ದೇವನಹಳ್ಳಿ: ಪುರಸಭೆಯ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆಗೆ ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಬುಧವಾರ ಹೇಳಿದರು.
ದೇವನಹಳ್ಳಿ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಹಾಗೂ ಆಯುಧ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವನಹಳ್ಳಿ ತಾಲ್ಲೂಕಿನ ಸಣ್ಣೆ ಗ್ರಾಮ ಹಾಗೂ ಕೆಂಪತಿಮ್ಮನಹಳ್ಳಿಯಲ್ಲಿ ಪೌರಕಾರ್ಮಿಕರಿಗೆ ನಿವೇಶನ ಅಭಿವೃದ್ಧಿಪಡಿಸಲಾಗಿದೆ. 30 ದಿನಗಳೊಳಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ವಿಜಯಪುರ ಪುರಸಭೆಯ ಪೌರಕಾರ್ಮಿಕರಿಗೂ ಹಕ್ಕುಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ದೇವನಹಳ್ಳಿ ಟೌನ್ನಲ್ಲಿ ಸುಮಾರು 40–50 ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಬಜೆಟ್ನಲ್ಲಿ ಘೋಷಿಸಿರುವಂತೆ ದೇವನಹಳ್ಳಿ ಟೌನ್ನಲ್ಲಿ ಯುಜಿಡಿ (ಒಳಚರಂಡಿ ಕಾಮಗಾರಿ) ಶೀಘ್ರ ಪ್ರಾರಂಭಿಸಲಾಗುವುದು. ವಿಜಯಪುರ ಪುರಸಭೆಗೂ ಯುಜಿಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.
ದೇವನಹಳ್ಳಿಯಲ್ಲಿ ಕೆಂಪೇಗೌಡ ಸ್ಮಾರಕ, ಮೆಟ್ರೋ ರೂಪುರೇಷೆ, ವಿಜಯಪುರ ಹಾಗೂ ದೇವನಹಳ್ಳಿಗೆ ಕಾವೇರಿ ನೀರು ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ; ಶೀಘ್ರ ಮುಖ್ಯಮಂತ್ರಿಗಳನ್ನು ಕರೆಸಿ ಕಾರ್ಯಕ್ರಮ ಮಾಡಲಾಗುವುದು ಎಂದು ಸಚಿವರು ಹೇಳಿದರು. ದೇವನಹಳ್ಳಿಯಿಂದ ಬಾಗೇಪಲ್ಲಿವರೆಗೆ ದಶಪಥ ಕಾಮಗಾರಿ ಶೀಘ್ರ ಆರಂಭವಾಗಲಿದ್ದು, ದೇವನಹಳ್ಳಿಯಿಂದ ವೇಮಗಲ್ವರೆಗೆ 6 ಪಥದ ರಸ್ತೆ ಕಾಮಗಾರಿ ಆರಂಭವಾಗಿದೆ ಎಂದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 18,000 ಪೌರಕಾರ್ಮಿಕರನ್ನು ಖಾಯಂ ಮಾಡಲಾಗಿತ್ತು; ಈಗ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 15,000 ಪೌರಕಾರ್ಮಿಕರನ್ನು ಖಾಯಂ ಮಾಡಲಿದ್ದೇವೆ ಎಂದು ಅವರು ತಿಳಿಸಿದರು. ಪೌರಕಾರ್ಮಿಕರ ಕೆಲಸ ಅತ್ಯಂತ ಕಷ್ಟಕರವಾದದ್ದು, ಅವರಿಂದಲೇ ನಗರವನ್ನು ಸ್ವಚ್ಛವಾಗಿಡಲು ಸಾಧ್ಯ. ನಗರ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಭೂಮಿ, ಮನೆ, ನಿವೇಶನಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದ್ದು, ಪೌರಕಾರ್ಮಿಕರ ಕಷ್ಟಕ್ಕೆ ಸರ್ಕಾರ ಸದಾ ನೆರವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಾದ ಮುನಿಯಪ್ಪ, ರಮೇಶ್, ಕಲಾವತಿ ಮತ್ತು ನಿರ್ಮಲ ಅವರನ್ನು ಉತ್ತಮ ಕೆಲಸಗಾರರು ಎಂದು ಗುರುತಿಸಿ ಸನ್ಮಾನಿಸಲಾಯಿತು; ನಿವೃತ್ತ ಪೌರಕಾರ್ಮಿಕರನ್ನೂ ಸನ್ಮಾನಿಸಲಾಯಿತು. ಬಳಿಕ ದೇವನಹಳ್ಳಿ ಟೌನ್ನಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ನೂತನ ಹೂ ಮಾರುಕಟ್ಟೆ, ವಾರ್ಡ್ ನಂ. 11ರಲ್ಲಿ ಅಂಗನವಾಡಿ ನೂತನ ಕಟ್ಟಡ ಹಾಗೂ ವಾರ್ಡ್ ನಂ. 23ರಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ, ತಹಶೀಲ್ದಾರ್ ಅನಿಲ್, ಪುರಸಭೆ ಮುಖ್ಯಾಧಿಕಾರಿ ಶಿವಮೂರ್ತಿ, ಮುಖಂಡರಾದ ಪ್ರಸನ್ನ, ಚಿನ್ನಪ್ಪ, ಮಂಜುನಾಥ್ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
