ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಉರ್ದು ಅಕಾಡೆಮಿ ಸಮಾರಂಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್. ಚಿತ್ರ: ಸಿಎಂ ಮಾಧ್ಯಮ ಸಂಯೋಜಕರು
ಬೆಂಗಳೂರು: “ಉರ್ದು ಅಕಾಡೆಮಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸುವುದರ ಜೊತೆಗೆ, ಅಲ್ಪಸಂಖ್ಯಾತ ಧರ್ಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸೋಮವಾರ ಕರ್ನಾಟಕ ಉರ್ದು ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ‘ಜಷ್ನ್ ಎ ಉರ್ದು’ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.
“ಕ್ರೈಸ್ತರು, ಮುಸ್ಲಿಮರು, ಜೈನರು, ಬೌದ್ಧರು ಸೇರಿದಂತೆ ವಿವಿಧ ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರು ಹಾಗೂ ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು. ಇದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಸಕರ ಅಭಿಪ್ರಾಯ ಹಾಗೂ ಸಮಸ್ಯೆಗಳನ್ನೂ ಆಲಿಸಲಾಗುವುದು” ಎಂದು ಅವರು ಹೇಳಿದರು.
“ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಹಾಗೂ ವಿವಿಧ ಸಂದರ್ಭಗಳಲ್ಲಿ ಸಮುದಾಯಗಳಿಗೆ ನೀಡಿದ ಬದ್ಧತೆಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ. ಯಾರ ಭಾವನೆಗಳಿಗೂ ನೋವಾಗದಂತೆ ಗೌರವಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಭೆಗಳನ್ನು ನಡೆಸಲಾಗುತ್ತಿದೆ. ಸಂವಿಧಾನ ಖಾತರಿಪಡಿಸಿರುವ ಗೌರವ ಹಾಗೂ ಹಕ್ಕುಗಳನ್ನು ನಾವು ಕಾಪಾಡುತ್ತೇವೆ” ಎಂದು ಹೇಳಿದರು.
“ಉರ್ದು ಅಕಾಡೆಮಿಗೆ ಹೆಚ್ಚುವರಿ ಅನುದಾನ ನೀಡುವ ವಿಚಾರವನ್ನು ಸಚಿವರೊಂದಿಗೆ ಚರ್ಚಿಸಲಾಗಿದೆ. ಅಕಾಡೆಮಿಗೆ ಏನು ಬೇಕೋ ಅದನ್ನು ಪರಿಶೀಲಿಸಿ ಬೆಂಬಲಿಸಲಾಗುವುದು. ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ” ಎಂದರು.
ಅಲ್ಪಸಂಖ್ಯಾತ ಧರ್ಮಗಳ ಧ್ವನಿಯಾಗಿ ಸರ್ಕಾರ
“ಕೆಲವರಿಗೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಂಬಿಕೆ ಇಲ್ಲದಿರಬಹುದು. ಆದರೆ ಬೇರೆಯವರಿಗೆ ನಂಬಿಕೆ ಇಲ್ಲ ಎಂಬ ಕಾರಣಕ್ಕೆ ಇಲಾಖೆಯನ್ನು ಮುಚ್ಚಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರ ಹಿತ ಕಾಪಾಡಲು ಹಾಗೂ ಅವರ ಧ್ವನಿಯಾಗಲು ನಮ್ಮ ಸರ್ಕಾರ ಇದೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ರಕ್ಷಣೆ ಒದಗಿಸಲು ನಾವು ಶ್ರಮಿಸುತ್ತೇವೆ” ಎಂದು ಪ್ರತಿಪಾದಿಸಿದರು.
“ನಮ್ಮ ಸರ್ಕಾರ ಸಂವಿಧಾನದ ಚೌಕಟ್ಟಿನೊಳಗೇ ಆಡಳಿತ ನಡೆಸಲಿದೆ. ರಾಹುಲ್ ಗಾಂಧಿ ಸೇರಿದಂತೆ ನಾವೆಲ್ಲರೂ ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದೇವೆ. ಎಲ್ಲ ಜಾತಿ ಹಾಗೂ ಧರ್ಮಗಳಿಗೆ ಸಮಾನ ಗೌರವ ಮತ್ತು ರಕ್ಷಣೆ ನೀಡುವ ಮೂಲಕ ಸಂವಿಧಾನವನ್ನು ಉಳಿಸಿ, ಅದರ ಆದರ್ಶಗಳನ್ನು ಎತ್ತಿಹಿಡಿಯುವುದು ಸರ್ಕಾರದ ಬದ್ಧತೆ” ಎಂದು ಹೇಳಿದರು.
