ಮೀಸಲು ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಖಾಸಗಿಯವರ ಬಳಿ ಮೀಸಲು ಸೌಲಭ್ಯ ಕೇಳಲು ಸಾಧ್ಯವೇ ? ಪರೋಕ್ಷವಾಗಿ ಮೀಸಲು ಸೌಲಭ್ಯ ತೆಗೆಯಲು ಸರ್ಕಾರ ಮುಂದಾಗಿದೆ. ಅಂಬಾನಿ, ಅದಾನಿ ಮೀಸಲು ಸೌಲಭ್ಯ ಕೊಡುವರೇ ?

ಮೀಸಲು ಸೌಲಭ್ಯಕ್ಕೆ ಒಂದೆಡೆ ಹೋರಾಟ ನಡೆಯುತ್ತಿದೆ. ಮತ್ತೊಂದೆಡೆ ಆ ಸೌಲಭ್ಯಕ್ಕೆ ಸರ್ಕಾರ ಕತ್ತರಿ ಹಾಕಲು ಹೊರಟಿದೆ. ಬಡವರಿಗೆ ಇರುವ ಸವಲತ್ತು ಕಸಿದುಕೊಂಡು ಅವರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುವ ಹುನ್ನಾರ ನಡೆದಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಕೈಯ್ಯಲ್ಲಿದೆ. ಹೀಗಾಗಿ ಬಡವರು, ರೈತರಿಗೆ ತೊಂದರೆ ನೀಡುವುದು ಕೇಂದ್ರ ಸರ್ಕಾರ ನಡೆಸುತ್ತಿರುವವರ ಉದ್ದೇಶವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.


bengaluru

LEAVE A REPLY

Please enter your comment!
Please enter your name here