Home ರಾಜಕೀಯ ಯಡಿಯೂರಪ್ಪನವರ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ ಒತ್ತಾಯ

ಯಡಿಯೂರಪ್ಪನವರ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ ಒತ್ತಾಯ

37
0

ಬೆಂಗಳೂರು:

ಬಿಜೆಪಿಯಲ್ಲಿನ ಆಂತರಿಕ ಕಲಹದಿಂದ ರಾಜ್ಯದ ಜನರ ಬದುಕು ದುಸ್ಥರವಾಗಿದೆ. ಯಡಿಯೂರಪ್ಪನವರ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ ಅವರು ಒತ್ತಾಯಿಸಿದ್ದಾರೆ.

ಶುಕ್ರವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಯಡಿಯೂರಪ್ಪನವರಿಗೆ ಈ ಇಳಿ ವಯಸ್ಸಿನಲ್ಲಿ ಇಂತಹ ಸ್ಥಿತಿ ಬರಬಾರದಾಗಿತ್ತು. ಯಡಿಯೂರಪ್ಪನವರಿಗೆ ಸ್ವಲ್ಪವಾದರೂ ಸ್ವಾಭಿಮಾನ ಇದ್ದಿದ್ದರೆ ಬಿಜೆಪಿಯಲ್ಲಿನ ಆಂತರಿಕ ವಿದ್ಯಾಮಾನಗಳನ್ನು ನೋಡಿ ರಾಜೀನಾಮೆ ನೀಡಬೇಕಿತ್ತು. ಆದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಅಂಟಿಕೊಂಡಿರೋದು ನೋಡಿದರೆ ಅವರು ಅಧಿಕಾರ ಮತ್ತು ಲೂಟಿಯಲ್ಲಿ ತಲ್ಲೀನರಾಗಿದ್ದಾರೆ ಎಂಬುದು ಅರ್ಥವಾಗುತ್ತದೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಸಿಗುತ್ತಿಲ್ಲ. ಬೀಜ ಕೇಳಿದ ರೈತರಿಗೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳಾಗಲಿ ಅಥವಾ ಮಂತ್ರಿಗಳಾಗಲಿ ಎಲ್ಲಿದ್ದಾರೆ? ಇನ್ನು ನೂತನ ಶಿಕ್ಷಣ ನೀತಿ ಪ್ರಕಾರ 4 ವರ್ಷದ ಪದವಿಯಲ್ಲಿ ಕೇವಲ 1 ವರ್ಷ ಕನ್ನಡ ಭಾಷೆಗೆ ಅವಕಾಶ ನೀಡಿ ಮಾತೃದ್ರೋಹ ಬಗೆಯಲಾಗಿದೆ. ಮೇಕೆದಾಟು ಯೋಜನೆಗೆ ಗ್ರೀನ್ ಟ್ರಿಬ್ಯುನಲ್ ಅನುಮತಿ ನೀಡಿದ್ದರೂ ಅದರ ನೀರು ಬಳಕೆ ಮಾಡಿಕೊಳ್ಳಲು ಸರ್ಕಾರದ ನಿರ್ಧಾರ ಏನು ಎಂಬುದು ಗೊತ್ತಿಲ್ಲ. ಇದೆಲ್ಲವೂ ರಾಜ್ಯದಲ್ಲಿ ಜನಪರ ಸರ್ಕಾರ ಇಲ್ಲ ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಮೂರು ಬಣಗಳ ಕಚ್ಚಾಟ:

