ಬೆಂಗಳೂರು:
ರಾಸಲೀಲೆ ಸಿಡಿ ಪ್ರಕರಣದ ತನಿಖೆಯಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ. ವಿಡಿಯೋದಲ್ಲಿರುವ ಸಂತ್ರಸ್ತೆ ಯುವತಿಯನ್ನು ಇದುವರೆಗೂ ಪತ್ತೆಹಚ್ಚಿಲ್ಲ. ಸತ್ಯಾಂಶ ಹೊರಬರಬೇಕಾದರೆ ಎಸ್‌ಐಟಿ ಬದಲಿಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಸಿ.ಡಿ. ಹೊರಬಿದ್ದು 20 ದಿನಗಳು ಕಳೆಯುತ್ತ ಬಂದಿದೆ. ಇದುವರೆಗೂ ಆ ಯುವತಿಗೆ ರಕ್ಷಣೆ ನೀಡುವ ಕೆಲಸ ಪೊಲೀಸರು ಮಾಡಿಲ್ಲ. ನಿರ್ಭಯ ಪ್ರಕಣದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿದೆ. ಇದುವರೆಗೂ ಏಕೆ ಪೊಲೀಸರು ದೂರು ದಾಖಲು ಮಾಡಿಕೊಳ್ಳಲಿಲ್ಲ ಎಂದು ಕಿವಿ ಹಿಂಡಿದರು.
ಯುವತಿ ಎಲ್ಲಿದ್ದಾಳೆ ಎಂಬುದನ್ನುಇನ್ನೂ ಪತ್ತೆಹಚ್ಚಲು ಆಗಲಿಲ್ಲ ಎಂದರೆ ಹೇಗೆ? ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲಿಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಹೇಳಿದರು.
ಇನ್ನೂ ಕೋರ್ಟ್ ಮೊರೆ ಹೋಗಿರುವ ಆರು ಸಚಿವರು ಅಧಿಕಾರದಲ್ಲಿ ಇರಲು ಯೋಗ್ಯರಲ್ಲ. ಅವರನ್ನೇ ಅವರು ರಕ್ಷಣೆ ಮಾಡಿಕೊಳ್ಳಲಿಲ್ಲವೆಂದರೆ ಇನ್ನೂ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ. ಕುಂಬಳ್ಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಂಡಂತೆ ಎಂದು ಗೇಲಿ ಮಾಡಿದರು.
ಈಗ ಕೋರ್ಟ್ ಗೆ ಹೋಗಿರುವ ಆರು ಮಂದಿ ಸಚಿವರು ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಸಚಿವರಾಗಿರಲು ಯೋಗ್ಯರಲ್ಲ. ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು,ತನಿಖಾ ವರದಿಯಲ್ಲಿ ಅವರು ನಿರ್ದೋಶಿಯೆಂದು ಸಾಬೀತಾದ ಬಳಿಕ ವಾಪಸ್ ಸಂಪುಟಕ್ಕೆ ಬರಲಿ ಎಂದು ಒತ್ತಾಯಿಸಿದರು.
ಈ ಪ್ರಕರಣದ ಸಂತ್ರಸ್ತೆ, ನೌಕರಿ ಕೆಲಸ ಕೊಡಿಸುವುದಾಗಿ ಹೇಳಿ ತನ್ಮನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡು ವಂಚಿಸಿದ್ದಾಗಿ ಹೇಳಿಕೊಂಡಿದ್ದಾಳೆ ಎಂದು ಹೇಳಿದರು.
ಸಂತ್ರಸ್ತೆಯ ವಿಡಿಯೋ ಬಂದ ಬಳಿಕ ತಕ್ಷಣವೇ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಬೇಕು.ಇದುವರೆಗೆ ಪೊಲೀಸರು ಸಂತ್ರಸ್ತೆಯ ಪರವಾಗಿ ದೂರು ದಾಖಲಿಸಿಕೊಂಡಿಲ್ಲ.ಈ ಸಂಬಂಧ ಪೊಲೀಸರ ಮೇಲೆ ನಿರ್ಲಕ್ಷದ ಕ್ರಮ ಜರುಗಿಸಬಹುದು.ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರುವುದು ರಮೇಶ್ ಜಾರಕಿಹೊಳಿ ಪರವಾಗಿ.ನಿರ್ಭಯಾ ಕೇಸ್ ಕಾಯ್ದೆ ಪ್ರಕಾರ ಇದು ಕಾನೂನಿಗೆ ವಿರುದ್ದವಾದುದು.ಈ ಹಂತದಲ್ಲಿ ಪೊಲೀಸರೂ ತಪ್ಪಿತಸ್ಥರಾಗುತ್ತಾರೆ.
ರಮೇಶ್ ಜಾರಕಿಹೊಳಿಗೆ ಒಂದು ನ್ಯಾಯ,ಸಂತ್ರಸ್ತೆಗೆ ಇನ್ನೊಂದು ನ್ಯಾಯವೇಕೆ ? ರಮೇಶ್ ಜಾರಕಿಹೊಳಿ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಸಂತ್ರಸ್ತೆಗೆ ಅನ್ಯಾಯವಾಗಿದೆ ಎಂದು ಪ್ರತಿಪಾದಿಸಿದರು.
