ಬಿಸಿಯೂಟ ನೌಕರರ ಕನಿಷ್ಠ ವೇತನ ಹೆಚ್ಚಳಕ್ಕೆ ಬೆಂಬಲ; ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುವ ಭರವಸೆ ನೀಡಿದ ಮಧು ಬಂಗಾರಪ್ಪ
ಬೆಂಗಳೂರು, ಆಗಸ್ಟ್ 20: ಬಿಸಿಯೂಟ ನೌಕರರ ಕನಿಷ್ಠ ವೇತನ ಹೆಚ್ಚಳದ ಬೇಡಿಕೆಗೆ ಬೆಂಬಲ ನೀಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದು, ಅವರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರನ್ನು ಸಚಿವರು ವಿಧಾನಸೌಧದ ತಮ್ಮ ಕಚೇರಿಗೆ ಕರೆಸಿ ಸಮಾಲೋಚನೆ ನಡೆಸಿದರು.
ಯೂನಿಯನ್ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಅವರು ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ನೀಡಲಾಗುವ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.
ಕನಿಷ್ಠ ವೇತನ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ತಾವೂ ಅದರ ಸದಸ್ಯರಾಗಿರುವುದಾಗಿ ಬಂಗಾರಪ್ಪ ತಿಳಿಸಿದರು. ಬಿಸಿಯೂಟ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದ್ದು, ಸರ್ಕಾರದ ನಿಯಮಗಳ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ನೆರವು ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬಿಸಿಯೂಟ ನೌಕರರು ಸರ್ಕಾರದ ವ್ಯವಸ್ಥೆಯ ಭಾಗವಾಗಿದ್ದು, ಶಾಲಾ ಮಕ್ಕಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಮಗನಾಗಿ ಬಿಸಿಯೂಟ ನೌಕರರಿಗೆ ಸಹಾಯ ಮಾಡಲು ಸಿದ್ಧನಿದ್ದೇನೆ ಮತ್ತು ಅವರ ಪರವಾಗಿ ಸದಾ ಜೊತೆಗಿರುವುದಾಗಿ ಅವರು ತಿಳಿಸಿದರು.
ವಿವಿಧ ರಾಜ್ಯಗಳಲ್ಲಿ ಬಿಸಿಯೂಟ ನೌಕರರಿಗೆ ಎಷ್ಟು ವೇತನ ನೀಡಲಾಗುತ್ತಿದೆ, ಯಾವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳು ಎಷ್ಟು ಇಡುಗಂಟು ನೀಡುತ್ತಿವೆ ಹಾಗೂ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ಸಚಿವರು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳಿಂದ ಪಡೆಯುವ ಮಾಹಿತಿ ಮತ್ತು ಯೂನಿಯನ್ನ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ಬಂಗಾರಪ್ಪ ಹೇಳಿದರು. ಕಳೆದ ದೀಪಾವಳಿ ಸಂದರ್ಭದಲ್ಲಿ ಹಬ್ಬ ಆಚರಿಸಲು ಬಿಸಿಯೂಟ ನೌಕರರಿಗೆ ಮುಂಚಿತವಾಗಿ ಹಣ ಬಿಡುಗಡೆ ಮಾಡಿದ್ದನ್ನೂ ಅವರು ಸ್ಮರಿಸಿದರು.
ದೂರದ ಊರುಗಳಿಂದ ಬಂದು ದುಡಿಮೆಯ ಹಣ ಖರ್ಚು ಮಾಡಿಕೊಂಡು ಪ್ರತಿಭಟನೆ ನಡೆಸಬೇಡಿ, ಸಮಸ್ಯೆಗಳಿದ್ದರೆ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಸಚಿವರು ನೌಕರರಿಗೆ ತಿಳಿಸಿದರು.
ಎಲ್ಲ ಮಹಿಳಾ ಬಿಸಿಯೂಟ ನೌಕರರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ನೀಡಬೇಕು ಎಂದು ನಿಯೋಗ ಸಚಿವರಿಗೆ ಮನವಿ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಬಂಗಾರಪ್ಪ, ಗೃಹಲಕ್ಷ್ಮಿ ಸೌಲಭ್ಯವನ್ನು ಬಿಸಿಯೂಟ ನೌಕರರಿಗೆ ವಿಸ್ತರಿಸುವ ಬೇಡಿಕೆಯನ್ನು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ತಿಳಿಸಿದರು. ಸಾಧ್ಯತೆ ಇದ್ದರೆ ಸೌಲಭ್ಯ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ನಿಯೋಗದಲ್ಲಿ ಯೂನಿಯನ್ ಕಾರ್ಯದರ್ಶಿ ಕಲ್ಪನಾ ವಿ.ಜಿ., ಖಜಾಂಚಿ ಪುಷ್ಪಲತಾ, ಸದಸ್ಯರಾದ ನಿರ್ಮಲಾ ರಾಮನಗರ, ಉಮಾದೇವಿ ಮತ್ತು ರಾಜೇಶ್ವರಿ ಪಾಟೀಲ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