‘ಬಿಜೆಪಿ ಸರ್ಕಾರ ಮೂರು ಬಣಗಳಾಗಿವೆ. ಯಡಿಯೂರಪ್ಪನವರ ಬದಲಾವಣೆ ಆಗಬಾರದು ಎಂದು ಒಂದು ವರ್ಗ, ಆಗಬೇಕು ಎಂದು ಮತ್ತೊಂದು ವರ್ಗ, ಪಕ್ಷದ ನಾಯಕರು ಹೇಳಿದಂತೆ ಕೇಳುತ್ತೇವೆ ಎಂದು ಮತ್ತೊಂದು ವರ್ಗ ಇದೆ. ಬಿಜೆಪಿ ಶಾಸಕರಾದ ವಿಶ್ವನಾಥ್ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಡಿಎ ಮುಖ್ಯಸ್ಥರ ವಿರುದ್ಧ ‘Corrupt Bastard’ ಎಂದು ಪದ ಬಳಕೆ ಮಾಡಿದ್ದಾರೆ. ಬಿಜೆಪಿಯ ಗುಂಪುಗಾರಿಕೆ ಯಾವ ಹಂತಕ್ಕೆ ಹೋಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? 420, ಕಳ್ಳರು, ರಾಕ್ಷಸರು, ಲೂಟಿಕೋರರು, ಅರೆ ಹುಚ್ಚರು ಎಂದೆಲ್ಲಾ ಪರಸ್ಪರ ನಿಂದಿಸುತ್ತಿದ್ದಾರೆ. ಬಿಜೆಪಿಯನ್ನು ಶಿಸ್ತಿನ ಪಕ್ಷ ಅಂತಾರೆ. ಎಲ್ಲಿದೆ ಶಿಸ್ತು?’ ಎಂದು ಪ್ರಶ್ನಿಸಿದರು.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಶಾಸಕ ಬೆಲ್ಲದ್ ಅವರು ಸಿಎಂ ಹಾಗೂ ಬೆಂಬಲಿಗರು ತಮ್ಮ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಹಾಗೂ ನನ್ನ ಎಲ್ಲ ಚಟುವಟಿಕೆಯನ್ನು ಹಿಂಬಾಲಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪ ಮಾಡುತ್ತಿರೋದು ನಾವಲ್ಲ, ಆಡಳಿತ ಪಕ್ಷದ ಹಾಗೂ ಆರ್ ಎಸ್ಎಸ್ ಹಿನ್ನಲೆಯ ಶಾಸಕರು. ಅಂದರೆ ನಮ್ಮ ರಾಜ್ಯದಲ್ಲಿ ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ ಇಲ್ಲವಾಗಿದೆ’ ಎಂದರು.

ಶೇ.25-30ರಷ್ಟು ಪರ್ಸೆಂಟ್ ಕಮಿಷನ್:

‘ವಿಶ್ವನಾಥ್ ಅವರು ಹೇಳಿದಂತೆ ನೀರಾವರಿ ಇಲಾಖೆಯಲ್ಲಿ ಹಣಕಾಸೂ ಸಚಿವಾಲಯ ಹಾಗೂ ನೀರಾವರಿ ಮಂಡಳಿ ಅನುಮತಿ ಇಲ್ಲದೆ 20 ಸಾವಿರ ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗಿದೆ. ಈ ಸರ್ಕಾರ ಕಂಟ್ರಾಕ್ಟರ್ ಪರ ಎಂದಿದ್ದಾರೆ. ಇದರಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸಿಎಂ ಹಾಗೂ ಅವರ ಮಗ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಬಿಜೆಪಿ ಪಕ್ಷದವರೇ ತಮ್ಮ ಸರ್ಕಾರಜಲ್ಲಿ ಶೇ. 25-30ರಷ್ಟು ಕಮಿಷನ್ ನಡೆಯುತ್ತಿದೆ ಎಂದಿದ್ದಾರೆ. ಅಂದರೆ ನೀರಾವರಿ ಇಲಾಖೆಯ ಈ ಟೆಂಡರ್ ನ್ಲಿ ಸುಮಾರು 5-6 ಸಾವಿರ ಕೋಟಿಯಷ್ಟು ಕಿಕ್ ಬ್ಯಾಕ್ ಪಡೆಯಲಾಗಿದೆ’ ಎಂದು ತಿಳಿಸಿದರು.

