ನವೆಂಬರ್ 25ರಂದು ಕರ್ನಾಟಕ ರಾಜ್ಯ ಫುಟ್‌ಬಾಲ್ ಸ್ಟೇಡಿಯಂನಲ್ಲಿ ಬೀದಿದೀಪ ದುರಸ್ತಿ ಸಿಬ್ಬಂದಿ ಮತ್ತು ಲ್ಯಾಡರ್ ವಾಹನಗಳೊಂದಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು. ಚಿತ್ರ: ಬೆಂಗಳೂರು ಕೇಂದ್ರ ನಗರ ಪಾಲಿಕೆ
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಾತ್ರಿ ವೇಳೆಯಲ್ಲಿಯೂ ಸುರಕ್ಷಿತ ಹಾಗೂ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎಲ್ಲಾ ರಸ್ತೆಗಳಲ್ಲಿ ಬೀದಿದೀಪಗಳು ಶೇ.100ರಷ್ಟು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ಪಾಲಿಕೆಯ ಆಯುಕ್ತ ಜಗದೀಶ್ ಜಿ. ಅವರು ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಈ ಕುರಿತು ನಿರಂತರವಾಗಿ ಸಭೆಗಳನ್ನು ನಡೆಸಿದ ನಂತರ, ನವೆಂಬರ್ 25ರಂದು ನಗರದ ಕರ್ನಾಟಕ ರಾಜ್ಯ ಫುಟ್‌ಬಾಲ್ ಸ್ಟೇಡಿಯಂನಲ್ಲಿ ಆಯುಕ್ತ ಜಗದೀಶ್ ಜಿ. ಹಾಗೂ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ ಅವರು ವಿದ್ಯುತ್ ವಿಭಾಗದಲ್ಲಿ ವಿಭಾಗವಾರು ಲಭ್ಯವಿರುವ ವಾಹನಗಳು, ದುರಸ್ತಿ ಉಪಕರಣಗಳು ಹಾಗೂ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಪರಿಶೀಲಿಸಿ ಸೂಚನೆ ನೀಡಿದರು. ಬೀದಿದೀಪಗಳಿಗೆ ಸಂಬಂಧಿಸಿದ ದೂರುಗಳು ಸ್ವೀಕೃತವಾದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಯಾವುದೇ ವಿಳಂಬವಿಲ್ಲದೆ ಸ್ಪಂದಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿದ್ಯುತ್ ವಿಭಾಗದಲ್ಲಿ ಬೀದಿದೀಪಗಳ ನಿರ್ವಹಣೆ ಹಾಗೂ ದುರಸ್ತಿ ಕಾರ್ಯಕ್ಕಾಗಿ ಒಟ್ಟು 17 ಲ್ಯಾಡರ್ ವಾಹನಗಳು, 17 ಮಂದಿ ವಾಹನ ಚಾಲಕರು ಹಾಗೂ ತಾಂತ್ರಿಕ ಪರಿಣತಿ ಹೊಂದಿರುವ 24 ಮಂದಿ ಎಲೆಕ್ಟ್ರಿಷಿಯನ್‌ಗಳು ಸೇರಿದಂತೆ ಒಟ್ಟು 41 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ದುರಸ್ತಿ ವಾಹನಗಳಲ್ಲಿ ಅಗತ್ಯ ಪ್ರಮಾಣದ ಲೈಟ್‌ಗಳು, ಬಲ್ಬ್‌ಗಳು ಹಾಗೂ ಇತರೆ ದುರಸ್ತಿ ಸಾಮಗ್ರಿಗಳನ್ನು ಸದಾ ದಾಸ್ತಾನು ಇರಿಸಿಕೊಳ್ಳಬೇಕು. ಸಾಮಗ್ರಿಗಳ ಕೊರತೆಯಿಂದ ಯಾವುದೇ ಕಾಮಗಾರಿಯೂ ವಿಳಂಬವಾಗಬಾರದು ಎಂದು ಸೂಚಿಸಿದರು.
ಬೀದಿದೀಪಗಳ ನಿರ್ವಹಣೆಯ ಗುತ್ತಿಗೆದಾರರು ವಾರಕ್ಕೆ ಕನಿಷ್ಠ ಎರಡು ಬಾರಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಬೇಕು. ಬೀದಿದೀಪಗಳ ಬೆಳಕಿಗೆ ಅಡ್ಡಿಯಾಗುವ ಮರದ ರೆಂಬೆ-ಕೊಂಬೆಗಳು ಕಂಡುಬಂದಲ್ಲಿ ಅರಣ್ಯ ವಿಭಾಗದೊಂದಿಗೆ ಸಮನ್ವಯ ಸಾಧಿಸಿ ಅವುಗಳನ್ನು ತೆರವುಗೊಳಿಸಬೇಕು. ಯಾವುದೇ ಬೀದಿದೀಪ ದುರಸ್ತಿಗೆ ಒಳಪಟ್ಟಿರುವುದು ಕಂಡುಬಂದಲ್ಲಿ ತಕ್ಷಣವೇ ದುರಸ್ತಿ ಕಾರ್ಯ ಕೈಗೊಂಡು, ಎಲ್ಲಾ ರಸ್ತೆಗಳಲ್ಲಿ ಸಮರ್ಪಕ ಬೆಳಕು ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ವಿದ್ಯುತ್ ವಿಭಾಗದ ಕಾರ್ಯಾಚರಣೆಗೆ ನಿಯೋಜಿಸಿರುವ ಎಲ್ಲಾ ವಾಹನಗಳ ಮೇಲೆ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಹಾಗೂ ‘ಬೆಂಗಳೂರು ಕೇಂದ್ರ ನಗರ ಪಾಲಿಕೆ’ ಎಂಬ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಸಾರ್ವಜನಿಕರು ಹಾಗೂ ಪೊಲೀಸ್ ಮತ್ತು ಸಂಚಾರ ಪೊಲೀಸ್ ಸಿಬ್ಬಂದಿಗೆ ಪಾಲಿಕೆಯ ಅಧಿಕೃತ ವಾಹನಗಳನ್ನು ಗುರುತಿಸಲು ಅನುಕೂಲವಾಗಲಿದೆ. ದುರಸ್ತಿ ಹಾಗೂ ಬದಲಾವಣೆ ಕಾರ್ಯದಲ್ಲಿ ಉತ್ತಮ ಗುಣಮಟ್ಟದ ಲೈಟ್‌ಗಳು ಮತ್ತು ಅಗತ್ಯ ವಿದ್ಯುತ್ ಉಪಕರಣಗಳನ್ನು ಮಾತ್ರ ಬಳಸಬೇಕು. ಅಳವಡಿಸುವ ಬೀದಿದೀಪಗಳು ದೀರ್ಘಕಾಲ ಬಾಳಿಕೆ ಬರುವಂತಿರಬೇಕು ಹಾಗೂ ರಸ್ತೆಗೆ ಸಮರ್ಪಕ ಬೆಳಕು ನೀಡುವಂತಿರಬೇಕು ಎಂದು ಸೂಚಿಸಿದರು.
ದುರಸ್ತಿ ಹಾಗೂ ಹೊಸ ಲೈಟ್‌ಗಳ ಅಳವಡಿಕೆ ಕಾರ್ಯವನ್ನು ಸೂಕ್ತ ತಾಂತ್ರಿಕ ಪರಿಣತಿ ಹೊಂದಿರುವ ಎಲೆಕ್ಟ್ರಿಷಿಯನ್‌ಗಳು ಮಾತ್ರ ಕೈಗೊಳ್ಳಬೇಕು. ವಿದ್ಯುತ್ ಸಂಬಂಧಿತ ಕೆಲಸಗಳನ್ನು ನಿರ್ವಹಿಸುವಾಗ ಕೈಗವಸು, ಸುರಕ್ಷತಾ ಬೆಲ್ಟ್, ಹೆಲ್ಮೆಟ್ ಸೇರಿದಂತೆ ಇತರೆ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸಬೇಕು. ವಿದ್ಯುತ್ ಸಂಪರ್ಕವನ್ನು ಸುರಕ್ಷಿತವಾಗಿ ಸ್ಥಗಿತಗೊಳಿಸಿದ ನಂತರವೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಸಿಬ್ಬಂದಿಯ ವೈಯಕ್ತಿಕ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ದೂರು ಪರಿಹಾರದ ನಂತರ ಕೈಗೊಂಡ ಕಾರ್ಯದ ಛಾಯಾಚಿತ್ರಗಳನ್ನು ತೆಗೆದು, ಕಾರ್ಯ ಪೂರ್ಣಗೊಂಡಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಬೀದಿದೀಪಗಳ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿಯೂ ಸಮರ್ಪಕ ಬೆಳಕು ಲಭ್ಯವಾಗುವಂತೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆದಾರರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಗದೀಶ್ ಜಿ. ತಿಳಿಸಿದರು.
ಇದನ್ನೂ ಓದಿ:
