ಬೆಂಗಳೂರು: ದಯಾನಂದ ಸಾಗರ್ ವಿಶ್ವವಿದ್ಯಾಲಯವು ಎನ್ವಿಡಿಯಾ ಸಹಯೋಗದಲ್ಲಿ ಭಾರತದ ಮೊದಲ ಶೈಕ್ಷಣಿಕ ‘ಎಐ ಫಸ್ಟ್ ಫ್ಯಾಕ್ಟರಿ’ ಸ್ಥಾಪಿಸಿರುವುದು ರಾಜ್ಯದ ಎಐ ಮತ್ತು ಡೀಪ್ಟೆಕ್ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಲಿದೆ ಎಂದು ಗೃಹ, ಐಟಿ-ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ದಯಾನಂದ ಸಾಗರ್ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಹಾಗೂ ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ಪ್ರೇಮಚಂದ್ರ ಸಾಗರ್ ಅವರನ್ನು ಭೇಟಿ ಮಾಡಿದ ಸಚಿವರು, ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಸ್ಥಾಪಿಸಿರುವ ಅತ್ಯಾಧುನಿಕ ಎಐ ಮೂಲಸೌಕರ್ಯದ ಕುರಿತು ಮಾಹಿತಿ ಪಡೆದರು.
ಎಐ ಫಸ್ಟ್ ಫ್ಯಾಕ್ಟರಿಯು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ವ್ಯವಸ್ಥೆ ಹೊಂದಿದ್ದು, 20 NVIDIA DGX B200 ಸೂಪರ್ಕಂಪ್ಯೂಟಿಂಗ್ ನೋಡ್ಗಳನ್ನು ಒಳಗೊಂಡಿದೆ ಎಂದು ಡಾ. ಪ್ರೇಮಚಂದ್ರ ಸಾಗರ್ ವಿವರಿಸಿದರು. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ನೈಜ ತಂತ್ರಜ್ಞಾನ ಮೂಲಸೌಕರ್ಯ ಬಳಸಿ ಕಲಿಯಬಹುದು; ಬೃಹತ್ ಪ್ರಮಾಣದ ಎಐ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ, ತರಬೇತುಗೊಳಿಸುವ ಮತ್ತು ಕಾರ್ಯರೂಪಕ್ಕೆ ತರುವ ಪ್ರಾಯೋಗಿಕ ಅನುಭವ ಪಡೆಯಬಹುದು ಎಂದರು.
ಕರ್ನಾಟಕದ ವಿಶ್ವವಿದ್ಯಾಲಯಗಳು ಅತ್ಯಾಧುನಿಕ ಎಐ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಇಂತಹ ಮೂಲಸೌಕರ್ಯಗಳನ್ನು ಶಿಕ್ಷಣ ಸಂಸ್ಥೆಗಳು ನಿರ್ಮಿಸುವುದರಿಂದ ರಾಜ್ಯದ ಯುವಜನರಿಗೆ ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಣತಿ ಪಡೆಯಲು ಉತ್ತಮ ಅವಕಾಶ ಸಿಗಲಿದೆ ಎಂದರು.
ಕರ್ನಾಟಕದ ಎಐ ಮತ್ತು ಡೀಪ್ಟೆಕ್ ಪರಿಸರ ವ್ಯವಸ್ಥೆ ಬಲಪಡಿಸಲು ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮ ವಲಯದ ನಡುವೆ ಸಹಯೋಗ ಅಗತ್ಯವಾಗಿದ್ದು, ದಯಾನಂದ ಸಾಗರ್ ವಿಶ್ವವಿದ್ಯಾಲಯದೊಂದಿಗೆ ಕಾರ್ಯನಿರ್ವಹಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ಅವರು ತಿಳಿಸಿದರು.
ರಾಜ್ಯ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರು ಹಾಗೂ ಕೆಐಟಿಎಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಉಪಸ್ಥಿತರಿದ್ದರು.
