ಬೆಂಗಳೂರು: ನವೆಂಬರ್ 5ರ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ಹೋಬಳಿಯ ಹರಳಹಳ್ಳಿಯಲ್ಲಿ ಒಟ್ಟು ₹26.10 ಕೋಟಿ ವೆಚ್ಚದಲ್ಲಿ ನೂತನ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಂಪುಟ ತೀರ್ಮಾನಗಳ ಟಿಪ್ಪಣಿ ತಿಳಿಸಿದೆ.
ಆಯವ್ಯಯ ಘೋಷಣೆಯಂತೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಸಂಪನ್ಮೂಲದಿಂದ ಈ ವಸಾಹತುಗಳನ್ನು ನಿರ್ಮಿಸಲಾಗುವುದು. ಸ್ಥಳೀಯ ಕೈಗಾರಿಕೋದ್ಯಮಿಗಳಿಗೆ ಸಣ್ಣ ಕೈಗಾರಿಕೆ ಆರಂಭಿಸಲು ಹಾಗೂ ಯುವ ಸಣ್ಣ ಕೈಗಾರಿಕೋದ್ಯಮಿಗಳನ್ನು ಉತ್ತೇಜಿಸಲು, ಉದ್ಯೋಗಾವಕಾಶ ಮತ್ತು ಕೌಶಲ್ಯಾಭಿವೃದ್ಧಿಗೆ ಹಾಗೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ಇವುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಟಿಪ್ಪಣಿ ಹೇಳಿದೆ.
