Home ಬೆಂಗಳೂರು ನಗರ ಬಿಬಿಎಂಪಿ ಅಧಿಕಾರಿಗಳ ವಿಳಂಬ ನೀತಿಗೆ ಗುಡುಗಿದ ಡಿಸಿಎಂ

ಬಿಬಿಎಂಪಿ ಅಧಿಕಾರಿಗಳ ವಿಳಂಬ ನೀತಿಗೆ ಗುಡುಗಿದ ಡಿಸಿಎಂ

47
0

ಮಾತು ಕೇಳದವರಿಗೆ ಖಡಕ್‌ ಕ್ಲಾಸ್‌, ಮನೆಮನೆಗೂ ಹೋಗಿ ಪರೀಕ್ಷೆ ಮಾಡಿಸಲು ತಾಕೀತು

ಪಶ್ಚಿಮ ವಲಯದ ಸಭೆ ನಡೆಸಿದ ಡಾ. ಅಶ್ವತ್ಥನಾರಾಯಣ; ಪರೀಕ್ಷೆ, ರಿಸಲ್ಟ್‌, ಚಿಕಿತ್ಸೆಗೆ ವೇಗ ಕೊಡಲು ಆದೇಶ

ಬೆಂಗಳೂರು:

ಕೋವಿಡ್‌ ನಿರ್ವಹಣೆ ಬಗ್ಗೆ ಮಂದಗತಿಯ ನೀತಿ ಅನುಸರಿಸಿದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ; ನಿಮಗೆ ಇನ್ನೆಷ್ಟು ಸಲ ಹೇಳಬೇಕು? ಜಡತ್ವ ಬಿಡಿ, ಇಲ್ಲವೇ ಕ್ರಮ ಎದುರಿಸಿ ಎಂದು ಖಾರವಾಗಿ ಎಚ್ಚರಿಸಿದ ಪ್ರಸಂಗ ಬುಧವಾರ ನಡೆಯಿತು.

ಸಚಿವ ಕೆ. ಗೋಪಾಲಯ್ಯ ಅವರನ್ನು ಒಳಗೊಂಡಂತೆ ಬೆಂಗಳೂರು ಪಶ್ಚಿಮ ವಲಯದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ ಅವರು, ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರಲ್ಲದೆ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಎದುರಿನಲ್ಲಿಯೇ ವಿವಿಧ ಹಂತದ ಅಧಿಕಾರಿಗಳಿಗೆ ಚಳಿ ಬಿಡಿಸಿದರು.

ಕೆಲವೆಡೆ ಲಾಜಿಸ್ಟಿಕ್‌ ಸಮಸ್ಯೆ ಹಾಗೆಯೇ ಇದೆ, ಅದು ಕೂಡಲೇ ಸರಿಯಾಗಬೇಕು. ಎಲ್ಲಿಂದ ಸಮಸ್ಯೆ ಮೊದಲಾಯಿತೋ ಮತ್ತೆ ಅಲ್ಲಿಗೆ ಹೋಗುವುದು ಬೇಡ. ನಿಮಗೆ ಅಲ್ಲಿಗೇ ಹೋಗಿ ನಿಲ್ಲಬೇಕು ಎನ್ನುವ ಮನೋಭಾವ ಇದ್ದರೆ ಅದನ್ನು ಬದಲಿಸುವುದು ಹೇಗೆಂಬುದು ನಮಗೆ ಗೊತ್ತಿದೆ ಎಂದು ಅವರು ಖಡಕ್‌ ಆಗಿ ಹೇಳಿದರು.

DCM west zone covid meeting

ಮನೆ ಮನೆಗೂ ಹೋಗಿ:

ಬಿಬಿಎಂಪಿ ಆಗೋಗ್ಯ ಸಿಬ್ಬಂದಿ ಪ್ರತಿಯೊಂದು ಮನೆಗೂ ಹೋಗಿ ಹೇಳಬೇಕು. ರೋಗ ಲಕ್ಷಣಗಳಿದ್ದರೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಜನರ ಮನ ಒಲಿಸಬೇಕು ಎಂದು ನಾನು ಹೇಳುತ್ತಲೇ ಇದ್ದೇನೆ. ಕೆಮ್ಮು, ನೆಗಡಿ, ಶೀತ ಏನಾದರೂ ಇದ್ದರೆ ಕೂಡಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲವರು ಮಾತ್ರ ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಬಹುತೇಕರು ಮಾಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಒಂದೇ ಸಲ ಪಾಸಿಟೀವ್‌ ಕೇಸುಗಳು ಜಾಸ್ತಿಯಾಗಿ ಮೈಮೇಲೆ ಬಿದ್ದರೆ ಪರಿಸ್ಥತಿ ಕೈಮೀರಿ ಹೋಗುತ್ತದೆ. ಆಗ ಏನು ಮಾಡುತ್ತೀರಿ? ಬೆಂಗಳೂರು ಬಿಟ್ಟು ಓಡಿ ಹೋಗುತ್ತೀರಾ? ಎಂದು ನೇರವಾಗಿ ಪ್ರಶ್ನಿಸಿದರು ಡಿಸಿಎಂ.

