KPSC ನೇಮಕಾತಿ ವ್ಯವಸ್ಥೆಯಲ್ಲಿ UPSC ಮಾದರಿಯ ಸುಧಾರಣೆಗೆ ಯೋಜನೆ; 3–5 ತಿಂಗಳಲ್ಲಿ ಅಂತಿಮ ಫಲಿತಾಂಶ, ಅಭ್ಯರ್ಥಿಗಳಿಗೆ OMR ವೀಕ್ಷಣೆ ಅವಕಾಶ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ತನ್ನ ನೇಮಕಾತಿ ವ್ಯವಸ್ಥೆಯನ್ನು ಕೇಂದ್ರ ಲೋಕಸೇವಾ ಆಯೋಗದ (UPSC) ಮಾದರಿಯಲ್ಲಿ ಹೆಚ್ಚು ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ತ್ವರಿತಗೊಳಿಸುವ ನಿಟ್ಟಿನಲ್ಲಿ ಕ್ರಮ ಆರಂಭಿಸಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತಾವಿತ ವ್ಯವಸ್ಥೆಯಡಿ ಆಯ್ಕೆ ಪ್ರಕ್ರಿಯೆಯನ್ನು 3ರಿಂದ 5 ತಿಂಗಳೊಳಗೆ ಪೂರ್ಣಗೊಳಿಸಿ ಅಂತಿಮ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ. ಅಲ್ಲದೆ, ಪರೀಕ್ಷೆ ಪೂರ್ಣಗೊಂಡ ಒಂದು ವಾರದೊಳಗೆ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
KPSC ಸಭೆಯಲ್ಲಿ ಈ ಬದಲಾವಣೆಗಳ ಕುರಿತು ಚರ್ಚಿಸಲಾಗಿದ್ದು, ನೂತನ ಪರೀಕ್ಷಾ ನಿಯಂತ್ರಕರಾಗಿ ಅಧಿಕಾರ ಸ್ವೀಕರಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರನ್ನು ಆಯೋಗದ ಪರವಾಗಿ ಸ್ವಾಗತಿಸಲಾಯಿತು.
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಿ, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವುದು ಉದ್ದೇಶ ಎಂದು ಪ್ರಸನ್ನ ವಿವರಿಸಿದರು.
ಪ್ರಮುಖ ಕ್ರಮಗಳಲ್ಲಿ, ನೇಮಕಾತಿ ಪರೀಕ್ಷೆಗಳು ಮುಗಿದ ತಕ್ಷಣ ಆಯಾ ಜಿಲ್ಲೆಗಳಲ್ಲಿ ಲಭ್ಯವಿರುವ ಸ್ಕ್ಯಾನಿಂಗ್ ಯಂತ್ರಗಳ ಮೂಲಕ OMR ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಆಯೋಗದ ಅಧಿಕೃತ ವೆಬ್ಸೈಟ್ಗೆ ಅಪ್ಲೋಡ್ ಮಾಡುವ ಪ್ರಸ್ತಾವನೆ ಸೇರಿದೆ.
ಈ ವ್ಯವಸ್ಥೆಯಿಂದ ಅಭ್ಯರ್ಥಿಗಳು ತಮ್ಮ OMR ಉತ್ತರ ಪತ್ರಿಕೆಗಳನ್ನು ನೇರವಾಗಿ ವೀಕ್ಷಿಸಿ ಪರಿಶೀಲಿಸಲು ಅವಕಾಶ ದೊರೆಯಲಿದೆ. ಪರೀಕ್ಷೆ ಮುಗಿದ ಒಂದು ವಾರದೊಳಗೆ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಆಯೋಗದ ಸದಸ್ಯರು ವಿವಿಧ ಸಲಹೆಗಳನ್ನು ನೀಡಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮತ್ತು ನಿಗದಿತ ಕಾಲಮಿತಿಯೊಳಗೆ ನಡೆಸಲು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಯಾವುದೇ ವ್ಯಕ್ತಿಗಳ ಆಮಿಷ, ವದಂತಿ ಅಥವಾ ಮಧ್ಯವರ್ತಿಗಳು ಹಾಗೂ ಅನಧಿಕೃತ ವ್ಯಕ್ತಿಗಳ ಭರವಸೆಗಳಿಗೆ ಒಳಗಾಗಬಾರದು ಎಂದು KPSC ಎಚ್ಚರಿಸಿದೆ. ಅಭ್ಯರ್ಥಿಗಳು ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಿ, ಪರೀಕ್ಷೆಗೆ ಶ್ರದ್ಧೆಯಿಂದ ಸಿದ್ಧತೆ ನಡೆಸಿ ಸರ್ಕಾರಿ ಉದ್ಯೋಗಾವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದೆ.
ಅರ್ಹ ಅಭ್ಯರ್ಥಿಗಳನ್ನು ಅನಗತ್ಯ ವಿಳಂಬವಿಲ್ಲದೆ ಆಯ್ಕೆ ಮಾಡುವ ಉದ್ದೇಶದಿಂದ UPSC ಮಾದರಿಯ ಪಾರದರ್ಶಕತೆ, ಆಧುನಿಕ ತಂತ್ರಜ್ಞಾನ ಮತ್ತು ತ್ವರಿತ ನೇಮಕಾತಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸರ್ಕಾರದ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
