ತಿರುವನಂತಪುರಂ:
ಕೊರೊನಾ ಕಠಿಣ ನಿಯಮಗಳ ಕಾರಣ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ಮೊದಲ ವಾರವೇ ಭಾರಿ ಇಳಿಮುಖವಾಗಿದೆ.
ಎರಡು ತಿಂಗಳ ಅವಧಿಯ ವಾರ್ಷಿಕ ಶಬರಿಮಲೆ ಯಾತ್ರೆ ಪ್ರಾರಂಭವಾದ ಮೊದಲ ವಾರ ಕೇವಲ 9,ಸಾವಿರ ಮಂದಿ ಭಕ್ತರು ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ.
ಪಂಬಾದ ಬೆಟ್ಟದ ಮೇಲಿನ ಈ ಪವಿತ್ರ ಸ್ಥಳಕ್ಕೆ ಕಳೆದ ವರ್ಷ ಇದೇ ಅವಧಿಯಲ್ಲಿ 3 ಲಕ್ಷ ಮಂದಿ ಭಕ್ತರು ತೆರಳಿದ್ದರು ಎಂದು ದೇವಾಲಯ ಆಡಳಿತ ಮಂಡಳಿಯ ದಾಖಲೆಗಳು ಹೇಳುತ್ತಿವೆ.
ಕೊರೊನಾ ವೈರಸ್ ಭೀತಿ ಮತ್ತು ಕಟ್ಟುನಿಟ್ಟಾದ ನಿಯಮಾವಳಿಗಳ ಕಾರಣದಿಂದ ಭಕ್ತರ ಸಂಖ್ಯೆಯಲ್ಲಿ ಹಿಂದೆಂದೂ ಕಾಣದಷ್ಟು ಇಳಿಕೆಯಾಗಿದೆ. ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆಯ ಚಟುವಟಿಕೆಗಳು ನವೆಂಬರ್ 16ರಂದು ದೇವಾಲಯದ ಬಾಗಿಲು ತೆರೆಯುವುದರೊಂದಿಗೆ ಆರಂಭವಾಗಿತ್ತು. ಕಳೆದ ಎಂಟು ತಿಂಗಳ ಹಿಂದೆ ಕೋವಿಡ್ ನಿಯಂತ್ರಣ ನಿಯಮಗಳು ಜಾರಿಗೆ ಬಂದಾಗಿನಿಂದ ಭಕ್ತರ ದೈನಂದಿನ ಭೇಟಿಯ ಗರಿಷ್ಠ ಸಂಖ್ಯೆಗೆ ಭಾರಿ ಹೊಡೆತ ಬಿದ್ದಿದೆ ಎಂದು ಟ್ರಾವಂಕೋರ್ ದೇವಸ್ಥಾನ ಮಂಡಳಿ (ಟಿಡಿಬಿ) ತಿಳಿಸಿದೆ.
ಪ್ರಸ್ತುತದ ಕೋವಿಡ್ ನಿಯಮಾವಳಿಗಳ ಪ್ರಕಾರ ಈಗಿನ ಉತ್ಸವದ ಅವಧಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗಿನ ದಿನಗಳಲ್ಲಿ ಕೇವಲ ಗರಿಷ್ಠ 1,000 ಭಕ್ತರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ 2,000 ಭಕ್ತರು ಇಲ್ಲಿಗೆ ಭೇಟಿ ನೀವಲು ಅವಕಾಶ ನೀಡಲಾಗಿದೆ. 2021ರ ಜನವರಿ 14ರಂದು ಅತ್ಯಂತ ಪ್ರಮುಖ ಮಕರವಿಳಕ್ಕು ಸಂಭವಿಸಲಿದೆ.
ಮನೆ ಬಾಗಿಲೆಗೆ ಶಬರಿಮಲೆ ‘ಪ್ರಸಾದ’ https://kannada.thebengalurulive.com/sabarimala-prasadam-to-be-delivered-home/