ಕಲಬುರಗಿ/ಬೆಂಗಳೂರು:
ಕಲಬುರಗಿ, ಸೆಪ್ಟೆಂಬರ್ 17: ಕಾವೇರಿ ನೀರು ವಿಚಾರವಾಗಿ ಯಡಿಯೂರಪ್ಪ ನವರ ಹೇಳಿಕೆ ರಾಜಕೀಯವಾಗಿ ಪ್ರೇರಿತ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದರು.
ನೀರು ಬಿಡಲು ನಮ್ಮ ಬಳಿ ನೀರಿಲ್ಲ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಿದ್ದು, ನ್ಯಾಯಾಲಯ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದೆ. ನೀರು ಬಿಡಬೇಕೆಂದಿದ್ದರೂ ನಮಗೆ 106 ಟಿ. ಎಂ. ಸಿ ನೀರಿನ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ. ಕುಡಿಯುವ ನೀರಿಗೆ 30 ಟಿಎಂಸಿ, ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಮತ್ತು ಕೈಗಾರಿಕೆಗಳಿಗೆ 3 ಟಿಎಂಸಿ ಅಗತ್ಯ. ಒಟ್ಟು 106 ಟಿಎಂಸಿ ನಮಗೆ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ ನೀರು. ನೀರು ಕೊಡಲು ನಮ್ಮ ಬಳಿ ನೀರಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಯಡಿಯೂರಪ್ಪ ಅವರ ಕಾಲದಲ್ಲಿ ಹಾಗೂ ಎಲ್ಲರ ಕಾಲದಲ್ಲಿ ಬಿಡಲಾಗಿದೆ.
ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ಬಿಡಲಾಗುತ್ತದೆ. ಈವರೆಗೆ 37.7 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವು ಬಿಡಬೇಕಿದ್ದುದ್ದು 99 ಟಿಎಂಸಿ ನೀರು. ಎಲ್ಲಿ ನೀರು ಬಿಟ್ಟಿದ್ದೇವೆ ಎಂದು ಮರು ಪ್ರಶ್ನಿಸಿದರು.
ಕಾವೇರಿ ನೀರು ನಿಯಂತ್ರಣ ಸಮಿತಿ 5000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಸೂಚಿಸಿದೆ. ಅಷ್ಟು ನೀರು ಇಲ್ಲದಿರುವುದರಿಂದ ನಾವು ನೀರು ಬಿಟ್ಟಿಲ್ಲ ಎಂದರು.