ಬೆಂಗಳೂರು ಐಎಸ್ಐಎಸ್ ನೇಮಕಾತಿ ಪ್ರಕರಣ: ಇಡಿ ದಾಳಿ, ₹7.50 ಲಕ್ಷ ಅಪರಾಧದ ಹಣ ಫ್ರೀಜ್
ಬೆಂಗಳೂರು, ಜುಲೈ 23: ಐಎಸ್ಐಎಸ್ ನೇಮಕಾತಿ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಿದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಬೆಂಗಳೂರಿನ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ₹7.50 ಲಕ್ಷ ಮೌಲ್ಯದ ಅಪರಾಧದ ಆದಾಯವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ), 2002ರ ಅಡಿಯಲ್ಲಿ ಫ್ರೀಜ್ ಮಾಡಿದೆ.
ಇಡಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಜುಲೈ 21ರಂದು ಬೆಂಗಳೂರು ವಲಯ ಕಚೇರಿ ಈ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಖಲಿಸಿದ ಎಫ್ಐಆರ್ ಆಧರಿಸಿ ದಾಖಲಾದ ಎನ್ಫೋರ್ಸ್ಮೆಂಟ್ ಕೇಸ್ ಇನ್ಫರ್ಮೇಷನ್ ರಿಪೋರ್ಟ್ (ಇಸಿಐಆರ್) ಅನ್ವಯ ತನಿಖೆ ಕೈಗೊಳ್ಳಲಾಗಿತ್ತು. ಶೋಧದ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.


ಎನ್ಐಎ, ಐಕ್ರಾ ವೆಲ್ಫೇರ್ ಟ್ರಸ್ಟ್, ಗೈಡನ್ಸ್ ಫಾರ್ ಮ್ಯಾಂಕೈಂಡ್ (ಜಿಎಫ್ಎಂ) ಟ್ರಸ್ಟ್ ಹಾಗೂ ಬೆಂಗಳೂರಿನ ಕೆಲವು ವ್ಯಕ್ತಿಗಳ ವಿರುದ್ಧ ಐಎಸ್ಐಎಸ್ ನೇಮಕಾತಿ ಚಟುವಟಿಕೆಗಳ ಆರೋಪದ ಮೇರೆಗೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯ ಸೆಕ್ಷನ್ಗಳು 17, 18 ಮತ್ತು 18ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಬಳಿಕ ಇರ್ಫಾನ್ ನಾಸಿರ್, ಅಹಮದ್ ಅಬ್ದುಲ್ ಕಾದರ್, ಡಾ. ಮೊಹಮ್ಮದ್ ತೌಕೀರ್ ಮಹ್ಮೂದ್ ಮತ್ತು ಜುಹೈಬ್ ಹಮೀದ್ ಶಕೀಲ್ ಮನ್ನಾ ಅಲಿಯಾಸ್ ಜೋಹೈಬ್ ಮನ್ನಾ ಅವರನ್ನು ಬಂಧಿಸಲಾಗಿದ್ದು, ಮೊಹಮ್ಮದ್ ಶಿಹಾಬ್ ತಲೆಮರೆಸಿಕೊಂಡಿರುವುದಾಗಿ ತಿಳಿಸಲಾಗಿದೆ. ಆರೋಪಪಟ್ಟಿಯಲ್ಲಿ ಐವರನ್ನೂ ನಿಷೇಧಿತ ಉಗ್ರ ಸಂಘಟನೆ ಐಎಸ್ಐಎಸ್/ಐಸಿಲ್/ದಾಯೇಶ್ಗೆ ಸಂಬಂಧ ಹೊಂದಿರುವ ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಎನ್ಐಎ ಆರೋಪಪಟ್ಟಿಯ ಪ್ರಕಾರ, ಆರೋಪಿಗಳು “ಐಕ್ರಾ ಕ್ಯಾಂಪ್” ಹಾಗೂ ವಾರದ “ಖುರಾನ್ ಸರ್ಕಲ್” ಅಧ್ಯಯನ ಸಭೆಗಳ ಮೂಲಕ ಬೆಂಗಳೂರಿನ ದುರ್ಬಲ ಮುಸ್ಲಿಂ ಯುವಕರನ್ನು ಮತೀಯ ಅತಿರೇಕದತ್ತ ತಳ್ಳಿಸಿ ಐಎಸ್ಐಎಸ್ಗೆ ನೇಮಕ ಮಾಡಿಕೊಳ್ಳುವ ಸಂಚು ರೂಪಿಸಿದ್ದರು. ವೈಯಕ್ತಿಕ ದೇಣಿಗೆ, ಟ್ರಸ್ಟ್ಗಳು ಹಾಗೂ ವೈಯಕ್ತಿಕ ಉಳಿತಾಯದಿಂದ ಹಣ ಸಂಗ್ರಹಿಸಿ, ಟರ್ಕಿ ಮಾರ್ಗವಾಗಿ ಸಿರಿಯಾಕ್ಕೆ ಕಳುಹಿಸಿ ಐಎಸ್ಐಎಸ್ ಪರ ಹೋರಾಡಲು ನೆರವು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇಡಿ ತನಿಖೆಯಲ್ಲಿ ಆರೋಪಿಗಳು ಹಾಗೂ ಐಕ್ರಾ ವೆಲ್ಫೇರ್ ಟ್ರಸ್ಟ್ ಮತ್ತು ಜಿಎಫ್ಎಂ ಟ್ರಸ್ಟ್ನ ಟ್ರಸ್ಟಿಗಳ ಮೂಲಕ ಹಣ ಸಂಗ್ರಹಿಸಿ, ಅದನ್ನು ಐಎಸ್ಐಎಸ್ ನೇಮಕಾತಿ ಮತ್ತು ನೆರವಿಗೆ ಬಳಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಹೇಳಿದೆ. ಪಿಎಂಎಲ್ಎ ಅಡಿಯಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.
