ಬೆಂಗಳೂರು: ಕೈಗಾರಿಕೆಗಳು ತಮ್ಮ ಸುತ್ತಮುತ್ತಲಿನ ಗ್ರಾಮೀಣ ಮತ್ತು ಸರ್ಕಾರಿ ಶಾಲೆಗಳಿಗೆ ಸಿಎಸ್ಆರ್ ಮೂಲಕ ನೆರವು ನೀಡಬೇಕು; ಇಂತಹ ನೆರವನ್ನು ಸುಸ್ಥಿರ, ದೀರ್ಘಕಾಲೀನ ಬೆಳವಣಿಗೆಯ ಹೂಡಿಕೆ ಎಂದು ಪರಿಗಣಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಬುಧವಾರ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ‘ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಸಿಎಸ್ಆರ್ ಪಾಲುದಾರಿಕೆ’ ಕುರಿತು ನಡೆದ ಉದ್ಯಮಿಗಳು ಮತ್ತು ಸಿಇಒಗಳ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಉಪಸ್ಥಿತರಿದ್ದರು. ಈ ಕಾರ್ಯಕ್ಕೆ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ‘ನನ್ನ ಶಾಲೆ, ನನ್ನ ಜವಾಬ್ದಾರಿ’ ಉಪಕ್ರಮ ಆರಂಭಿಸಿದೆ ಎಂದು ಅವರು ಹೇಳಿದರು.
150ಕ್ಕೂ ಹೆಚ್ಚು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪಾಟೀಲ, ಸರ್ಕಾರದ ಪ್ರಯತ್ನಗಳಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಇದರಿಂದ ಕೈಗಾರಿಕೆ ಮತ್ತು ಶಿಕ್ಷಣ ಜೊತೆಜೊತೆಯಾಗಿ ಮುನ್ನಡೆಯುತ್ತಿವೆ ಎಂದರು. ಶಾಲೆಗಳಿಗೆ ಆಧುನಿಕ ಕಲಿಕಾ ಸಂಪನ್ಮೂಲ, ಸರಿಯಾದ ನೈರ್ಮಲ್ಯ ಸೌಲಭ್ಯ, ತರಬೇತಿ ಪಡೆದ ಶಿಕ್ಷಕರು ಮತ್ತು ಡಿಜಿಟಲ್ ಕಲಿಕಾ ಸಾಧನಗಳನ್ನು ಒದಗಿಸಲಾಗುತ್ತಿದೆ; ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಲು ಉದ್ಯಮಿಗಳ ಸಹಕಾರ ಅಗತ್ಯ ಎಂದು ಅವರು ಹೇಳಿದರು.
ಕರ್ನಾಟಕ ತಂತ್ರಜ್ಞಾನ ಮತ್ತು ಗುಣಮಟ್ಟದ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಚಿಪ್ ವಿನ್ಯಾಸಕರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಸೀಮೆನ್ಸ್ನಂತಹ ಪ್ರಮುಖ ಕಂಪನಿಗಳೊಂದಿಗೆ ಸರ್ಕಾರ ಕೈಜೋಡಿಸಿದೆ ಎಂದು ಅವರು ಹೇಳಿದರು. ಸಿಎಸ್ಆರ್ ನಿಧಿಯ ಪರಿಣಾಮಕಾರಿ ಬಳಕೆಗೆ ಕರ್ನಾಟಕ ಉದ್ಯೋಗ ಮಿತ್ರ ಶಿಕ್ಷಣ ಇಲಾಖೆಯೊಂದಿಗೆ ಕೆಲಸ ಮಾಡಲಿದೆ ಎಂದು ಪಾಟೀಲ ಭರವಸೆ ನೀಡಿದರು.
