ಬೆಂಗಳೂರು/ಮಾಗಡಿ:
ನಾಡಪ್ರಭು ಕೆಂಪೇಗೌಡರ ಜನ್ಮದಿನದ ಅಂಗವಾಗಿ ಶಾಸಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ನಗರದ ಮೇಖ್ರಿ ಸರ್ಕಲ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣ ಹಾಗೂ ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿರುವ ಪ್ರತಿಮೆ/ಭಾವಚಿತ್ರಗಳಿಗೆ ಮಂಗಳವಾರದಂದು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಮೇಖ್ರಿ ಸರ್ಕಲ್ ಸಮೀಪ ಇರುವ ಗಡಿ ಗೋಪುರದ ಸಮೀಪ ಕೆಂಪೇಗೌಡರ ಪ್ರತಿಮೆಗೆ ಮನಮ ಸಲ್ಲಿಸಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಬೈರತಿ ಸುರೇಶ ಸೇರಿದಂತೆ ಹಲವರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ ಅವರು, “ಬಿಜೆಪಿ ಸರಕಾರದ ಅವಧಿಯಲ್ಲಿ ಕೆಂಪೇಗೌಡರ ವೀರಸಮಾಧಿ ಇರುವ ಕೆಂಪಾಪುರದ ಸಮಗ್ರ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಕೆಲಸವು ತ್ವರಿತವಾಗಿ ಮುಗಿದು, ಈ ಸ್ಥಳವು ದೊಡ್ಡ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮಲಿ. ಈ ಕೆಲಸ ವನ್ನು ಮಾನ್ಯ ಉಪ ಮುಖ್ಯಮಂತ್ರಿ ಯವರು ಮಾಡಬೇಕು ಎಂದು ಮನವಿ ಮಾಡಿದರು.
ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಅಂಗವಾಗಿ ನಮ್ಮ ರಾಮನಗರ ಜಿಲ್ಲೆಯ ಕೆಂಪಾಪುರದಲ್ಲಿರುವ ಅವರ ವೀರ ಸಮಾಧಿಗೆ ಭೇಟಿ ನೀಡಿ, ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
— Dr. C.N. Ashwath Narayan (@drashwathcn) June 27, 2023
ನಮ್ಮ ಸರ್ಕಾರದ ಅಡಿಯಲ್ಲಿ ಈ ಪುಣ್ಯ ಸ್ಥಳವನ್ನು ಶ್ರದ್ಧಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ದಿಶೆಯಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ.
ಪಕ್ಷದ ಯುವ ನಾಯಕರಾದ ಶ್ರೀ… pic.twitter.com/TDZNnLqjJE
ಸಮಾಧಿ ಸ್ಥಳ ಅಭಿವೃದ್ಧಿಗೆ ಅಗತ್ಯವಾಗಿದ್ದ ಭೂಸ್ವಾಧೀನ ಈಗಾಗಲೇ ಮುಗಿದಿದೆ. ಜಮೀನನ್ನು ಕಳೆದುಕೊಂಡವರಿಗೆ ಆಶ್ರಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸಿ, ಹೊಸ ಕಾಲೋನಿಯನ್ನೇ ಕಟ್ಟುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಈಗಿನ ಸರಕಾರವು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು ಎಂದು ಅವರು ನುಡಿದರು.
ಕೆಂಪೇಗೌಡರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಣೆಯಾಗಬೇಕು. ಇದರ ಮೂಲಕ ಸುಂದರ ಸಮಾಜ ನಿರ್ಮಾಣವಾಗಬೇಕು. ಇಲ್ಲದೆ ಹೋದರೆ, ಬರೀ ಸ್ವಾರ್ಥವೇ ತುಂಬಿ ಎಲ್ಲವೂ ಹಾಳಾಗುತ್ತದೆ. ನಾಡಪ್ರಭುಗಳಿಗೆ ನಮಿಸುವುದೇ ಒಂದು ಪುಣ್ಯದ ಕೆಲಸವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೆಂಪಾಪುರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲೆಯ ಬಿಜೆಪಿ ಮುಖಂಡರಾದ ಪ್ರಸಾದ್ ಗೌಡ, ಗೌತಮ್, ರಾಜೇಶ್, ಗಂಗಣ್ಣ, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.