‘ನಾನು ತಿನ್ನುವುದಿಲ್ಲ, ತಿನ್ನಲು ಬಿಡಲ್ಲ ಅಂದಿದ್ದ ಮೋದಿಯವರೇ ಎಲ್ಲಿದ್ದೀರಾ? ಸಿದ್ದರಾಮಯ್ಯ ಸರ್ಕಾರ ಇದ್ದಾಗ 10 ಪರ್ಸೆಂಟ್ ಸರ್ಕಾರ ಅಂತಾ ಹೇಳಿದ್ದಿರಿ. ಅದಕ್ಕೆ ನಾನು ನೋಟಿಸ್ ಕೊಟ್ಟಗಾ ನಿಮಗೆ ಉತ್ತರ ನೀಡಲಾಗಲಿಲ್ಲ. ನಿಮ್ಮ ಶಾಸಕರೇ ಲೂಟಿಯ ಆರೋಪ ಮಾಡುತ್ತಿದ್ದಾರೆ. ಕೇಂದ್ರ ನಾಯಕರ ಪ್ರೋತ್ಸಾಹ ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಹಾಗಾದರೆ ಇದರಲ್ಲಿ ಬಿಜೆಪಿಯ ಕೇಂದ್ರ ನಾಯಕರಿಗೆ ಎಷ್ಟು ಪರ್ಸೆಂಟ್ ಹೋಗುತ್ತಿದೆ? ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೂ ಕೊಳ್ಳೆ ಹೊಡೆಯಲು ಬಂದಿದ್ದಾರಾ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

ಅಲ್ಪಮತದ ಸರ್ಕಾರ ಉಳಿಸಲು ಕುದುರೆ ವ್ಯಾಪಾರ:

‘ಬಿಜೆಪಿಯ 128 ಶಾಸಕರ ಪೈಕಿ ಯಡಿಯೂರಪ್ಪನವರ ಪರ ಸಹಿ ಸಂಗ್ರಹದಲ್ಲಿ 65 ಶಾಸಕರು ಮಾತ್ರ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಗುಂಪುಗಾರಿಕೆ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ಸರ್ಕಾರ ಅಲ್ಪಮತದ ಸರ್ಕಾರವಾಗಿದೆ. ಮುಖ್ಯಮಂತ್ರಿಗಳ ಪರ ಬೆಂಬಲ ಪಡೆಯಲು ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ. ಯಡಿಯೂರಪ್ಪನವರ ಗುಂಪು ಶಾಸಕರ ಸೆಳೆಯಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದೆಲ್ಲದರಿಂದ ರಾಜ್ಯದ ಅಭಿವೃದ್ಧಿ ಕುಠಿತವಾಗಿದೆ. ಯಾವ ಮುಖ ಇಟ್ಟುಕೊಂಡು ಸರ್ಕಾರ ನಡೆಸುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.

‘ಗುಂಪುಗಾರಿಕೆ, ಕುದುರೆ ವ್ಯಾಪಾರ ಹಾಗೂ ಭ್ರಷ್ಟಾಚಾರಗಳ ಕಾರಣದಿಂದಾಗಿ ಈ ಕೂಡಲೇ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸುತ್ತೇನೆ. ಬಿಜೆಪಿಯವರ ಪ್ರಕಾರ 5-6 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ. ವಿಶ್ವನಾಥ್ ಅವರ ಪ್ರಕಾರ ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ನಲ್ಲಿ ಹಣ ಇಡಲಾಗಿದೆ, ಸಿಎಂ ಕುಟುಂಬದವರು ಕಿಯಾ ಕಾರ್ ಸ್ಟೇಟ್ ಏಜೆನ್ಸಿ ಪಡೆದಿದ್ದಾರೆ, ಮಾರಿಷಿಯಸ್ ಗೆ ಹೋಗಿ ಹಣವಿಟ್ಟು ಬಂದಿದ್ದಾರೆ ಎಂದು ಬಿಜೆಪಿ ನಾಯಕರೇ ಆರೋಪಿಸುತ್ತಿದ್ದಾರೆ. ನೀರಾವರಿ ಇಲಾಖೆ ಸೇರಿದಂತೆ ಈ ಎಲ್ಲ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ಹೆಚ್.ಎಂ ರೇವಣ್ಣ ಅವರ ಮಾತುಗಳು…

‘ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಎಲ್ಲ ರಂಗದಲ್ಲೂ ಭ್ರಷ್ಟಾಚಾರ ಜತೆಗೆ ಆಡಳಿತ ಕುಸಿದಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಏನಾಗುತ್ತಿದೆ, ಕೋವಿಡ್ ನಿರ್ವಹಣೆ ಹೇಗಿದೆ ಅಂತಲೂ ನಾವು ನೋಡುತ್ತಿದ್ದೇವೆ. ರಾಮಮಂದಿರ ಕಟ್ಟುತ್ತೇವೆ ಎಂದು ರಥಯಾತ್ರೆ ಮಾಡಿ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆಯಿಂದ ಹಣದವರೆಗೂ ದೇಣಿಗೆ ಪಡೆದರು. ಆದರೆ ಯಾವುದಕ್ಕೂ ಲೆಕ್ಕ ಇಲ್ಲ. ಸುಪ್ರೀಂ ಕೋರ್ಟ್ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಮೇರೆಗೆ ರಚನೆಯಾದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಲ್ಲಿ 12,080 ಚ.ಮೀ ಜಮೀನನ್ನು 18.05 ಕೋಟಿ ರೂ.ಗೆ ಖರೀದಿ ಮಾಡಲಾಗಿದೆ.

