ಜೂನ್ 3ರಂದು ಸಂಜೆ 4:05ಕ್ಕೆ ಡಿ.ಕೆ. ಶಿವಕುಮಾರ್ ಪ್ರಮಾಣವಚನ; ಅಜ್ಜಯ್ಯ ಸೂಚಿಸಿದ ಶುಭ ಮುಹೂರ್ತದಲ್ಲೇ ಪದಗ್ರಹಣ
ಬೆಂಗಳೂರು, ಮೇ 30: ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಲಿರುವ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಸಮಯ ನಿಗದಿಯಾಗಿದ್ದು, ಜೂನ್ 3ರಂದು ಸಂಜೆ 4:05ಕ್ಕೆ ಅವರು ಮುಖ್ಯಮಂತ್ರಿ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಜ್ಜಯ್ಯ ಅವರು ಸೂಚಿಸಿದ ಶುಭ ಮುಹೂರ್ತದಲ್ಲೇ ಡಿ.ಕೆ. ಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ ಎನ್ನಲಾಗಿದೆ.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸರ್ಕಾರ ರಚನೆಗೆ ಆಹ್ವಾನ ನೀಡಿರುವ ಅಧಿಕೃತ ಪತ್ರದಲ್ಲಿ ಪ್ರಮಾಣವಚನ ಸಮಾರಂಭದ ಸಮಯವನ್ನು ಸಂಜೆ 4:05 ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆ ಸ್ವೀಕರಿಸುವ ದಿನಾಂಕ ಮತ್ತು ಸಮಯದ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಅಂತಿಮವಾಗಿ ಜೂನ್ 3ರಂದು ಸಂಜೆ 4:05ಕ್ಕೆ ಪದಗ್ರಹಣ ಕಾರ್ಯಕ್ರಮ ನಿಗದಿಯಾಗಿದೆ.
ಡಿ.ಕೆ. ಶಿವಕುಮಾರ್ ಅವರು ಧಾರ್ಮಿಕ ನಂಬಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ನಾಯಕರಾಗಿದ್ದು, ಪಂಚಾಂಗ, ಶುಭ ಸಮಯ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಅನುಸರಿಸುವವರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಜ್ಯೋತಿಷಿಗಳು ಹಾಗೂ ಆಧ್ಯಾತ್ಮಿಕ ಮುಖಂಡರು ವಿವಿಧ ಸಮಯಗಳನ್ನು ಸೂಚಿಸಿದ್ದರೂ, ಅಜ್ಜಯ್ಯ ನೀಡಿದ ಮುಹೂರ್ತವನ್ನೇ ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.


ರಾಜ್ಯಪಾಲರ ಅಧಿಕೃತ ಅನುಮತಿ ಪತ್ರದಲ್ಲೂ ಇದೇ ಸಮಯ ಉಲ್ಲೇಖವಾಗಿರುವುದರಿಂದ ಪ್ರಮಾಣವಚನ ಸಮಾರಂಭದ ಸಮಯದ ಕುರಿತಿದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆಯ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಸಂಜೆ 4:05ಕ್ಕೆ ಮುಖ್ಯಮಂತ್ರಿ ಹುದ್ದೆಗೆ ಪ್ರಮಾಣವಚನ ಸ್ವೀಕರಿಸುವ ಮೂಲಕ ಕರ್ನಾಟಕದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ.
ಲೋಕಭವನದ ಗ್ಲಾಸ್ ಹೌಸ್ನಲ್ಲಿ ಸರಳ ಸಮಾರಂಭದ ಮೂಲಕ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
