ನೀರಿನ ಕಳ್ಳತನ ಹಾಗೂ ಸೋರಿಕೆ ತಡೆಗೆ ಎಐ ಮತ್ತು ರೋಬೋಟಿಕ್ ತಂತ್ರಜ್ಞಾನ ಬಳಕೆ; ಜಲಮಂಡಳಿಯ ಹೊಸ ಯೋಜನೆ
ಬೆಂಗಳೂರು, ಜೂನ್ 1: ನಗರದಲ್ಲಿ ನೀರಿನ ಕಳ್ಳತನ, ಪೈಪ್ಲೈನ್ ಸೋರಿಕೆ ಹಾಗೂ ಆದಾಯ ತರದ ನೀರಿನ (NRW) ನಷ್ಟವನ್ನು ತಗ್ಗಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೃತಕ ಬುದ್ಧಿಮತ್ತೆ (AI) ಹಾಗೂ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ನಗರದ ನೀರು ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಮತ್ತು ಭವಿಷ್ಯದ ನೀರಿನ ಸವಾಲುಗಳನ್ನು ಎದುರಿಸಲು ಜಲಮಂಡಳಿ ಒಂದು ವರ್ಷದ ಪ್ರಾಯೋಗಿಕ ಅಧ್ಯಯನ ಕೈಗೊಳ್ಳಲಿದ್ದು, ಈ ಯೋಜನೆ ಜಲಮಂಡಳಿಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ಅನುಷ್ಠಾನಗೊಳ್ಳಲಿದೆ. ಅಗತ್ಯವಿರುವ ಪೈಪ್ಲೈನ್ ದುರಸ್ತಿ, ಬದಲಾವಣೆ ಹಾಗೂ ಉತ್ಖನನ ಕಾಮಗಾರಿಗಳನ್ನು ಮಾತ್ರ ಜಲಮಂಡಳಿ ನಿರ್ವಹಿಸಲಿದೆ.
ಯೋಜನೆಯಡಿ ಎಐ ಆಧಾರಿತ ವಿಶ್ಲೇಷಣಾ ತಂತ್ರಜ್ಞಾನವನ್ನು ಬಳಸಿಕೊಂಡು ನೀರು ಸೋರಿಕೆಯಾಗುವ ಸಾಧ್ಯತೆ ಇರುವ ಹಾಗೂ ಅಪಾಯದಲ್ಲಿರುವ ಪೈಪ್ಲೈನ್ ವಿಭಾಗಗಳನ್ನು ಮುಂಚಿತವಾಗಿಯೇ ಗುರುತಿಸಲಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದ ನೀರಿನ ನಷ್ಟ ಉಂಟಾಗುವ ಮೊದಲು ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹರಿಸಲು ಸಾಧ್ಯವಾಗಲಿದೆ.
ಇದರ ಜೊತೆಗೆ ವಿಶೇಷ ರೋಬೋಟಿಕ್ ಸಾಧನಗಳನ್ನು ಪೈಪ್ಲೈನ್ಗಳ ಒಳಭಾಗಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತದೆ. ಈ ತಂತ್ರಜ್ಞಾನವು ಪೈಪ್ಗಳ ಒಳಗಿನ ದೋಷಗಳು, ಹಾನಿ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಲು ನೆರವಾಗಲಿದೆ.
ಭೂಮಿಯನ್ನು ಅಗೆಯದೇ ಶಬ್ದ ತರಂಗಗಳ ವಿಶ್ಲೇಷಣೆಯ ಮೂಲಕ ನೀರು ಸೋರಿಕೆಯಾಗುತ್ತಿರುವ ಸ್ಥಳಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನೂ ಬಳಸಲಾಗುತ್ತದೆ. ಇದರಿಂದ ಸೋರಿಕೆ ಪತ್ತೆ ಮತ್ತು ದುರಸ್ತಿ ಕಾರ್ಯಗಳು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪೂರ್ಣಗೊಳ್ಳಲಿವೆ.
ಈ ತಂತ್ರಜ್ಞಾನಗಳ ನೆರವಿನಿಂದ ನೀರು ಪೂರೈಕೆ ಜಾಲ, ಮೀಟರ್ ಕಾರ್ಯಕ್ಷಮತೆ, ಬಳಕೆ ಪ್ರಮಾಣ, ಸೋರಿಕೆಗಳಿಂದ ಉಂಟಾಗುವ ನಷ್ಟ ಹಾಗೂ ಆದಾಯದ ಮೇಲೆ ನಿರಂತರ ನಿಗಾ ಇಡಲು ಸಾಧ್ಯವಾಗಲಿದೆ. ಸಂಗ್ರಹವಾಗುವ ದತ್ತಾಂಶದ ಆಧಾರದ ಮೇಲೆ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನೀರಿನ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಜಲಮಂಡಳಿ ಉದ್ದೇಶಿಸಿದೆ.
ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರುವ ಯುವ ನವೋದ್ಯಮಗಳಿಗೆ ಜಲಮಂಡಳಿಯ ಮೂಲಸೌಕರ್ಯಗಳನ್ನು ಪರೀಕ್ಷಾ ವೇದಿಕೆಯಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ದತ್ತಾಂಶ ಆಧಾರಿತ ವೈಜ್ಞಾನಿಕ ವಿಧಾನಗಳು ಹಾಗೂ ಡಿಜಿಟಲ್ ಕಾರ್ಯವಿಧಾನಗಳು ಬೆಂಗಳೂರಿನ ನೀರು ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರಬಲ್ಲವು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಯೋಜನೆಗಾಗಿ ಆದ್ಯತೆಯ ಪ್ರದೇಶಗಳನ್ನು ಶೀಘ್ರದಲ್ಲೇ ಗುರುತಿಸಿ ಆರಂಭಿಕ ಸಮೀಕ್ಷೆ ಹಾಗೂ ಕ್ಷೇತ್ರಮಟ್ಟದ ಅಧ್ಯಯನ ಕೈಗೊಳ್ಳಲಾಗುತ್ತದೆ.
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ವಿ. ಅವರು ಮಾತನಾಡಿ, ನೀರಿನ ಕಳ್ಳತನ ಹಾಗೂ ಪೈಪ್ಲೈನ್ ಸೋರಿಕೆಯಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನು ತಗ್ಗಿಸುವುದು ಮತ್ತು ಪೈಪ್ಲೈನ್ ದೋಷಗಳಿಂದ ಉಂಟಾಗುವ ನೀರಿನ ಕಲುಷಿತತೆಯನ್ನು ತಡೆಯುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ನಗರದ ನೀರು ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿ, ಸುಸ್ಥಿರ ಹಾಗೂ ಜವಾಬ್ದಾರಿಯುತವಾಗಿಸಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
