Home ಬೆಂಗಳೂರು ನಗರ ಮರಾಠಿಗರು ವಲಸಿಗರಲ್ಲ, ಮೂಲ ನಿವಾಸಿಗಳು

ಮರಾಠಿಗರು ವಲಸಿಗರಲ್ಲ, ಮೂಲ ನಿವಾಸಿಗಳು

44
0

ಬಂದ್ ಕೈಬಿಡಿ, ಭಾಷಾ ಸಾಮರಸ್ಯ ಕದಡುವುದು ಸಲ್ಲದು : ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ

ಬೆಂಗಳೂರು:

ಕರ್ನಾಟಕ – ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಬಲವಾಗಿ ಪ್ರತಿಪಾದಿಸುತ್ತಿರುವ, ರಾಜ್ಯದಲ್ಲಿ ಹುಟ್ಟಿ, ಬೆಳೆದು, ಇಲ್ಲಿನ ನೆಲ, ಜಲ, ಭಾಷೆ, ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿರುವ ನಾವು ಕನ್ನಡಿಗರು. ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರೆ ನೀಡಿರುವ ಬಂದ್ ಕೈಬಿಡಿ. ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳೋಣ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿ.ಎಸ್.ಶ್ಯಾಮಸುಂದರ್ ಗಾಯಕ್ವಾಡ್ ಮನವಿ ಮಾಡಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಂತರ ಮಾರಾಠಿ ಜನಾಂಗದ ವಿರುದ್ದ ಕೆಲ ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಮಾಡುತ್ತಿರುವ ಆರೋಪ, ಭಾಷಾ ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಮರಾಠರು ದೇಶದ ನಾಲ್ಕನೇ ಅತಿ ದೊಡ್ಡ ಜನಾಂಗ. ಕರ್ನಾಟಕದಲ್ಲಿ ಆರನೇ ದೊಡ್ಡ ಜನಸಂಖ್ಯೆ ಹೊಂದಿದೆ. ಚಾಮರಾಜನಗರದಿಂದ ಬೀದರ್ ವರೆವಿಗೆ, ಪೂರ್ವದ ಬಳ್ಳಾರಿಯಿಂದ ಉತ್ತರ ಕನ್ನಡದ ಗೋಕರ್ಣದವರೆಗೆ 50 ಲಕ್ಷಕ್ಕೂ ಹೆಚ್ಚು ಜನ ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. 32 ಕ್ಷತ್ರೀಯ ಪಂಗಡಗಳಾಗಿ ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಶತಶತಮಾನಗಳಿಂದ ಅಪ್ಪಟ ಕನ್ನಡಿಗರಾಗಿ ಶಾಂತಿಯಿಂದ ಜೀವನ ಸಾಗಿಸುತ್ತಿದ್ದಾರೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಹೋರಾಟಕ್ಕೆ ಮರಾಠ ಮುಖಂಡರು ಕೈಜೋಡಿಸಿ ಸಹಿ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿರುವಂತೆ ಮರಾಠ ಎಂದರೆ ಭಾಷೆಯಲ್ಲ ಜನಾಂಗ ಎಂಬುದು ಅಕ್ಷರಶಃ ಸತ್ಯ. ಭಾಷೆಯ ಹೆಸರಿನಲ್ಲಿ ನಮ್ಮನ್ನು ವಿಭಜಿಸುವುದು ಸರಿಯಲ್ಲ. ಮರಾಠ ಸಮಾಜದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸುತ್ತೇವೆ . ಬೆಳಗಾವಿ, ಕಾರವಾರ , ನಿಪ್ಪಾಣಿಯ ಒಂದು ಇಂಚು ಜಾಗವನ್ನು ನಾವು ಬಿಟ್ಟುಕೊಡುವುದಿಲ್ಲ ಅಖಂಡ ಕರ್ನಾಟಕವಾಗಬೇಕಾದರೆ ಸೋಲಾಪುರ ಹಾಗೂ ಕೊಲ್ಲಾಪುರವನ್ನು ಕರ್ನಾಟಕಕ್ಕೆ ಪಡೆಯಬೇಕು ಎಂಬ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

Maratha 1

ಕರ್ನಾಟಕದಲ್ಲಿ ಜನಿಸಿರುವ ನಾವು ಅಪ್ಪಟ ಕನ್ನಡಿಗರು. ಬದುಕುವುದಕ್ಕಾಗಿ ಹಾಗೂ ರಕ್ಷಿಸಿಕೊಳ್ಳುವುದಕ್ಕಾಗಿ ನಾವು ಕನ್ನಡ ಧ್ವಜ ಹಿಡಿದವರಲ್ಲ. ನಮ್ಮ ಉಸಿರು, ನಮ್ಮ ಪ್ರಾಣ, ನಮ್ಮ ಅನ್ನ, ನಮ್ಮ ನೆಲ ಶತಶತಮಾನಗಳಿಂದ ನಾವುಗಳು ನೆಲೆಸಿರುವುದು ಕನ್ನಡ ನೆಲದಲ್ಲೇ. ನಾವೇನು ವಲಸೆ ಬಂದವರಲ್ಲ. ಆದರೆ ಗಡಿ ಭಾಗದ ಕೆಲ ಪುಂಡ ಮರಾಠಿಗರಿಗೆ ಖ್ಯಾತೆ ತೆಗೆಯುವುದೇ ಕೆಲಸವಾಗಿದೆ. ಅವರು ಮಾಡಿದ ತಪ್ಪಿಗಾಗಿ ಇಡೀ ಮರಾಠ ಸಮುದಾಯವನ್ನು ದೂಷಿಸುವುದು ಸರ್ವತಾ ಸರಿಯಲ್ಲ. ಇಷ್ಟಕ್ಕೂ ಗಡಿ ತಂಟೆ ತೆಗೆಯುವವರು ಮರಾಠಿಗಳಲ್ಲ. ಇಂತಹವರಿಗೆ ಮಹಾರಾಷ್ಟ್ರದ ಮೇಲೆ ಅಭಿಮಾನ ಇದ್ದರೆ ಕರ್ನಾಟಕವನ್ನು ಬಿಟ್ಟು ತೊಲಗಿ ಎನ್ನುವುದು ನಮ್ಮ ಅಚಲ ನಿಲುವಾಗಿದೆ. ನಾವು ರಾಷ್ಟ್ರ, ರಾಜ್ಯ ರಕ್ಷಣೆಗೆ ಕಂಕಣಬದ್ಧರಾಗಿದ್ದೇವೆ. ಇಲ್ಲಿನ ಮರಾಠಿಗರು ರೈತರಾಗಿ, ವೀರ ಯೋಧರಾಗಿ, ವ್ಯಾಪಾರಿಗಳಾಗಿ ಎಲ್ಲಾ ವಲಯಗಳಲ್ಲೂ ಇದ್ದಾರೆ. ಬೆಳಗಾವಿಯ ಮರಾಠ ರೆಜಿಮೆಂಟಿನಲ್ಲಿ ತರಬೇತಿ ಪಡೆದು ರಾಷ್ಟ್ರ ರಕ್ಷಣೆಗಾಗಿ ಜೀವವನ್ನೇ ಪಣಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿ.ಎಸ್.ಶ್ಯಾಮಸುಂದರ್ ಗಾಯಕ್ವಾಡ್ ಬಲವಾಗಿ ಪ್ರತಿಪಾದಿಸಿದರು.

ಭಾಷೆ ಬೆಳವಣಿಗೆಗೆ ಮಹಾನ್ ಕವಿಗಳು ಬರಹಗಾರರು, ಸಂಗೀತಗಾರರು ಕೊಡುಗೆ ನೀಡಿದ್ದಾರೆ. ವಿ.ಕೆ. ಗೋಕಾಕ್, ದ.ರಾ.ಬೇಂದ್ರೆ , ಭೀಮಸೇನಜೋಷಿ , ಗಂಗೂಬಾಯಿ ಹಾನಗಲ್ , ರಾಮಜಾಧವ್ , ಪಾಟೀಲ್ ಪುಟ್ಟಪ್ಪ , ಸರ್ಜೂಕಾಟ್ಕರ್, ಜೋಷಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಿಜಾಪುರದ ಆದಿಲ್ಶಾಹಿ ಅವರಲ್ಲಿ ರಾಜ್ಯಪಾಲರಾಗಿದ್ದ ಛತ್ರಪತಿ ಶಿವಾಜಿ ತಂದೆ ಶಹಜಿ ಮಹಾರಾಜರು ಬಿಜಾಪುರದಿಂದ ತಂಜಾವೂರ ವರೆಗೂ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಆ ಸಮಯದಲ್ಲಿ ಸುಮಾರು 30 ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಾಗಿದ್ದರು. ಶಹಜಿ ಮಹಾರಾಜರು ಕರ್ನಾಟಕದ ಪ್ರವಾಸ ಸಂದರ್ಭದಲ್ಲಿ 1664 ಜನವರಿ 23 ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಕುದುರೆಯಿಂದ ಬಿದ್ದು ಸಾವನ್ನಪ್ಪಿದ್ದು, ಅವರ ಸಮಾಧಿ ಈಗಲೂ ಅಲ್ಲೇ ಇದೆ.

ಸರ್ಜೂಕಾಟ್ಕರ್ ಅವರ ” ಶಿವಾಜಿಯ ಮೂಲ ” ಎಂಬ ಕೃತಿಯಲ್ಲಿ ಶಿವಾಜಿ ವಂಶಸ್ಥರು ಗದುಗಿನ ಸರಟೂರು ಗ್ರಾಮದಲ್ಲಿ ವಾಸವಾಗಿದ್ದರು ಎಂಬ ಪುರಾವೆಗಳಿವೆ. ಮರಾಠಿಗರು ರಾಜ್ಯದಲ್ಲಿ ದೇವಾಲಯಗಳು, ವಿವಿಗಳು, ಸಮುದಾಯ ಭವನಗಳು , ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಾಲಯವನ್ನು ಶಿವಾಜಿಯ ಸೋದರ ಎಕ್ಕೋಜಿ ಭೋನ್ಸ್ಲೆ, ಚಿಕ್ಕಪೇಟೆಯ ಅಂಬಾಬಾಯಿ ದೇವಾಲಯವನ್ನು ಶಹಜಿ ಮಹಾರಾಜರು ನಿರ್ಮಾಣ ಮಾಡಿದ್ದಾರೆ. ವಿಶ್ವೇಶ್ವರಪುರದ ಪ್ರಖ್ಯಾತ ಸುಬ್ರಹ್ಮಣ್ಯ ದೇವಾಲಯ, ಸತ್ಯನಾರಾಯಣಸ್ವಾಮಿಯ ದೇವಾಲಯ ಮತ್ತು ಶಾಲೆಗಳು, ಸಮುದಾಯ ಭವನಗಳು, ಮರಾಠ ಹಾಸ್ಟೆಲ್‍ಗಳನ್ನು ಸಜ್ಜನರಾವ್ ಕುಟುಂಬ ನಿರ್ಮಿಸಿದೆ. ಶಿಂದೆ ಕುಟುಂಬದಿಂಧ ಬಸವನಗುಡಿಯ ಕಾರಂಜಿ ಆಂಜನೇಯ ದೇವಾಲಯ ಜೀರ್ಣೋದ್ಧಾರ ಜತೆಗೆ. ಕಲ್ಲಳ್ಳಿಯಲ್ಲಿ ವೆಂಕಟೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿರುತ್ತಾರೆ . ಮಾನೆ ಕುಟುಂಬದವರು ರಾಜಾಜಿನಗರದ ರಂಗನಾಥಸ್ವಾಮಿ ದೇವಾಲಯ, ಘೋರ್ಪಡೆ ಕುಟುಂಬದವರು ಪ್ರಖ್ಯಾತ ಘಾಟಿ ಸುಬ್ರಮಣ್ಯ ದೇವಾಲಯವನ್ನು ನಿರ್ಮಾಣ ಮಾಡಿರುತ್ತಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮರಾಠಿಗರ ಅಭಿವೃದ್ಧಿಯ ಕುರುಹುಗಳು ಯಥೇಚ್ಛವಾಗಿ ಸಿಗುತ್ತವೆ ಎಂದರು.