ಉರ್ದು ಒಂದು ಸಮುದಾಯಕ್ಕೆ ಸೀಮಿತವಲ್ಲ; ಅದು ಹೃದಯದ ಭಾಷೆ
“ಉರ್ದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಭಾಷೆಯಲ್ಲ. ಇದು ಹೃದಯದ ಭಾಷೆ. ಸಾಹಿತ್ಯ, ಕಾವ್ಯ ಹಾಗೂ ಶಾಯರಿಗಳ ಮೂಲಕ ಜನರ ಹೃದಯವನ್ನು ತಟ್ಟುವ ಶಕ್ತಿ ಈ ಭಾಷೆಗೆ ಇದೆ. ಈ ಭಾಷೆಗೆ ಗಡಿಗಳಿಲ್ಲ. ಜಾಗತಿಕ ಮನ್ನಣೆ ಗಳಿಸಿರುವ ಉರ್ದು ಭಾಷೆ ಹಾಗೂ ಸಂಸ್ಕೃತಿಯನ್ನು ಎಲ್ಲರೂ ಗೌರವಿಸಬೇಕು” ಎಂದು ಹೇಳಿದರು.
“ಮೈಸೂರು ದಸರಾ ಸಂದರ್ಭದಲ್ಲಿ ಉರ್ದು ಶಾಯರಿ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕುಳಿತು ಕಾವ್ಯ ಆಲಿಸಿದ್ದೆ. ಆ ಸಾಹಿತ್ಯ ಮನಸ್ಸಿಗೆ ಆನಂದ ನೀಡಿತು. ಅಲ್ಲಿ ಮುಸ್ಲಿಮರಷ್ಟೇ ಅಲ್ಲ, ಜೈನರು, ಬ್ರಾಹ್ಮಣರು, ಕನ್ನಡಿಗರು ಹಾಗೂ ವಿವಿಧ ಧರ್ಮ, ಭಾಷೆಗಳ ಹಿಂದಿ ಭಾಷಿಕರೂ ಇದ್ದರು ಎಂಬುದು ವಿಶೇಷ. ಎಲ್ಲರೂ ಉರ್ದು ಶಾಯರಿಯನ್ನು ಆಸಕ್ತಿಯಿಂದ ಆಲಿಸುತ್ತಿದ್ದರು. ಭಾಷೆ ಜನರನ್ನು ಹೇಗೆ ಬೆಸೆಯಬಲ್ಲದು ಎಂಬುದಕ್ಕೆ ಇದು ಉತ್ತಮ ಉದಾಹರಣೆ” ಎಂದು ಅವರು ಹೇಳಿದರು.
“ಜ್ಞಾನ ಯಾವ ಭಾಷೆಯಲ್ಲಿದ್ದರೂ ಅದನ್ನು ಗೌರವಿಸಬೇಕು. ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಯನ್ನು ಅಗೌರವದಿಂದ ಕಾಣಬಾರದು. ಭಾಷೆ ಸಂವಹನದ ಮಾಧ್ಯಮ. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸಿ ಗೌರವಿಸಬೇಕು, ತಾಯಿ ಹಾಗೂ ಮಾತೃಭಾಷೆಯ ಮಹತ್ವವನ್ನು ಅರಿಯಬೇಕು” ಎಂದು ಹೇಳಿದರು.
ಕತ್ತರಿ ಬೇಡ, ಸೂಜಿಯಂತೆ ಕೆಲಸ ಮಾಡೋಣ
“ನಮ್ಮ ಭಾಷೆಗಳು ಬೇರೆಯಾಗಿರಬಹುದು, ಆದರೆ ಮಾನವ ಭಾವನೆಗಳು ಒಂದೇ. ಮಾನವೀಯತೆಯೇ ನಮ್ಮ ಜಾತಿ, ಮಾನವೀಯತೆಯೇ ನಮ್ಮ ಧರ್ಮ. ಕತ್ತರಿ ಮತ್ತು ಸೂಜಿ ಎರಡನ್ನೂ ಕಬ್ಬಿಣದಿಂದಲೇ ಮಾಡಬಹುದು. ಕತ್ತರಿಸುವ ಕೆಲಸ ನಮಗೆ ಬೇಡ. ಜನರನ್ನು ಹೊಲಿದು ಬೆಸೆಯುವ ಸೂಜಿಯಂತೆ ನಾವು ಕೆಲಸ ಮಾಡೋಣ. ನಮ್ಮ ಸರ್ಕಾರ ಹಾಗೂ ಪಕ್ಷ ಸಮಾಜವನ್ನು ಒಗ್ಗೂಡಿಸಲು ಕೆಲಸ ಮಾಡುತ್ತವೆ; ಸಮಾಜವನ್ನು ವಿಭಜಿಸುವುದರಲ್ಲಿ ನಮಗೆ ಆಸಕ್ತಿ ಇಲ್ಲ” ಎಂದು ಹೇಳಿದರು.
“ಉರ್ದು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸೇವೆ ಸಲ್ಲಿಸಿದ 20 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿರುವುದು ಅತ್ಯಂತ ಸಂತಸದ ವಿಷಯ. ಎಲ್ಲ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುತ್ತೇನೆ. ಉರ್ದು ಸಾಹಿತ್ಯದ ಬೆಳವಣಿಗೆಗೆ ಅಕಾಡೆಮಿ ಕೈಗೊಂಡಿರುವ ಉಪಕ್ರಮಗಳು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನಷ್ಟು ಸಂಬಂಧಿತ ಸುದ್ದಿಗಳನ್ನು ಓದಿ:
