ಮಡಿಕೇರಿ:
ಕೊಡಗಿನ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರಿಗೆ ಬಿದ್ದಿದ್ದ ಬೆಂಗಳೂರಿನ ವ್ಯಕ್ತಿಯ ಶವ ಶುಕ್ರವಾರ ಪತ್ತೆಯಾಗಿದೆ.
ಬೆಂಗಳೂರಿನಿಂದ ಕೊಡಗಿಗೆ ಪ್ರವಾಸಕ್ಕೆ ತೆರಳಿದ್ದ ಟ್ಯಾಟೂ ಕಲಾವಿದ ಸಂದೀಪ್(46) ಅವರು ಗುರುವಾರ ಸಂಜೆ ಹಾರಂಗಿ-ಸೋಮವಾರಪೇಟೆ ಸೇತುವೆಯ ಮೇಲೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ನೀರಿಗೆ ಬಿದ್ದು ಮೃತಪಟ್ಟಿದ್ದರು.
ಸಂದೀಪ್ ಪತ್ತೆಗಾಗಿ ಗುರುವಾರ ರಾತ್ರಿಯವರೆಗೂ ಶೋಧ ಕಾರ್ಯಾಚರಣೆ ಮುಂದುವರಿದಿತ್ತು. ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ಆರಂಭವಾಗಿತ್ತು. ಕುಶಾಲನಗರ ಪೊಲೀಸರ ಸಹಕಾರದೊಂದಿಗೆ ದುಬಾರೆ ರಾಫ್ಟಿಂಗ್ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸಂದೀಪ್ ಮೃತದೇಹವನ್ನು ಹೊರ ತೆಗೆದಿದ್ದಾರೆ. ಘಟನೆ ನಡೆದ ಸ್ಥಳದ ಸಮೀಪವೇ ಮೃತದೇಹ ಪತ್ತೆಯಾಗಿದೆ.
ಪ್ರವಾಸಕ್ಕೆ ತೆರಳಿದ್ದ ಸಂದೀಪ್, ಗೋವಿಂದರಾಜು, ರಾಮ್‌ಕುಮಾರ್ ಮತ್ತು ರಂಜಿತ್ ಅವರು ಹಾರಂಗಿ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೃತ್ತಿಯಲ್ಲಿ ಟ್ಯಾಟೂ ಕಲಾವಿದರಾಗಿರುವ ಸಂದೀಪ್(46) ಅವರು ಸೇತುವೆಯ ಅಂಚಿನಿಂದ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಾರಿ ನೀರಿಗೆ ಬಿದ್ದಿದ್ದರು.