ಐಪಿಎಲ್ ಫೈನಲ್ ವೇಳೆ ರಸ್ತೆಗಳಲ್ಲಿ ಆರ್ಸಿಬಿ ಸಂಭ್ರಮಾಚರಣೆಗೆ ಅವಕಾಶವಿಲ್ಲ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತ
ಬೆಂಗಳೂರು, ಮೇ 30: ಐಪಿಎಲ್ 2026 ಫೈನಲ್ ಪಂದ್ಯವನ್ನು ಹಿನ್ನೆಲೆಯಾಗಿ ಮಾಡಿಕೊಂಡು ರಸ್ತೆಗಳಲ್ಲಿ ಸಾರ್ವಜನಿಕ ಸಂಭ್ರಮಾಚರಣೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಪಿಎಲ್ ಫೈನಲ್ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಈಗಾಗಲೇ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದು ತಿಳಿಸಿದರು.
“ಸಾಮಾನ್ಯವಾಗಿ ಪಂದ್ಯ ಮುಗಿದ ಬಳಿಕ ಕೆಲವರು ರಸ್ತೆಗಳಿಗೆ ಬಂದು ವಾಹನಗಳಲ್ಲಿ ಸಂಚರಿಸುತ್ತಾ ಸಂಭ್ರಮಾಚರಣೆ ಮಾಡುತ್ತಾರೆ. ಕೆಲವೊಮ್ಮೆ ರಾತ್ರಿ ತಡರವರೆಗೆ ಶಬ್ದ ಮಾಲಿನ್ಯ ಉಂಟುಮಾಡುವುದು, ಪಟಾಕಿ ಸಿಡಿಸುವುದು ಹಾಗೂ ಇತರರಿಗೆ ತೊಂದರೆ ಉಂಟುಮಾಡುವ ಘಟನೆಗಳು ನಡೆಯುತ್ತವೆ. ಇವೆಲ್ಲವೂ ಕಾನೂನು ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತವೆ,” ಎಂದು ಅವರು ಹೇಳಿದರು.
ಜನರು ತಮ್ಮ ಮನೆಗಳಲ್ಲಿ, ಕ್ಲಬ್ಗಳಲ್ಲಿ, ಗೆಸ್ಟ್ ಹೌಸ್ಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಬಹುದು. ಆದರೆ ರಸ್ತೆಗಳಿಗೆ ಬಂದು ಕಾನೂನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಜನರು ಸಂಚರಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅನುಮತಿಯಿಲ್ಲದೆ ಮೆರವಣಿಗೆ ಅಥವಾ ವಿಜಯೋತ್ಸವ ನಡೆಸುವುದು ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
“ಜನರು ಸಂಭ್ರಮಾಚರಣೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆ ಆಗಬಾರದು. ರಸ್ತೆ ಸಂಚಾರಕ್ಕೆ ಅಡ್ಡಿಯಾಗಬಾರದು. ಸಾಮಾನ್ಯ ನಾಗರಿಕರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು,” ಎಂದು ಅವರು ಹೇಳಿದರು.
ನಗರದ ಎಲ್ಲಾ ವಿಭಾಗಗಳಲ್ಲೂ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಾರಾಂತ್ಯದಲ್ಲಿ ಹೇಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ತಪಾಸಣೆ ನಡೆಸಲಾಗುತ್ತದೆಯೋ, ಅದೇ ರೀತಿ ಐಪಿಎಲ್ ಫೈನಲ್ ದಿನವೂ ವಿಶೇಷ ತಪಾಸಣೆ ನಡೆಯಲಿದೆ ಎಂದು ಅವರು ಹೇಳಿದರು.
ಸಾರ್ವಜನಿಕರು ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ನಡೆಸಿ, ಕಾನೂನು ಹಾಗೂ ಸಾರ್ವಜನಿಕ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
