Home ಬೆಂಗಳೂರು ನಗರ ವಹಿವಾಟು ಅಭಿವೃದ್ಧಿ ಯೋಜನೆ ರೂಪಿಸಲು ಕೈಮಗ್ಗ ನಿಗಮ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ವಹಿವಾಟು ಅಭಿವೃದ್ಧಿ ಯೋಜನೆ ರೂಪಿಸಲು ಕೈಮಗ್ಗ ನಿಗಮ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

37
0
CM directs KHDC to evolve Business Development Plan

ಬೆಂಗಳೂರು:

ಕರ್ನಾಟಕ ಕೈಮಗ್ಗ ನಿಗಮದ ಪುನಶ್ಚೇತನಕ್ಕೆ ಕೂಡಲೇ ವಹಿವಾಟು ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಇಂದು ನಡೆದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಹಣಕಾಸಿನ ಪರಿಸ್ಥಿತಿ ಸುಧಾರಣೆ ಕುರಿತ ಸಭೆಯಲ್ಲಿ ಈ ಸೂಚನೆ ನೀಡಿದರು.

ನಿಗಮದ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ನಷ್ಟ ಭರಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಶಿಕ್ಷಣ ಇಲಾಖೆಯ ಸಮವಸ್ತ್ರ ಪೂರೈಕೆಯಲ್ಲಿ ನಿಗಮಕ್ಕೆ ಆಗಿರುವ 10 ಕೋಟಿ ರೂ. ನಷ್ಟದಲ್ಲಿ 5 ಕೋಟಿ ಸರ್ಕಾರ ಭರಿಸಲಿದ್ದು, ಉಳಿದ 5 ಕೋಟಿ ರೂ. ಗಳನ್ನು ನಿಗಮದ ವಹಿವಾಟಿನ ಮೂಲಕ ಭರಿಸುವಂತೆ ಸೂಚನೆ ನೀಡಿದರು.

ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಅಗತ್ಯದ ಕನಿಷ್ಠ ಶೇ. 25 ರಷ್ಟು ವಸ್ತ್ರವನ್ನು ಕೈಮಗ್ಗ ನಿಗಮದಿಂದ ಖರೀದಿಸುವಂತೆ ಸುತ್ತೋಲೆ ಹೊರಡಿಸುವಂತೆ ಸೂಚಿಸಿದರು.

ಕೈಮಗ್ಗ ನಿಗಮವನ್ನು ಖಾಸಗಿ ಸಹಭಾಗಿತ್ವದೊಂದಿಗೆ ಕೈಮಗ್ಗ ನೇಕಾರರ ಕೌಶಲ್ಯ ವೃದ್ಧಿಗೆ ಒತ್ತು ನೀಡುವ ಮೂಲಕ ಅವರ ಆದಾಯ ಹೆಚ್ಚಿಸುವ ಯೋಜನೆ ರೂಪಿಸಲು ಸಲಹೆ ನೀಡಿದರು.

CM directs KHDC to evolve Business Development Plan

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ನಿಗಮದ 2 ಎಕರೆ 34 ಗುಂಟೆ ಜಮೀನಿನನ್ನು ಮೈಸೂರು ಮಿನರಲ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ, ಆದಾಯ ತರುವಂತೆ ಮಾಡಲು ಸೂಚಿಸಿದರು.

ನಗರ ಪ್ರದೇಶದ ಗ್ರಾಹಕರನ್ನು ಆಕರ್ಷಿಸಲು ವಿನ್ಯಾಸ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾರುಕಟ್ಟೆ ಅವಕಾಶ ವಿಸ್ತರಿಸಲು ಸಲಹೆ ನೀಡಿದರು.

ರಾಜ್ಯದ ಕೈಮಗ್ಗ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಆನ್ ಲೈನ್ ಮಾರಾಟ ವ್ಯವಸ್ಥೆ ರೂಪಿಸಲು ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕೆ (ಎಂ.ಎಸ್.ಎಂ.ಇ) ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here