Home Uncategorized DBT: 339 ಕೋಟಿ ಬಾಕಿ ಪ್ರೋತ್ಸಾಹಧನ ಶೀಘ್ರವೇ ನೇರವಾಗಿ ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ...

DBT: 339 ಕೋಟಿ ಬಾಕಿ ಪ್ರೋತ್ಸಾಹಧನ ಶೀಘ್ರವೇ ನೇರವಾಗಿ ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ಪಾವತಿ -ರಾಜ್ಯ ಸರ್ಕಾರ ಸ್ಪಷ್ಟನೆ

16
0

ಬೆಳಗಾವಿ (ಸುವರ್ಣ ವಿಧಾನಸೌಧ): ಹಾಲು ಉತ್ಪಾದಕ ರೈತರಿಗೆ (dairy farmers) ಪ್ರಸ್ತುತ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನವನ್ನು (incentive) ಏರಿಕೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಸಂಬಂಧ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಸದನದಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ಸದ್ಯಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ್ದು, ಹಾಲಿ ಎಲ್ಲ ರೈತರಿಗೆ ಈಗ ನಿಗದಿ ಮಾಡಿರುವ ಐದು ರೂಪಾಯಿಯನ್ನು ನೀಡುತ್ತಾ ಬಂದಿದೆ ಎಂದು ಸ್ಪಷ್ಟಪಡಿಸಿದೆ.

ಹಾಲು ಉತ್ಪಾದಕರಿಗೆ ಸರ್ಕಾರ 5 ರೂಪಾಯಿಗಳ ಪ್ರೋತ್ಸಾಹ ಧನವನ್ನು ಪ್ರತಿ ತಿಂಗಳು ನೀಡಲಾಗುತ್ತಿದೆಯೇ? ಮತ್ತು ಪ್ರಸ್ತುತ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹಕ ಧನವನ್ನು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಕೇಳಿದ್ದ ಪ್ರಶ್ನೆಗೆ ಸದನದಲ್ಲಿ (Belagavi Winter Session) ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್‌ ಉತ್ತರಿಸಿದ್ದಾರೆ.

339 ಕೋಟಿ ರೂ. ಪ್ರೋತ್ಸಾಹಧನ ಬಾಕಿಯಿದೆ:

ಜಿಲ್ಲೆಯ ಹಾಲು ಉತ್ಪಾದಕರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಉಳಿಸಿಕೊಳ್ಳಲಾಗಿದೆಯೇ? ಉಳಿಸಿಕೊಂಡಿದ್ದರೆ ಮೊತ್ತವೆಷ್ಟು ಮತ್ತು ಯಾವಾಗ ಬಾಕಿ ಮೊತ್ತವನ್ನು ನೀಡಲಾಗುವುದು ಎಂದು ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಾಮಾನ್ಯ ವರ್ಗದ ಹೈನುಗಾರಿಕೆ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ 2022ರಲ್ಲಿ ಹಾಲಿ ಪ್ರೋತ್ಸಾಹ ಧನ ರೂ. 339.00 ಕೋಟಿಗಳು ಬಾಕಿಯಿರುತ್ತದೆ.

ನವೆಂಬರ್-2022ರ ತಿಂಗಳಲ್ಲಿ ಪರಿಶಿಷ್ಟ ಜಾತಿ ವರ್ಗದ ಹೈನುಗಾರರಿಗೆ ರೂ.5.00 ಕೋಟಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಹೈನುಗಾರರಿಗೆ ರೂ.3.00 ಕೋಟಿಗಳನ್ನು ಪಾವತಿಸಲು ಬಾಕಿಯಿರುತ್ತದೆ ಎಂದು ತಿಳಿಸಿದ್ದಾರೆ. ಅದೇ ಮಂಡ್ಯ ಜಿಲ್ಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ರೈತರಿಗೆ 36.55 ಕೋಟಿ ರೂಪಾಯಿ ಬಾಕಿ ಪ್ರೋತ್ಸಾಹಧನ ನೀಡಬೇಕಿದೆ .

ಮಂಡ್ಯ ಹಾಲು ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ನೌಕರರ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ 267 ಮಂದಿ ಕಾಯಂ ನೌಕರರು ಕಾರ್ಯನಿರ್ವಹಣೆ ಮಾಡುತ್ತಿದ್ದು, ಗುತ್ತಿಗೆ ಆಧಾರದಲ್ಲಿ 1057 ಮಂದಿ ಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ.

ಈ ಸಹಕಾರ ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದಿದೆಯೇ ಅಥವಾ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆಯೇ? ಹಾಗಿದ್ದಲ್ಲಿ, ಅವುಗಳ ಒಟ್ಟು ಸಂಖ್ಯೆ ಎಷ್ಟು ಎಂದು ಶಾಸಕ ದಿನೇಶ್‌ ಗೂಳಿಗೌಡ ಅವರು ಕೇಳಿರುವ ಪ್ರಶ್ನೆಗೆ ಒಕ್ಕೂಟದ ವ್ಯಾಪ್ತಿಯ ಒಟ್ಟು 1276 ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ 777 ಹಾಲು ಉತ್ಪಾದಕರ ಸಹಕಾರ ಸಂಘಗಳು ಸಂತ ಕಟ್ಟಡ ಹೊಂದಿದ್ದು, ಉಳಿದ 499 ಸಂಘಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಮಂಡ್ಯ ಹಾಲು ಒಕ್ಕೂಟದಿಂದ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಎಷ್ಟು ಲೀಟರ್‌ ಹಾಲನ್ನು ಖರೀದಿ ಮಾಡಲಾಗುತ್ತದೆ ಎಂಬ ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಮಂಡ್ಯ ಹಾಲು ಒಕ್ಕೂಟವು 2022-23ನೇ ಸಾಲಿನಲ್ಲಿ ನವೆಂಬರ್- 2022ರ ಮಾಹೆಯ ಅಂತ್ಯಕ್ಕೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸರಾಸರಿ 8,99,048 ಲೀಟರ್ ಹಾಲನ್ನು ರೈತರಿಂದ ಖರೀದಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ.

ಶೀಘ್ರವಾಗಿ ಪ್ರೋತ್ಸಾಹ ಧನವನ್ನು DBT (Direct Benefit Transfer) ಮುಖೇನ ನೇರವಾಗಿ ಹಾಲು ಉತ್ಪಾದಕರ ಆಧಾರ್ ಜೋಡಣೆ ಬ್ಯಾಂಕ್ ಖಾತೆಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಭು ಚವ್ಹಾಣ (Animal Husbandry minister Prabhu Chauhan) ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here