ರಾಜಕೀಯ ರಂಗದಲ್ಲಿ ಹಿರಿಯ ಮುತ್ಸದ್ದಿ ಎಂ.ವೈ ಘೋರ್ಪಡೆ 5 ಬಾರಿ ಮಂತ್ರಿಯಾಗಿ ಹಣಕಾಸು ಹಾಗೂ ಗ್ರಾಮೀಣಾಭೀವೃದ್ಧಿ ವ್ಯವಸ್ಥೆಯಲ್ಲಿ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ. ಹೀಗೆ ಸಚಿವಾಗಿದ್ದ ಡಿ.ಬಿ.ಪವಾರ್, ಎಸ್.ಆರ್.ಮೋರೆ, ಪಾಂಡುರಂಗ ರಾಣೆ, ಬಾಬುರಾವ್ ಹುಲ್ಲೂರ್‍ಕರ್, ಪಿ.ಜಿ.ಆರ್. ಸಿಂಧ್ಯಾ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಮುಖ್ಯಕಾರ್ಯದರ್ಶಿಯಾಗಿದ್ದ ಅರವಿಂದ್‍ಜಾಧವ್, ಪೊಲೀಸ್ ಇಲಾಖೆಯಲ್ಲಿನ ಹೇಮಂತ್ ನಿಂಬಾಳ್ಳರ್ , ಕೆ.ಸಿ.ವಿ.ಮಾನೆ , ಜಿ.ಆರ್.ಪಾಟೀಲ್ , ಘೋರ್ಪಡೆ, ಚಲನಚಿತ್ರ ರಂಗದ ಸೂಪರ್ ಸ್ಟಾರ್ ರಜನಿಕಾಂತ್, ರಂಗ ಕಲಾವಿದ ಬ್ಯಾಂಕ್ ಜನಾರ್ಥನ್, ಲಕ್ಷ್ಮಣರಾವ್, ಗಣೇಶ್‍ರಾವ್, ಕಶ್ಯಪ್, ವಾಸುದೇವರಾವ್ ಹೀಗ ಮರಾಠಿಗರು ಎಲ್ಲಾ ವಲಯಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ, ನೀಡುತ್ತಿದ್ದಾರೆ. ಹೀಗೆ ಎಲ್ಲಾ ರಂಗದಲ್ಲಿ ಮರಾಠಿ ಭಾಷಿಕರ ಕೊಡುಗೆ ಇದೆ. ಕನ್ನಡ ಚಳುವಳಿ ಮಹಾನಾಯಕರುಗಳಲ್ಲಿ ಭಿನ್ನವಿಸಿ ಕೊಳ್ಳುವುದೇನೆಂದರೆ ಅಪ್ಪಟ ಕನ್ನಡಿಗರಾದ ನಮಗೆ ಕೆಟ್ಟ ಹಣೆ ಪಟ್ಟಿಯನ್ನು ಕಟ್ಟಬೇಡಿ ಈ ರಾಜ್ಯದ 50 ಲಕ್ಷಕ್ಕೂ ಹೆಚ್ಚು ಇರುವ ಮರಾಠರು ನಿಮ್ಮ ಜೊತೆಯಲ್ಲಿ ಇದ್ದು ನಿಮ್ಮ ಹೋರಾಟಕ್ಕೆ ಕನ್ನಡದ ಏಳಿಗೆಗಾಗಿ ಹಗಲಿರುಳು ನಿಮ್ಮ ಜೊತೆಯಲ್ಲಿ ಇದ್ದೇವೆ , ಇರುತ್ತೇವೆ. ಇದನ್ನು ತಾವು ಅರಿತು ಮರಾಠ ಸಮಾಜವನ್ನು ವಿರೋಧ ಮಾಡಬೇಡಿ ಅಣ್ಣ – ತಮ್ಮಂದಿರಂತೆ ಬಾಳೋಣ ಒಬ್ಬರಿಗೆ – ಒಬ್ಬರು ಸಹಾಯ ಹಸ್ತ ನೀಡೋಣ ಎಂದು ಮನವಿಮಾಡಿದರು.

