ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೂತನ ಸೌಲಭ್ಯಗಳ ಉದ್ಘಾಟನೆ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅಧಿಕಾರಿಗಳು. ಚಿತ್ರ: ರಾಮಲಿಂಗಾ ರೆಡ್ಡಿ
ಬೆಂಗಳೂರು: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ, ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ಕಲ್ಯಾಣ ಹಾಗೂ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ₹38 ಕೋಟಿ ವೆಚ್ಚದ ಪ್ರವಾಸಿಗರ ಸ್ನೇಹಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೌಲಭ್ಯಗಳನ್ನು ಉದ್ಘಾಟಿಸಿದರು.
ಪ್ರವಾಸಿಗರ ಸವಾರಿಗೆ ಅನುಕೂಲವಾಗುವಂತೆ ನೂತನ ಎಲೆಕ್ಟ್ರಿಕ್ ವಾಹನಗಳಿಗೆ ಸಚಿವರು ಚಾಲನೆ ನೀಡಿದರು. ನೂತನವಾಗಿ ನಿರ್ಮಿಸಲಾಗಿರುವ ಆಡಳಿತ ಕಚೇರಿ “ಅಡವಿ” ಕಟ್ಟಡ, ಲೈವ್ ಫೀಡ್ ಘಟಕ, ಕೇಂದ್ರೀಯ ನರ್ಸರಿ ಹಾಗೂ ಉದ್ಯಾನವನದ ನವೀಕೃತ ಮುಖ್ಯ ಪ್ರವೇಶ ದ್ವಾರವನ್ನು ಉದ್ಘಾಟಿಸಿದ ಅವರು, ನೂತನ ಕ್ಯಾರಂಟೈನ್ ಬ್ಲಾಕ್‌ಗೂ ಚಾಲನೆ ನೀಡಿದರು.
ಹೊಸದಾಗಿ ಝೂ ಶಾಪ್ ಹಾಗೂ ಸುವರ್ಣಮುಖಿ ಕೆಫೆ ಪ್ರಾರಂಭಿಸಲಾಗಿದ್ದು, ಅರಣ್ಯ ಸಿಬ್ಬಂದಿಗಳ ವಸತಿಗೃಹಗಳನ್ನೂ ಉದ್ಘಾಟಿಸಲಾಯಿತು. ತೋಳಗಳ ಆವರಣ, ಚೀತಾ ಆವರಣ, ಎಮು ಮತ್ತು ರಿಯಾ ಪಕ್ಷಿಗಳ ಆವರಣ ಹಾಗೂ ಫೆಸೆಂಟ್ ಪಕ್ಷಿ ಆವರಣಗಳನ್ನೂ ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ, ಹಿಪ್ಪೋಪೊಟಮಸ್ ಚಿಕಿತ್ಸಾ ಸಮಯದಲ್ಲಿ ಶಿವಮೊಗ್ಗದಲ್ಲಿ ಸಾವಿಗೀಡಾದ ಪಶುವೈದ್ಯಾಧಿಕಾರಿ ಡಾ. ಸಮೀಕ್ಷ ಅವರ ನೆನಪಿನಲ್ಲಿ, ಹಿಪ್ಪೋಪೊಟಮಸ್ ಬ್ಲಾಕ್‌ಗೆ ಮತ್ತು ಮರಿ ಹಿಪ್ಪೋಪೊಟಮಸ್‌ಗೆ “ಸಮೀಕ್ಷ” ಎಂದು ನಾಮಕರಣ ಮಾಡಲು ಸಚಿವರು ಸೂಚನೆ ನೀಡಿದರು.

ಸಫಾರಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಆನೆಗಳ ಆರೋಗ್ಯ, ಆರೈಕೆ, ಕಲ್ಯಾಣ ಹಾಗೂ ನಿರ್ವಹಣೆಗೆ ಮೀಸಲಾಗಿರುವ “ಸುವರ್ಣ ಆನೆ ಆರೈಕೆ ಕೇಂದ್ರ”ದ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿದರು. ಸಫಾರಿ ವೀಕ್ಷಣೆಯ ಮೂಲಕ ಜೈವಿಕ ಉದ್ಯಾನವನದಲ್ಲಿ ಕೈಗೊಳ್ಳಲಾಗುತ್ತಿರುವ ವನ್ಯಜೀವಿ ಸಂರಕ್ಷಣೆ ಹಾಗೂ ನಿರ್ವಹಣಾ ಚಟುವಟಿಕೆಗಳನ್ನೂ ಅವರು ವೀಕ್ಷಿಸಿದರು.
ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ಭಾ.ಅ.ಸೇ ಅಧಿಕಾರಿ ರವಿ ಬಿ.ಪಿ. ಹಾಗೂ ಇತರೆ ಪ್ರಮುಖ ಅರಣ್ಯಾಧಿಕಾರಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.
