ಬೆಂಗಳೂರು:
ಕಾಂಗ್ರೆಸ್‍ನ ಆರು ದಶಕಗಳ ಆಡಳಿತಾವಧಿಯಲ್ಲಿ ಹಗರಣ, ಭ್ರಷ್ಟಾಚಾರಗಳ ಉದ್ದದ ಪಟ್ಟಿಯೇ ಸಿಗುತ್ತದೆ. ಆದರೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 7 ವರ್ಷಗಳಲ್ಲಿ ದಕ್ಷ, ಭ್ರಷ್ಟಾಚಾರರಹಿತ ಹಾಗೂ ಸರ್ವತೋಮುಖ ಅಭಿವೃದ್ಧಿಯ ಆಡಳಿತ ನೀಡಲಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದರು.
ಜನಾಶೀರ್ವಾದ ಯಾತ್ರೆ ಸಂಬಂಧ ಮಂಗಳೂರಿನ ದಿ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಇಂದು ಏರ್ಪಡಿಸಿದ್ದ ಸಭೆಯಲ್ಲ್ಲಿ ಮಾತನಾಡಿದ ಅವರು, 75ನೇ ವರ್ಷದ ಸ್ವಾತಂತ್ರ್ಯೋತ್ಸವದ ವೇಳೆ ಆತ್ಮಾವಲೋಕನಕ್ಕೆ ಸಕಾಲ ಎದುರಾಗಿದೆ. ಸುಮಾರು ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆ ಮತ್ತು ಕಳೆದ ಏಳು ವóರ್ಷಗಳಲ್ಲಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಗಿರುವ ಸರ್ವತೋಮುಖ ಅಭಿವೃದ್ಧಿ ನಡುವೆ ಹೋಲಿಸಿ ನೋಡಬೇಕಿದೆ ಎಂದು ಅವರು ನುಡಿದರು.
ಸ್ವಾತಂತ್ರ್ಯೋತ್ಸವದ ನಂತರ ಕಾಂಗ್ರೆಸ್ ಆಡಳಿತದಲ್ಲಿ ಪೋಲಿಯೋ ಲಸಿಕೀಕರಣಕ್ಕೆ ದಶಕಕ್ಕೂ ಹೆಚ್ಚು ಅವಧಿ ಬೇಕಾಯಿತು. ಆದರೆ, ದೇಶದ ಎಲ್ಲರಿಗೂ ಕೋವಿಡ್ ಲಸಿಕೆ ಕಾರ್ಯ ಅತ್ಯಲ್ಪ ಅವಧಿಯಲ್ಲಿ ನಡೆಯುವ ಭರವಸೆ ಲಭಿಸಿದೆ. 2014ರ ವರೆಗಿನ ಒಂದು ದಶಕದ ಯುಪಿಎ ಆಡಳಿತದಲ್ಲಿ ದೇಶದ ಉತ್ಪಾದನಾ ಕ್ಷೇತ್ರವು ನಾಶವಾಯಿತು. 2014ರಲ್ಲಿ ದೇಶದ ಒಟ್ಟು ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯು 1.9 ಲಕ್ಷ ಕೋಟಿ ಇತ್ತು. 2020ರಲ್ಲಿ ಅದು 5.33 ಲಕ್ಷ ಕೋಟಿಗೆ ಏರಿದೆ. ಉತ್ಪಾದನೆ ಕ್ಷೇತ್ರದಲ್ಲಿ ಚೀನಾ ಬದಲು ಭಾರತ ಮುಂಚೂಣಿ ನೆಲೆಯಲ್ಲಿದೆ. ಇದು ನಮ್ಮ ಸಾಧನೆ ಎಂದ ಅವರು, ಈ ಎಲ್ಲ ಸಾಧನೆಗಳ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಲು ಮನವಿ ಮಾಡಿದರು.