ಇಡೀ ಪ್ರಕರಣದ ತನಿಖೆ ಷಡ್ಯಂತ್ರ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ದಿಕ್ಕಿನಲ್ಲಿ ಸಾಗುತ್ತಿದೆಯೆ ಹೊರತು ಸಂತ್ರಸ್ತೆಗೆ ನ್ಯಾಯಕೊಡಿಸುವ ದಿಕ್ಕಿನಲ್ಲಿ ಸಾಗುತ್ತಿಲ್ಲ. ಹಾಗಾಗಿ ಈ ಸಂಬಂಧ ಕರ್ತವ್ಯಲೋಪ ಎಸಗಿರುವ ಪೊಲೀಸರ ಮೇಲು ಕ್ರಮ ಆಗಬೇಕು. ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯವರ ನೇತೃತ್ವದ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಒಳಪಡಿಸಬೇಕೆ ಹೊರತು ಎಸ್ ಐಟಿ ತನಿಖೆಯಿಂದಲ್ಲ. ಜತೆಗೆ ನ್ಯಾಯಾಲಯಕ್ಕೆ ಹೋಗಿರುವ ಆರು ಸಚಿವರಿಗೆ 19 ಸಿಡಿಗಳ ಮಾಹಿತಿ ಇದೆ. ಹಾಗಾಗಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಅಡಳಿತ ಪಕ್ಷದ ಶಾಸಕ ಯತ್ನಾಳ್ ಕೂಡ ಸಿಡಿ ವಿಷಯ ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿಯವರಿಗೆ ಯಾವುದೋ ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಈ ಪ್ರಕರಣದಲ್ಲಿ ಐದು ಕೋಟಿ ರು ವೆಚ್ಚವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ 20-40 ಕೋಟಿ ಎನ್ನುತ್ತಾರೆ. ಅವರನ್ನು ವಿಚಾರಣೆ ಮಾಡಿ. ಪ್ರಕರಣವನ್ನು ಇಡಿ ತನಿಖೆಗೆ ಒಪ್ಪಿಸಿ. ಹೆಚ್.ವಿಶ್ವನಾಥ್, ಯತ್ನಾಳ್ ಅವರಂತಹಾ ಗೌರವಾನ್ವಿತರು ಹೇಳಿಕೆ ಕೊಟ್ಟಿದ್ದಾರೆ. ಆ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಇವತ್ತು ಯಾವ ಕುಟುಂಬ ವರ್ಗದವರು ರಾಜಕಾರಣಿಗಳನ್ನು ಕರೆದು ಊಟ ಹಾಕುವ ಪರಿಸ್ಥಿತಿ ಇಲ್ಲ. ಇಡೀ ರಾಜಕಾರಣಕ್ಕೆ ಇದೊಂದು ಕಪ್ಪುಚುಕ್ಕೆ. ಹಿಂದೆಯೂ ಹಲವಾರು ಪ್ರಕರಣಗಳು ಸ್ಟಿಂಗ್ ಆಪರೇಷನ್ ಗಳು, ಪೋನ್ ಟ್ಯಾಪಿಂಗ್ ಹಗರಣಗಳು ಆಗಿವೆ. ಯಡಿಯೂರಪ್ಪ ಸೇರಿ ಹಲವಾರು ಜನ ಜಾಮೀನು ಪಡೆದ ಪ್ರಕರಣಗಳು ಆಗಿವೆ. ನಮಗೂ ಪ್ರತಿಪಕ್ಷದವರಿಗೂ ಹಲವಾರು ಮೂಲಗಳಿಂದ ಮಾಹಿತಿ ಬರುತ್ತಿರುತ್ತದೆ. ಈ ವಿಡಿಯೋ ಇದೆಯೋ ಇಲ್ಲವೋ, ಮಾರ್ಫಿಂಗ್ ಆಗಿದೆಯೋ ಇಲ್ಲವೋ, ಎಡಿಟಿಂಗ್ ಆಗಿದೆಯೋ ಇಲ್ಲವೋ ಇವಿಷ್ಟನ್ನು ತನಿಖೆ ಮಾಡಿ ತಿಳಿದುಕೊಂಡರೆ ಸಾಕು, ಸೈಬರ್ ಕ್ರೈಂ ನಲ್ಲಿ ಹಲವಾರು ವಿಂಗ್ ಗಳಿವೆ. ಈ ಸಿಡಿ ನಿಜವೋ ಸುಳ್ಳೋ ತನಿಖೆಯಾಗಲಿ.ಆ ಹೆಣ್ಣುಮಗಳ ಮೇಲೆ ಅತ್ಯಾಚಾರವಾಗಿದೆಯಾ, ಆಕೆಯ ಸಮ್ಮತಿ ಇತ್ತಾ, ಬ್ಲಾಕ್ ಮೇಲ್ ಮಾಡಿದ್ದಾರಾ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.