former minister H M Revanna

18-03-2021ರಲ್ಲಿ ಈ ಭೂಮಿಯ ಮೂಲ ಮಾಲೀಕರು ಕೇವಲ 2 ಕೋಟಿಗೆ ರವಿ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಮಾರುತ್ತಾರೆ. ಇದಾದ ಐದು ನಿಮಿಷದ ನಂತರ ಈ ಭೂಮಿಯನ್ನು ರವಿ ತಿವಾರಿ ಹಾಗೂ ಸುಲ್ತಾನ್ ಅನ್ಸಾರಿ ಅವರು 18.5 ಕೋಟಿ ರೂ.ಗೆ ಮಾರುತ್ತಾರೆ. ಈ ಟ್ರಸ್ಟ್ ನಲ್ಲಿರುವ ಬಿಜೆಪಿ ನಾಯಕರಾದ ಅನಿಲ್ ಮಿಶ್ರಾ, ಅಯೋಧ್ಯೆಯ ಮಾಜಿ ಮೇಯರ್ ಋಷಿಕೇಶ್ ಉಪದ್ಯಾಯ ಅವರು ಈ ಮಾರಾಟಕ್ಕೆ ಸಾಕ್ಷಿಯಾಗಿದ್ದಾರೆ. ಇವರು ರಾಮನ ಹೆಸರಿನಲ್ಲೂ ಹಗಲು ದರೋಡೆ ಮಾಡುತ್ತಿದ್ದಾರೆ. ಭಾರತ ಸಂಸ್ಕೃತಿ, ಹಿಂದು ಧರ್ಮ ಉಳಿಸುತ್ತೇವೆ ಎಂದು ಹೊರಟವರು ದೇವರ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ.

ಕೋವಿಡ್ ಸಮಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ 20 ಲಕ್ಷ ಕೋಟಿ ಪರಿಹಾರ ನೀಡುತ್ತೇವೆ ಎಂದರು. ಅದರಲ್ಲಿ ರಾಜ್ಯಕ್ಕೆ ಎಷ್ಟು ಬಂದಿದೆ, ಜನರಿಗೆ ಎ,ಟು ಸಿಕ್ಕಿದೆ ಲೆಕ್ಕವೇ ಇಲ್ಲ. ಇನ್ನು ರಾಜ್ಯ ಬಿಜೆಪಿ ಸರ್ಕಾರ 1200 ಕೋಟಿ ಘೋಷಿಸಿದ್ದು, ಇನ್ನು ಹಣ ಬಿಡುಗಡೆಯಾಗಿಲ್ಲ. ಇದರಲ್ಲಿ 11 ವಿಂಗಡಣೆಗಳಿವೆ. ಜತೆಗೆ ಆಧಾರ್, ಬ್ಯಾಂಕ್ ಖಾತೆ, ಬಿಪಿಎಲ್ ಸಂಖ್ಯೆ ನೀಡಬೇಕಾಗಿದೆ. ಇದರಿಂದ ಫಲಾನುಭವಿಗಳಿಗೆ ನೆರವು ತಲುಪದೆ, ಪರಿಹಾರ ಪ್ಯಾಕೇಜ್ ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿದೆ.

ಈ ಸರ್ಕಾರ ಹಾಸಿಗೆ, ಔಷಧಿಗಳಲ್ಲಿ ಕಮಿಷನ್ ಪಡೆಯುತ್ತಿದೆ. ಈ ಸರ್ಕಾರದಲ್ಲಿ ಮಂತ್ರಿಗಳ ಸಮನ್ವಯತೆ ಇಲ್ಲವಾಗಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕರಾದ ಎಂ ರಾಮಚಂದ್ರಪ್ಪ, ಎಂ ಎ ಸಲೀಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here