ಸಿಎಂ ಸಚಿವಾಲಯದ ಪೋಸ್ಟರ್‌ನಲ್ಲಿರುವ ಔರಾದ್‌ನ ತೆಗಂಪೂರದ ಬೋರ್‌ವೆಲ್ ಕಾಮಗಾರಿ. ಚಿತ್ರ: CM of Karnataka (X)
ಬೀದರ್: ಬೀದರ್ ಜಿಲ್ಲೆಯ ಔರಾದ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 20 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿ ಜನರು ಪರದಾಡುತ್ತಿದ್ದಾರೆ ಎಂಬ ಪತ್ರಿಕಾ ವರದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ ಎಂದು ನವೆಂಬರ್ 26ರಂದು X ಪೋಸ್ಟ್‌ನಲ್ಲಿ ತಿಳಿಸಿದೆ.
ಸಿಎಂ ಸಚಿವಾಲಯದ ನಿರ್ದೇಶನದ ಬೆನ್ನಲ್ಲೇ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಔರಾದ್ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಮಾಂಜ್ರಾ ನದಿಯ ಹಾಲಹಳ್ಳಿ ಬ್ಯಾರೇಜ್‌ನಲ್ಲಿ ನೀರಿನ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ನಿರ್ಣಯದಂತೆ ಭಾಲ್ಕಿ ಪುರಸಭೆಯಿಂದ 40 ಎಚ್‌ಪಿ ಮೋಟಾರ್ ಹಾಗೂ 4 ವಾಟರ್ ಟ್ಯಾಂಕರ್‌ಗಳನ್ನು ಪಡೆದು ಎಲ್ಲಾ ವಾರ್ಡ್‌ಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಪರ್ಯಾಯ ನೀರಿನ ಮೂಲವಾದ ತೆಗಂಪೂರ ಕೆರೆಯ ಪಂಪ್ ಹೌಸ್ ದುರಸ್ತಿ, 40 ಎಚ್‌ಪಿ ಮೋಟಾರ್ ಅಳವಡಿಕೆ ಹಾಗೂ 6 ಕಿ.ಮೀ ಉದ್ದದ ಪೈಪ್‌ಲೈನ್ ನವೀಕರಣ ಕಾಮಗಾರಿಗಾಗಿ ₹50 ಲಕ್ಷ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೋಸ್ಟ್ ತಿಳಿಸಿದೆ. ಬೋರ್‌ವೆಲ್‌ಗಳ ರಿಪೇರಿ ಕಾರ್ಯವೂ ಭರದಿಂದ ಸಾಗಿದೆ.
ಯಾವ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು ಎಂಬುದನ್ನು ಪೋಸ್ಟ್‌ನಲ್ಲಿ ಹೆಸರಿಸಿಲ್ಲ.
