ಬೆಂಗಳೂರು: ನವೆಂಬರ್ 5ರ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆಗಳ ₹28.01 ಕೋಟಿ ವೆಚ್ಚದ ಸಮಗ್ರ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದೆ ಎಂದು ಸಂಪುಟ ತೀರ್ಮಾನಗಳ ಟಿಪ್ಪಣಿ ತಿಳಿಸಿದೆ.
ರಾಜ್ಯ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಹಾಗೂ ಅವುಗಳನ್ನು ಜನರಿಗೆ ತಲುಪಿಸಲು ಐಇಸಿ ಚಟುವಟಿಕೆ ಅಗತ್ಯ ಎಂದು ಟಿಪ್ಪಣಿ ಹೇಳಿದೆ. ವಿವಿಧ ಮಾಧ್ಯಮಗಳ ಮೂಲಕ ಜನರನ್ನು ತಲುಪಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಾಹೀರಾತು ನೀತಿ 2013ರ ಅನ್ವಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