ದಿನಕ್ಕೆ ಎಷ್ಟು ಸ್ಯಾಂಪಲ್‌ ಕಲೆಕ್ಟ್‌ ಆಗುತ್ತಿದೆ. ಎಷ್ಟು ರಿಸಲ್ಟ್‌ ಕೊಡಲಾಗುತ್ತಿದೆ ಎಂಬುದನ್ನು ಗಮನಿಸಬೇಕು. ಫಲಿತಾಂಶ ಕೊಡುವುದು ಬಾಕಿ ಉಳಿಯಬಾರದು. ಒಂದು ಭಾಗದಲ್ಲಿ ಪ್ರಕರಣಗಳು ಜಾಸ್ತಿಯಾದರೆ, ಮತ್ತೊಂದು ಭಾಗಕ್ಕೆ ಹರಡುವುದು ಕಷ್ಟವೇನಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇದನ್ನೇ ಎಷ್ಟು ಸಲ ಹೇಳಬೇಕು? ಎಂದು ಅವರು ಸಿಡಿಮಿಡಿಗೊಂಡರು.

ಪರೀಕ್ಷೆ, ರಿಸಲ್ಟ್‌ ಮತ್ತು ಚಿಕಿತ್ಸೆ:

ನಾವು ೧೦ ಅಥವಾ ೨೪ ಗಂಟೆಗಳ ಒಳಗಾಗಿ ರಿಸಲ್ಟ್‌ ಕೊಡಬೇಕು. ಕೇವಲ ಶೇ.೮ರಷ್ಟು ಜನ ಮಾತ್ರ ಆಸ್ಪತ್ರೆಗಳಲ್ಲಿದ್ದಾರೆ. ಇನ್ನು ಶೇ.೯೨ರಷ್ಟು ಸೋಂಕಿತರು ಮನೆಯಲ್ಲೇ ಐಸೋಲೇಷನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ಆಸ್ಪತ್ರೆ ಬೇಕೆಂದು ಬಂದರೆ ನಮ್ಮ ಗತಿ ಏನು? ಹೀಗಾಗಿ ಮೊದಲ ಹಂತದಲ್ಲಿಯೇ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ್ದೇ ಆದರೆ ಸೋಂಕಿನ ತೀವ್ರತೆಯನ್ನು ಖಂಡಿತಾ ಹತ್ತಿಕ್ಕಬಹುದು. ಆದರೆ, ಈ ಸೂತ್ರವನ್ನು ಅನುಷ್ಠಾನಕ್ಕೆ ತರಲು ಇನ್ನೂ ಮೀನಾಮೇಷ ಎಣಿಸಲಾಗುತ್ತದೆ. ಇದನ್ನು ಸಹಿಸಲಾಗದು ಎಂದು ಅವರು ಎಚ್ಚರಿಕೆ ಕೊಟ್ಟರು.

ನೀವು (ಅಧಿಕಾರಿಗಳು) ನೋಡಿದರೆ, ಯಾವ ಬ್ರ್ಯಾಂಡ್‌ ಕಿಟ್ ಖರೀದಿ ಮಾಡುವುದು? ಯಾವ ವೆಂಡರ್‌ನಿಂದ‌ ಔಷಧಿ ಕೊಳ್ಳುವುದು? ಯಾವ ಕಂಪನಿಯದು ತೆಗೆದುಕೊಳ್ಳುವುದು? ಅಂತ ಯೋಚನೆ ಮಾಡುತ್ತಾ ಸಮಯ ಪೋಲು ಮಾಡುತ್ತಿದ್ದೀರಿ? ಕೆಲಸ ಮಾಡುವ ರೀತಿ ಹೀಗಲ್ಲ, ಕೋವಿಡ್‌ ಸೋಂಕು ಎಷ್ಟು ವೇಗವಾಗಿ ಹರಡುತ್ತಿದೆಯೋ ನಮ್ಮ ಕೆಲಸ, ಕಾರ್ಯತಂತ್ರ ಅದಕ್ಕಿಂತ ವೇಗವಾಗಿರಬೇಕು. ಕಳಪೆ ನಿರ್ವಹಣೆಗೆ ಬೆಲೆ ತೆರಬೇಕಾಗುತ್ತದೆ. ಎಷ್ಟು ಸಲ ಹೇಳಬೇಕು ನಿಮಗೆ? ಪರೀಕ್ಷೆ, ರಿಸಲ್ಟ್‌ ಮತ್ತು ಚಿಕಿತ್ಸೆ ಅಷ್ಟೇ ಈಗ ಆಗಬೇಕಾದ್ದು. ಜನರ ಜೀವ ಉಳಿಸುವುದರ ಮುಂದೆ ಬೇರೆ ಗೊಂದಲ ಅನಗತ್ಯ ಎಂದು ಗುಡುಗಿದರು ಡಾ.ಅಶ್ವತ್ಥನಾರಾಯಣ.