ಮರಾಠ ಜನಾಂಗವನ್ನು 3 ಬಿ ಯಿಂದ 2 ಎ ಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿ ಎಂದು ಮನವಿ ಮಾಡಿದ್ದು, ನಮ್ಮ ಬೇಡಿಕೆ ಈಡೇರಿಲ್ಲ. ಕಡುಬಡವರಾಗಿರುವ ನಾವು ಸಾಮಾಜಿಕವಾಗಿ , ಶೈಕ್ಷಣಿಕವಾಗಿ , ಆರ್ಥಿಕವಾಗಿ , ರಾಜಕೀಯವಾಗಿ ಬಹಳ ಹಿಂದೆ ಇದ್ದೇವೆ . ಇದನ್ನೆಲ್ಲ ಅರಿತ ಯಡಿಯೂರಪ್ಪನವರು ಮರಾಠ ಸಮುದಾಯ ಅಭಿವೃದ್ಧಿ ನಿಗಮ ರಚಿಸಿರುತ್ತಾರೆ . ಇದಕ್ಕೆ ರಾಜ್ಯದ ಮರಾಠ ಜನತೆ ಚಿರಋಣಿಯಾಗಿದ್ದೇವೆ ಎಂದು

ಇದನ್ನೆಲ್ಲ ತಾವು ಅರಿತು ವಿರೋಧ ಮಾಡದೆ ನಮಗೆ ಸಹಕಾರ ನೀಡಿ ಮಾನ್ಯ ಮುಖ್ಯ ಮಂತ್ರಿಗಳ ಕೈಯನ್ನು ಬಲಪಡಿಸಿ ಒಂದಾಗಿ ಒಗ್ಗಟ್ಟಾಗಿ ನಾವೆಲ್ಲರೂ ಸೇರಿ ಈ ಕರ್ನಾಟಕದ ನೆಲ , ಜಲ , ಭಾಷೆ , ಶಾಂತಿಯಾಗಿ ಬಾಳ್ವೆ ನಡೆಸಲು ಒಂದಾಗಿ ದುಡಿಯೋಣವೆಂದು ತಮ್ಮಲ್ಲಿ ನಾವು ಪ್ರಾರ್ಥಿಸುತ್ತೇವೆ ವಿ.ಎಸ್.ಶ್ಯಾಮಸುಂದರ್ ಗಾಯಕ್ವಾಡ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಡಿ. ಘೋರ್ಪಡೆ, ಜಂಟಿ ಕಾರ್ಯದರ್ಶಿ ವಿನೂತ್ ಕುಮಾರ್, ಉಪಾಧ್ಯಕ್ಷರಾದ ಶಂಕರ್ ರಾವ್ ಚೌವ್ಹಾಣ್, ಶ್ರೀಧರ್ ರಾವ್ ಶಿಂಧೆ, ಲಕ್ಷ್ಮಣ ರಾವ್ ಚೌವ್ಹಾಣ್, ಬೆಂಗಳೂರು ನಗರದ ಜಿಲ್ಲಾಧ್ಯಕ್ಷ ರವಿಶಂಕರ್, ಧಾರವಾಡ ಜಿಲ್ಲಾಧ್ಯಕ್ಷ ಪ್ರಕಾಶ್ ಚೌವ್ಹಾಣ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಮೇಶ್ ರಾವ್, ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕುಮಾರ್ ಗೋವಿಂದ್ ಗಾಯಕ್ ವಾಡ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here