Home ಶಿಕ್ಷಣ ಫೆ.22 ರಿಂದ 6 ರಿಂದ 8ನೇ ತರಗತಿಗಳ ಆರಂಭ: ಸುರೇಶ್ ಕುಮಾರ್

ಫೆ.22 ರಿಂದ 6 ರಿಂದ 8ನೇ ತರಗತಿಗಳ ಆರಂಭ: ಸುರೇಶ್ ಕುಮಾರ್

17
0

ಬೆಂಗಳೂರು:

ಪ್ರಸ್ತುತ ಶೈಕ್ಷಣಿಕ ವರ್ಷದ 6 ರಿಂದ 8ನೇ ತರಗತಿಗಳನ್ನು ಬೆಂಗಳೂರು ನಗರ ಮತ್ತು ಕೇರಳ ಗಡಿಭಾಗಕ್ಕೆ ಹೊಂದಿಕೊಂಡ ಶಾಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಶಾಲೆಗಳಲ್ಲಿ ಎಂದಿನಂತೆ ಈ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮುಂದುವರೆಯಲಿದೆ ಹಾಗೂ ಎಂಟನೇ ತರಗತಿಗಳು ಮಾತ್ರ ಪೂರ್ಣವಾಗಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ರಾಜ್ಯದ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆ ಹಾಗೂ ಉಚ್ಚ ನ್ಯಾಯಾಲಯದ ಆಶಯದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಈಗಾಗಲೇ ಆರಂಭವಾಗಿರುವ 9 ಮತ್ತು 12ನೇ ತರಗತಿಗಳಂತೆ 6ರಿಂದ 8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯಲಿವೆ ಎಂದರು.

ಆ ವೇಳೆಗೆ ರಾಜ್ಯದ ಕೋವಿಡ್‍ಗೆ ಸಂಬಂಧಿಸಿದ ವಿವರವಾದ ವರದಿಯೊಂದು ತಾಂತ್ರಿಕ ಸಲಹಾ ಸಮಿತಿ ಕೈಸೇರಲಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಉಳಿದ ಒಂದರಿಂದ ಐದನೇ ತರಗತಿಗಳ ಆರಂಭ ಅಥವಾ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸುವ ಸಂಬಂಧದಲ್ಲಿ ಫೆ. 24 ಇಲ್ಲವೇ 25ರಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದೆ ಎಂದರು.

ಇನ್ನು ಮುಂದೆ ಆರೋಗ್ಯ ಇಲಾಖೆ ಈಗಾಗಲೇ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ಕೋವಿಡ್ ಯಾದೃಚ್ಛಿಕ (ರ‍್ಯಾಂಡಮ್ ಟೆಸ್ಟ್) ಪರೀಕ್ಷೆ ