ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದೆಯೇ? ಹೈಕಮಾಂಡ್ ಬುಲಾವಿನ ಬೆನ್ನಲ್ಲೇ ದೆಹಲಿಗೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್
ಬೆಂಗಳೂರು/ನವದೆಹಲಿ, ಮೇ 26: ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನರ್ರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರಗೊಂಡಿವೆ. ಕಾಂಗ್ರೆಸ್ ಹೈಕಮಾಂಡ್ ಬುಲಾವಿನ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ಆಗಮಿಸಿದ್ದು, ಈಗಾಗಲೇ ಸಚಿವರು, 45ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕೂಡ ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನಷ್ಟು ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳುವ ಸಾಧ್ಯತೆಗಳೂ ದಟ್ಟವಾಗಿವೆ.
ನವದೆಹಲಿಯ ಇಂದಿರಾ ಭವನದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ. ವೇಣುಗೋಪಾಲ್ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ, ಮೊದಲಿಗೆ ವೇಣುಗೋಪಾಲ್ ಪ್ರಾಥಮಿಕ ಚರ್ಚೆ ನಡೆಸಲಿದ್ದು, ನಂತರ ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವ ಗೊಂದಲ, ಸಂಪುಟ ಪುನರ್ರಚನೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕೇರಳ ಚುನಾವಣೆಯ ಬಳಿಕ ಕರ್ನಾಟಕದತ್ತ ಗಮನ ಹರಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಸೂಚನೆ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಈ ಮಹತ್ವದ ಸಭೆ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರಕ್ಕಿಂತ ಸಂಪುಟ ಪುನರ್ರಚನೆಗೆ ಒತ್ತು ನೀಡುವ ಸಾಧ್ಯತೆ ಇದೆ. ಮುಂಬರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆ, ರಾಜ್ಯಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಲು ಸಿಎಂ ಒತ್ತಾಯಿಸಬಹುದು ಎನ್ನಲಾಗುತ್ತಿದೆ.
ಇದೀಗ ಮತ್ತೆ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಮುನ್ನಲೆಗೆ ಬಂದಿದ್ದು, ಒಂದು ಬಣ ಅಧಿಕಾರ ಹಸ್ತಾಂತರಕ್ಕೆ ಆಗ್ರಹಿಸುತ್ತಿದ್ದರೆ, ಮತ್ತೊಂದು ಬಣ ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದೆ.
ಈ ನಡುವೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರೂ ಆಂತರಿಕ ಚರ್ಚೆಗಳಲ್ಲಿ ಕೇಳಿಬರುತ್ತಿರುವುದು ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ಬಣ್ಣ ತುಂಬಿದೆ.
ಪಕ್ಷದೊಳಗಿನ ನಿರಂತರ ಗೊಂದಲ ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವೂ ಕಾಂಗ್ರೆಸ್ ನಾಯಕರಲ್ಲಿ ವ್ಯಕ್ತವಾಗುತ್ತಿದೆ.
ಇನ್ನೊಂದೆಡೆ, ಮೊದಲ ಹಂತದ ಸಭೆಗೆ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿಲ್ಲ ಎನ್ನಲಾಗುತ್ತಿದ್ದು, ಸಿದ್ದರಾಮಯ್ಯ ಅವರೊಂದಿಗೆ ಸಭೆ ಬಳಿಕ ಡಿಕೆ ಶಿವಕುಮಾರ್ ಜೊತೆ ಪ್ರತ್ಯೇಕ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜ್ಯಸಭೆ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ಪಕ್ಷ ಸಂಘಟನೆ ಕುರಿತ ವಿಚಾರಗಳೂ ಈ ಸಭೆಗಳಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
ದೆಹಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ಮುಂದಿನ ಕೆಲ ದಿನಗಳಲ್ಲಿ ಕೈಗೊಳ್ಳುವ ನಿರ್ಧಾರಗಳು ಕರ್ನಾಟಕ ರಾಜಕೀಯದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ.