ಈಗ ಮಧ್ಯವರ್ತಿಗಳಿಲ್ಲದೆ ಹಾಗೂ ಭ್ರಷ್ಟಾಚಾರ ಇಲ್ಲದೆ ಫಲಾನುಭವಿಗೆ ನೇರವಾಗಿ ಅನುದಾನ- ಸೌಕರ್ಯಗಳು ಲಭಿಸುತ್ತಿವೆ. ಆದರೆ, ಹಿಂದೆ ಅನುದಾನದ ಒಂದು ರೂಪಾಯಿಯಲ್ಲಿ 85 ಪೈಸೆ ಭ್ರಷ್ಟರ ಪಾಲಾಗುತ್ತಿತ್ತು ಎಂದು ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಅವರು ಸ್ವತಃ ಹೇಳಿದ್ದರು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದರು.
ರಾಷ್ಟ್ರವು ಸೂಪರ್ ಪವರ್ ಆಗಲು ಮುಂದಿನ 25 ವರ್ಷಗಳ ಕಾಲ ಬಿಜೆಪಿ ಸರಕಾರ ದೇಶವನ್ನು ಆಳ್ವಿಕೆ ಮಾಡಬೇಕಿದೆ. ಬಿಜೆಪಿಯ ಬದ್ಧತೆಯಿಂದ ದೇಶವು ಸೂಪರ್ ಪವರ್ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತವು ವಿಶ್ವವಂದ್ಯ ರಾಷ್ಟ್ರವಾಗಿ ಅಭಿವೃದ್ಧಿ ಕಾಣುತ್ತಿರುವುದನ್ನು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅವರು ಸಂಸತ್ ಅಧಿವೇಶನ ನಡೆಯದಂತೆ ನೋಡಿಕೊಂಡರು. ಅಲ್ಲದೆ, ಸಭಾತ್ಯಾಗ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದತಿ, ಧಾರ್ಮಿಕ ನಂಬಿಕೆಯ ಪ್ರತೀಕವಾದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. 1947ರಿಂದ ಆಗಾಗ ಭಯೋತ್ಪಾದನಾ ದಾಳಿಗಳು ನಡೆದಿದ್ದವು. 1962ರಲ್ಲಿ ಚೀನಾ ದಾಳಿಮಾಡಿ ನಮ್ಮ ಸ್ಥಳವನ್ನು ವಶಕ್ಕೆ ಪಡೆದಿತ್ತು. ಆದರೆ, ಶ್ರೀ ನರೇಂದ್ರ ಮೋದಿ ನೇತೃತ್ವದ ಕಳೆದ 7 ವರ್ಷಗಳಲ್ಲಿ ಚೀನಾವು ಡೋಕ್ಲಾಮ್, ಗಲ್ವಾನ್ ದಾಳಿ ಆಯೋಜಿಸಿದರೂ ಒಂದು ಇಂಚು ಸ್ಥಳವನ್ನೂ ಪಡೆಯಲು ಚೀನಾಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ @nalinkateel, ಸಚಿವ ಶ್ರೀ ಎಸ್. ಅಂಗಾರ, ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್ ಹಾಗೂ @BJP4Karnataka ನಾಯಕರು ಉಪಸ್ಥಿತರಿದ್ದರು.#JanAshirwadYatra pic.twitter.com/k00pdPKVPk
— Rajeev Chandrasekhar 🇮🇳 (@Rajeev_GoI) August 18, 2021
ಲಕ್ಷಾಂತರ ಕಾರ್ಯಕರ್ತರ ಬೆಂಬಲ, ಸಹಕಾರ, ಪ್ರೀತಿಗೆ ನಾನು ಚಿರಋಣಿ ಎಂದರು. ಶ್ರೀ ನರೇಂದ್ರ ಮೋದಿ ಅವರ ತಂಡದಲ್ಲಿ ಸೇರ್ಪಡೆ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಕನ್ನಡ ನಾಡಿನ ಜನರ ಪರವಾಗಿ ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಜನರ ಭಾವನೆಗಳನ್ನು ಕೇಳಲು ಈ ಯಾತ್ರೆ ನಡೆಸಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕಳೆದ ಏಳು ವರ್ಷಗಳಲ್ಲಿ ಮಾಡಿದ ವಿಶಿಷ್ಟ ಸಾಧನೆಗಳನ್ನು ಜನರ ಮುಂದಿಡಲಾಗುತ್ತಿದೆ ಎಂದು ವಿವರಿಸಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಡಾ.ಅಂಬೇಡ್ಕರ್ ಅವರು ನೀಡಿದ್ದರು. ಅಂಬೇಡ್ಕರ್ ಅವರ ಹೆಸರಿನಲ್ಲಿ ಕಾಂಗ್ರೆಸ್ ಮತಭಿಕ್ಷೆ ಕೇಳಿತ್ತು. ಆದರೆ, ಅಂಬೇಡ್ಕರರಿಗೆ ಮೋಸ ಮಾಡಿದ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ದೂರವೇ ಇಟ್ಟಿತು. ಇನ್ನೊಂದೆಡೆ ಬಿಜೆಪಿ ಸರಕಾರವು ಡಾ. ಅಂಬೇಡ್ಕರ್ ಅವರ ಚಿಂತನೆ- ಆದರ್ಶಗಳನ್ನು ಈಡೇರಿಸುತ್ತಾ ಸಾಗಿದೆ ಎಂದು ತಿಳಿಸಿದರು. ಅತಿ ಹೆಚ್ಚು ಎಸ್‍ಸಿ, ಎಸ್‍ಟಿಗಳಿರುವ, ಗರಿಷ್ಠ ಮಹಿಳೆಯರು ಇರುವ ಸಚಿವ ಸಂಪುಟ ಶ್ರೀ ನರೇಂದ್ರ ಮೋದಿ ಅವರದು. ಇದಲ್ಲದೆ ಒಬಿಸಿಗೆ ನ್ಯಾಯ ಕೊಡುವ ಕೆಲಸವನ್ನೂ ಬಿಜೆಪಿ ಸರಕಾರ ಮಾಡಿದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲಾಗಿದೆ. 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅತಿ ಹೆಚ್ಚು ಶೌಚಾಲಯ ಕಟ್ಟಿಸಿಕೊಡಲಾಗಿದೆ. 8 ಕೋಟಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಒದಗಿಸಲಾಗಿದೆ. ಆಯುಷ್ಮಾನ್ ವಿಮೆ ಮೂಲಕ ಬಡವರಿಗೆ ಆರೋಗ್ಯ ನೀಡಿದ ಸರಕಾರ ಶ್ರೀ ನರೇಂದ್ರ ಮೋದಿ ಅವರದು ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಲಕ್ಷಾಂತರ ಮನೆ ನಿರ್ಮಿಸಲಾಗುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ. ನೆಹರೂ ನಂತರ ಮನಮೋಹನ್ ಸಿಂಗ್ ವರೆಗಿನ ಪ್ರತಿ ಕಾಂಗ್ರೆಸ್ ಸರಕಾರದಲ್ಲೂ ಭ್ರಷ್ಟಾಚಾರ ನಡೆದಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಸರಕಾರವೊಂದೇ ಇದಕ್ಕೆ ಅಪವಾದ ಎಂದು ವಿವರಿಸಿದರು. ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್ ಹಾಗೂ ದೇಶzಲ್ಲಿ ಭಯೋತ್ಪಾದನೆಗೆ ಅದೇ ಪಕ್ಷ ಕಾರಣ ಎಂದರು.
ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಎಸ್.ಅಂಗಾರ, ಪುತ್ತೂರು ಶಾಸಕರು ಹಾಗೂ ಜನಾಶೀರ್ವಾದ ಯಾತ್ರೆ ಸಂಚಾಲಕರಾದ ಶ್ರೀ ಸಂಜೀವ ಮಠಂದೂರು, ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಜನಾಶೀರ್ವಾದ ಯಾತ್ರೆ ಸಹ ಸಂಚಾಲಕರಾದ ಶ್ರೀ ಕೇಶವಪ್ರಸಾದ್, ಮಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್, ವಿಭಾಗ ಪ್ರಭಾರಿಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್, ಜನಪ್ರತಿನಿಧಿಗಳು, ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.