Alert: ಕಾವೇರಿ 2ನೇ ಹಂತದ ಪೈಪ್ಲೈನ್ ತುರ್ತು ದುರಸ್ತಿ: ಮೈಸೂರು ರಸ್ತೆ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ನಾಳೆ ನೀರು ಸರಬರಾಜು ವ್ಯತ್ಯಯ
ಬೆಂಗಳೂರು, ಮೇ 29: ಕಾವೇರಿ 2ನೇ ಹಂತದ 600 ಮಿ.ಮೀ. ವ್ಯಾಸದ ಮುಖ್ಯ ಕುಡಿಯುವ ನೀರಿನ ಕೊಳವೆಯಲ್ಲಿ ಉಂಟಾಗಿರುವ ಭಾರೀ ಸೋರಿಕೆಯನ್ನು ತಡೆಗಟ್ಟಲು ಬೆಂಗಳೂರು ಜಲಮಂಡಳಿ (BWSSB) ಮೇ 30ರಂದು ತುರ್ತು ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ರಸ್ತೆ ಸೇವಾ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಈ ಕುರಿತು ಮಾಹಿತಿ ನೀಡಿದ್ದು, ಮೇ 30ರಂದು ಬೆಳಿಗ್ಗೆ 9 ಗಂಟೆಯಿಂದ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಸುಮಾರು 8 ಗಂಟೆಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಸೌತ್ ಎಂಡ್ ಸರ್ಕಲ್ ಮೂಲಕ ಮೈಸೂರು ರಸ್ತೆ ಸೇವಾ ಪ್ರದೇಶಗಳಿಗೆ ಪ್ರತಿದಿನ ಸುಮಾರು 14 ಎಂಎಲ್ಡಿ ಕುಡಿಯುವ ನೀರು ಪೂರೈಸುವ ಮುಖ್ಯ ಪೈಪ್ಲೈನ್ನಲ್ಲಿ, ಹನುಮಂತನಗರ ಪೊಲೀಸ್ ಕ್ವಾರ್ಟರ್ಸ್ ಎದುರಿನ ಭಾಗದಲ್ಲಿ ರಂಧ್ರ ಉಂಟಾಗಿ ಹೆಚ್ಚಿನ ಒತ್ತಡದಲ್ಲಿ ನೀರು ಸೋರಿಕೆಯಾಗುತ್ತಿದೆ.
ಈ ಸೋರಿಕೆಯಿಂದ ಅಪಾರ ಪ್ರಮಾಣದ ಶುದ್ಧ ಕುಡಿಯುವ ನೀರು ವ್ಯರ್ಥವಾಗುತ್ತಿರುವುದರ ಜೊತೆಗೆ, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಜಲಮಂಡಳಿ ತಿಳಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಅಮೂಲ್ಯ ಕುಡಿಯುವ ನೀರಿನ ಸಂರಕ್ಷಣೆಯ ಉದ್ದೇಶದಿಂದ ಸೌತ್ ಎಂಡ್ ರಸ್ತೆಯ ಸುರಾನ ಕಾಲೇಜು ಸಮೀಪದ 24 ಇಂಚಿನ ಕವಾಟವನ್ನು (Valve) 8 ಗಂಟೆಗಳ ಕಾಲ ಮುಚ್ಚಿ (Local Shutdown) ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಸರಬರಾಜು ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳು:
• ಕಸ್ತೂರಬಾ ನಗರ
• ಬಾಪೂಜಿನಗರ
• ಶಾಮಣ್ಣ ಗಾರ್ಡನ್
• ಮಂಜುನಾಥನಗರ
• ಹೊಸಗುಡ್ಡದಹಳ್ಳಿ
• ಹಳೇಗುಡ್ಡದಹಳ್ಳಿ
• ಅರಾಫತ್ ನಗರ
ತುರ್ತು ಕಾಮಗಾರಿಯಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಗಾಗಿ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ.
ದುರಸ್ತಿ ಕಾರ್ಯ ಪೂರ್ಣಗೊಂಡ ತಕ್ಷಣವೇ ಎಲ್ಲ ಪ್ರದೇಶಗಳಿಗೆ ಎಂದಿನಂತೆ ಸುಗಮವಾಗಿ ನೀರು ಸರಬರಾಜು ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿರುವ ಜಲಮಂಡಳಿ, ಸಾರ್ವಜನಿಕರು ಹಾಗೂ ಗ್ರಾಹಕರು ಸಹಕಾರ ನೀಡುವಂತೆ ಮನವಿ ಮಾಡಿದೆ.
