ಮೂಲದಲ್ಲೇ ತ್ಯಾಜ್ಯ ವಿಂಗಡಿಸಿ, ಸಂಸ್ಕರಿಸಿ ಮರುಬಳಕೆ ಮಾಡಿ: ಬಿಎಸ್ಡಬ್ಲ್ಯುಎಂಎಲ್ ಸಿಇಒ ಕರೀಗೌಡ ಕರೆ
ಬೆಂಗಳೂರು: ನಗರದಲ್ಲಿ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು–2026 ಪರಿಣಾಮಕಾರಿಯಾಗಿ ಜಾರಿಗೆ ಬರಲು ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯಿಂದಲೇ ತ್ಯಾಜ್ಯವನ್ನು ವಿಂಗಡಿಸಿ, ಸಂಸ್ಕರಿಸಿ ಮರುಬಳಕೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಅವರು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಟೌನ್ಹಾಲ್ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಹೊಸ ನಿಯಮಗಳ ಯಶಸ್ವಿ ಅನುಷ್ಠಾನಕ್ಕೆ ಎಲ್ಲಾ ಹಿತಾಸಕ್ತಿದಾರರ ಸಮನ್ವಯ ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದರು. ಈ ಕಾರ್ಯಾಗಾರದಲ್ಲಿ ನಾಗರಿಕರು, ನಿವಾಸಿಗಳ ಕಲ್ಯಾಣ ಸಂಘಗಳು (RWAs), ಸ್ವಯಂಸೇವಾ ಸಂಸ್ಥೆಗಳು, ಹೋಟೆಲ್ ಸಂಘಗಳು ಹಾಗೂ ಬಿಎಸ್ಡಬ್ಲ್ಯುಎಂಎಲ್ ಅಧಿಕಾರಿಗಳು ಭಾಗವಹಿಸಿದ್ದರು.
ರಸ್ತೆ ಬದಿಯಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಕಸ ಎಸೆಯಬಾರದು, ಮನೆ ಮನೆಗೆ ಬರುವ ಆಟೋ ಟಿಪ್ಪರ್ಗಳಿಗೆ ಕಸ ಹಸ್ತಾಂತರಿಸಬೇಕು ಎಂದು ಅವರು ಮನವಿ ಮಾಡಿದರು. ಕಸವನ್ನು ಮಿಶ್ರಣ ಮಾಡದೇ ತೇವ ಮತ್ತು ಒಣ ಕಸದಂತೆ ಪ್ರತ್ಯೇಕವಾಗಿ ವಿಂಗಡಿಸುವುದು ಕಡ್ಡಾಯ ಎಂದು ಒತ್ತಿ ಹೇಳಿದರು.
ಮನೆಗಳು, ದೊಡ್ಡ ಅಪಾರ್ಟ್ಮೆಂಟ್ಗಳು ಹಾಗೂ ಹೋಟೆಲ್ಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಮ್ಮಲ್ಲಿಯೇ ಸಂಸ್ಕರಿಸಿ ಮರುಬಳಕೆ ಮಾಡುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ನಗರದಲ್ಲಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ RWAsಗಳೊಂದಿಗೆ ಸಭೆಗಳನ್ನು ನಡೆಸಿ, ದೊಡ್ಡ ಪ್ರಮಾಣದ ತ್ಯಾಜ್ಯ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು.
ಬಿಎಸ್ಡಬ್ಲ್ಯುಎಂಎಲ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಾಮಮಣಿ ಅವರು ಮಾತನಾಡಿ, 2016ರ ನಿಯಮಗಳನ್ನು ಪರಿಷ್ಕರಿಸಿ 2026ರ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ತ್ಯಾಜ್ಯ ನಿರ್ವಹಣೆಯನ್ನು ಹೆಚ್ಚು ವೈಜ್ಞಾನಿಕ ಮತ್ತು ಪರಿಣಾಮಕಾರಿಯಾಗಿ ರೂಪಿಸಲಾಗಿದೆ ಎಂದರು.
ಹೊಸ ನಿಯಮಗಳ ಪ್ರಕಾರ ಕಸವನ್ನು ನಾಲ್ಕು ವಿಭಾಗಗಳಲ್ಲಿ ಕಡ್ಡಾಯವಾಗಿ ವಿಂಗಡಿಸಬೇಕು: ತೇವ ತ್ಯಾಜ್ಯ (ಜೈವಿಕವಾಗಿ ಕರಗುವದು), ಒಣ ತ್ಯಾಜ್ಯ (ಮರುಬಳಕೆ ಯೋಗ್ಯ), ಸ್ವಚ್ಛತಾ ತ್ಯಾಜ್ಯ ಮತ್ತು ವಿಶೇಷ ಕಾಳಜಿ ತ್ಯಾಜ್ಯ.
ತ್ಯಾಜ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಮೇಲ್ವಿಚಾರಣೆ ಹೆಚ್ಚಿಸಲು ಶೀಘ್ರದಲ್ಲೇ ಕೇಂದ್ರೀಕೃತ ಆನ್ಲೈನ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಜೊತೆಗೆ ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರ ಹೊಣೆಗಾರಿಕೆಯನ್ನು ಹೆಚ್ಚಿಸಲು “Extended Bulk Waste Generator Responsibility (EBWGR)” ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಸ್ತಾವಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತಜ್ಞರು ಹಾಗೂ ನಾಗರಿಕರು ಭಾಗವಹಿಸಿ, ಸಮನ್ವಯದ ಮೂಲಕ ಸ್ವಚ್ಛ, ಹಸಿರು ಮತ್ತು ಸುಸ್ಥಿರ ಬೆಂಗಳೂರನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಿದರು.