DCM west zone covid meeting3

ಸೋಂಕಿನಿಂದ ಗುಣಮುಖರಾದವರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಅವರ ಬಗ್ಗೆ ಪರಿಶೋಧನೆ ಇಲ್ಲ. ಹಾಗಾದರೆ, ನಮ್ಮ ಪ್ರಯತ್ನಗಳು ಎಷ್ಟು ಪ್ರಮಾಣದಲ್ಲಿ ಫಲಕಾರಿಯಾಗಿದೆ ಎಂದು ತಿಳಿಯುವುದು ಹೇಗೆ? ಎಂದು ಅವರು ಪ್ರಶ್ನಿಸಿದರು.

ಇಡೀ ಬೆಂಗಳೂರಿನಲ್ಲಿ ದಿನಕ್ಕೆ ಬಿಬಿಎಂಪಿಗೆ ಎಷ್ಟು ಹಾಸಿಗೆಗಳು ಸಿಗುತ್ತಿವೆ ಎಂದಾಗ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು. ಇದರಿಂದ ಮತ್ತಷ್ಟು ಕುಪಿತರಾದ ಡಿಸಿಎಂ, ನನಗೆ ನಿಖರವಾದ ಮಾಹಿತಿ ಕೊಡಿ. ಅರೆಬರೆ ಮಾಹಿತಿ ಬೇಡ. ಅಂಕಿ-ಅಂಶಗಳನ್ನು ಬಾಯಿಮಾತಿನ ಮೂಲಕ ಬೇಡ. ದಾಖಲೆ ಸಮೇತ ಕೊಡಿ ಎಂದು ತಾಕೀತು ಮಾಡಿದರು.‌

ಡಿಸಿಎಂ ಮಾತಿಗೆ ದನಿಗೂಡಿಸಿದ ದಿನೇಶ್:

ಡಿಸಿಎಂ ಮಾತಿಗೆ ದನಿಗೂಡಿಸಿದ ಗಾಂಧಿನಗರದ ಶಾಸಕ ದಿನೇಶ್‌ ಗುಂಡೂರಾವ್ ಅವರು, ಮೆಡಿಕಲ್ ಕಿಟ್‌ ಖರೀದಿಯಲ್ಲಿ ವಿಳಂಬ ಮಾಡುವುದು ಬೇಡ. ಸಮಯದ ಪೋಲು ಮಾಡಿದಷ್ಟು ಜೀವಗಳು ಹೋಗುವುದು ಹೆಚ್ಚಾಗುತ್ತಿದೆ. ಇದನ್ನು ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದರು. ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್‌ ಅಹಮದ್‌ ಇದೇ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.

ಜನರು ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಆದರೆ, ಪರೀಕ್ಷೆ ಮಾಡುವ ವ್ಯವಸ್ಥೆ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಇಲ್ಲ. ಅಲ್ಲಿನ ವ್ಯವಸ್ಥೆ ಸಾಲದು. ವಾರ್ಡುವಾರು ಪರೀಕ್ಷೆ ಮಾಡಬೇಕು, ಅಗ ಹೆಚ್ಚು ಕೇಸುಗಳು ಬರುತ್ತವೆ ಎಂಬ ಅಂಶವನ್ನು ಜಮೀರ್‌ ಅವರು ಡಿಸಿಎಂ ಗಮನಕ್ಕೆ ತಂದರು. ಅದನ್ನು ಕೂಡಲೇ ಬಗೆಹರಿಸಲಾಗುವುದು, ಹೆಚ್ಚೆಚ್ಚು ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ಕ್ಷಿಪ್ರವಾಗಿ ಮಾಡಲಾಗುವುದು ಎಂದು ಡಿಸಿಎಂ ಅವರು ಶಾಸಕರಿಗೆ ಭರವಸೆ ನೀಡಿದರು.

DCM west zone covid meeting2

ಪಿಪಿಎ ಕಿಟ್‌ ವಿತರಣೆ

ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿಗಳು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಪಿಪಿಎ ಕಿಟ್‌ ವಿತರಣೆ ಮಾಡಿದರು.

ಆ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ನಿಮ್ಮ ಆರೋಗ್ಯವನ್ನು ಚನ್ನಾಗಿ ನೋಡಿಕೊಳ್ಳುವಂತೆ ಸೂಚನೆ ಕೊಟ್ಟರಲ್ಲದೆ, ನಿಮಗೆ ಏನಾದರೂ ಅಗತ್ಯವಿದ್ದರೆ ತಿಳಿಸಿ ಎಂದರು.

LEAVE A REPLY

Please enter your comment!
Please enter your name here