Home ಹುಬ್ಬಳ್ಳಿ ಕರ್ನಾಟಕದ ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ಅನುಷ್ಠಾನ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರೋಧ

ಕರ್ನಾಟಕದ ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ಅನುಷ್ಠಾನ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರೋಧ

22
0
Siddaramaiah
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
bengaluru

ಹುಬ್ಬಳ್ಳಿ:

ಕರ್ನಾಟಕದ ಎಲ್ಲ ವಿವಾದಿತ ಗ್ರಾಮಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಶಿಂಧೆ ಸರ್ಕಾರವನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಲ್ಲದೆ, ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಶಿಂಧೆ ಸರ್ಕಾರವು ವಿವಾದಿತ ಗ್ರಾಮಗಳಲ್ಲಿ ತನ್ನ ಪ್ರಮುಖ ಆರೋಗ್ಯ ಕಾರ್ಯಕ್ರಮ ‘ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ’ ಅನುಷ್ಠಾನವನ್ನು ಇತ್ತೀಚೆಗೆ ಘೋಷಿಸಿದೆ. ಮಹಾಜನ್ ಆಯೋಗದ ವರದಿ ಅಂತಿಮವಾಗಿದೆ ಮತ್ತು ಅಂಗೀಕರಿಸಲ್ಪಟ್ಟಿದೆ ಎಂದು ಕರ್ನಾಟಕವು ತಿಳಿಸಿದೆ. ಆದರೆ, ನೆರೆಯ ರಾಜ್ಯವು ಕರ್ನಾಟಕದ ಹಳ್ಳಿಗಳಲ್ಲಿ ಸರ್ಕಾರಿ ಕಾರ್ಯಕ್ರಮವನ್ನು ಜಾರಿಗೊಳಿಸುವುದಾಗಿ ಘೋಷಿಸಿದ ನಂತರ ತೀವ್ರ ವಿವಾದ ಉಂಟಾಗಿದೆ.

ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿಯೊಳಗಿರುವ 865 ಹಳ್ಳಿಗಳಿಗೆ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ ಎಂಬ ಕಾರ್ಯಕ್ರಮವನ್ನು ನೀಡಲು ಹೊರಟಿರುವುದು ನಾಡಿನ ಸಾರ್ವಭೌಮತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾಕಿರುವ ಸವಾಲು. ಒಂದು ರಾಜ್ಯದ ಸರ್ಕಾರ ಇನ್ನೊಂದು ರಾಜ್ಯದ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಸುಮ್ಮನಿರುವುದು ಹೇಗೆ?. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದನ್ನು ವಿರೋಧಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತ್ತಿವೆಯಾ? ಎಂಬ ಅನುಮಾನ ಬರುತ್ತಿದೆ ಎಂದು ಕಿಡಿಕಾರಿದರು.

‘ಮಹಾರಾಷ್ಟ್ರದ ಹಲವಾರು ಹಳ್ಳಿಗಳ ಜನರು ತಮ್ಮ ಸರ್ಕಾರದ ಬಗ್ಗೆ ಸಂತೋಷವಾಗಿಲ್ಲ ಮತ್ತು ಕರ್ನಾಟಕದೊಂದಿಗೆ ಸೇರಲು ಬಯಸುತ್ತಾರೆ. ಹೀಗಿರುವಾಗ, ಅವರ ಸಮಸ್ಯೆಗಳನ್ನು ಪರಿಹರಿಸಲು ನೆರೆಯ ರಾಜ್ಯವು ಮಧ್ಯಪ್ರವೇಶಿಸಬಹುದೇ?. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಹಂಚಿಕೆಗೆ ಸಂಬಂಧಿಸಿದಂತೆ ಮಹಾಜನ್‌ ವರದಿಯೇ ಅಂತಿಮ ಮತ್ತು ನಮ್ಮ ರಾಜ್ಯದ ಒಂದಿಂಚು ಭೂಮಿಯನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

‘ಈ ಬೆಳವಣಿಗೆಗಳು ಭಾರತ ಸರ್ಕಾರದ ಗಮನಕ್ಕೆ ಬಂದಿಲ್ಲವೇ’ ಎಂದು ಪ್ರಶ್ನಿಸಿರುವ ಅವರು, ‘ಶಿಂಧೆ ಸರ್ಕಾರದ ಈ ನಡೆ ಕರ್ನಾಟಕದ ಸಾರ್ವಭೌಮತೆಗೆ ಸವಾಲಾಗಿದೆ ಮತ್ತು ದೇಶದ ಒಕ್ಕೂಟ ರಚನೆಗೆ ವಿರುದ್ಧವಾಗಿದೆ. ಶಿಂಧೆ ಸರ್ಕಾರವನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಮತ್ತು ಬೊಮ್ಮಾಯಿ ಸರ್ಕಾರವು ಈ ಕ್ರಮದ ವಿರುದ್ಧ ಧ್ವನಿ ಎತ್ತುವಂತೆ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

ಮಹಾರಾಷ್ಟ್ರದ ನಾಯಕರು ಅನಗತ್ಯವಾಗಿ ಕನ್ನಡಿಗರ ಭಾವನೆಗಳನ್ನು ಕೆರಳಿಸಿ ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ ಸಿದ್ದರಾಮಯ್ಯ, ಮೌನವಾಗಿರುವುದು ಕನ್ನಡಿಗರ ದೌರ್ಬಲ್ಯವಲ್ಲ. ಅಲ್ಲದೆ, ರಾಜ್ಯ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ಬೊಮ್ಮಾಯಿ ಸಂಪೂರ್ಣ ವಿಫಲವಾಗಿದ್ದು, ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಹಾಗಾಗಿ ಅವರ ರಾಜೀನಾಮೆಗೆ ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here