ಬಡವರಿಗೆ ಅನ್ನ, ವಸತಿ, ಆರೋಗ್ಯ, ಉದ್ಯೋಗ: ಬದ್ಧತೆಯಿಂದ ಕಾರ್ಯನಿರ್ವಹಿಸುವದಾಗಿ ಸಚಿವ ವಿ.ಸೋಮಣ್ಣ ಭರವಸೆ
ಬೆಂಗಳೂರು:
ಬಡವರಿಗೆ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ಒದಗಿಸುವ ಬದ್ಧತೆಯಂತೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಚಾಲಕರು ಮೊದಲಾದ ಆರ್ಥಿಕವಾಗಿ ಹಿಂದುಳಿದವರು ಹಾಗೂ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಮತ್ತು ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಸಚಿವರು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಯುವನಾಯಕ ಡಾ.ಅರುಣ್ ಸೋಮಣ್ಣ ಅವರೊಂದಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜನಗರ ವಾರ್ಡಿನಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.
ಕೋವಿಡ್ ಮೂರನೆ ಅಲೆ ಎದುರಿಸಲು ಸಜ್ಜಾಗಿರುವುದಾಗಿ ಹೇಳಿದ ಸಚಿವರು ಮಾರೇನಹಳ್ಳಿಯಲ್ಲಿ 70 ಹಾಸಿಗೆಗಳ ಐಸಿಯು ಆಸ್ಪತ್ರೆಯನ್ನು ಇನ್ನು ಎರಡು ವಾರದಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಜನ ಸಾಂದ್ರತೆ ಹೆಚ್ಚಿರುವುದರಿಂದ ಸರಸ್ವತಿನಗರದಲ್ಲಿ ಮತ್ತೊಂದು ಪೊಲೀಸ್ ಠಾಣೆ ಆರಂಭಿಸಲು ಗೃಹ ಸಚಿವರು ಸಮ್ಮತಿಸಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಈ ಸಂದರ್ಭದಲ್ಲಿ ಹೇಳಿದರು.
ದಣಿವರಿಯದ ಮಹಾನ್ ನಾಯಕ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕ ವಿ.ಸೋಮಣ್ಣ ಕ್ರಿಯಾಶಾಲಿಗಳಾಗಿ ಈ ಕ್ಷೇತ್ರದ ಜನರ ಸೇವೆ ಮಾಡುವಲ್ಲಿ ನಿರತರಾಗಿದ್ದಾರೆ, ಅವರು ದಣಿವರಿಯದ ನಾಯಕರು, ದೇವರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸೋಮಣ್ಣನವರ ಕಾರ್ಯದಕ್ಷತೆಯಿಂದ ಗೋವಿಂದರಾಜನಗರ ಕ್ಷೇತ್ರದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲಾಗಿದೆ, ರಾಜ್ಯದ ಆಸ್ಪತ್ರೆಗಳಲ್ಲಿಂದು 24,000 ಆಮ್ಲಜನಕ ಸೌಲಭ್ಯದ ಹಾಸಿಗೆಗಳು ಲಭ್ಯವಿದೆ, 5000 ವೆಂಟಿಲೇಟರ್ ಬೆಡ್’ಗಳನ್ನು ಸಜ್ಜುಗೊಳಿಸಲಾಗಿದೆ, ಮೂರನೆ ಅಲೆ ಎದುರಾದಲ್ಲಿ ಅದನ್ನು ಎದುರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಯುವನಾಯಕ ಡಾ.ಅರುಣ್ ಸೋಮಣ್ಣ, ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ದಾಸೇಗೌಡ, ಶಂಕುತಲ ಡೊಡ್ಡಲಕ್ಕಪ್ಪ, ಜಯರತ್ನ, ಪಲ್ಲವಿ ಚನ್ನಪ್ಪ, ವಾಗೀಶ್, ಸಿದ್ಧಾರ್ಥ್, ಶ್ರೀಧರ್, ಮೋಹನ್ ಕುಮಾರ್, ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ ಹಾಗೂ ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿರಾಜು ಮುಂತಾದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.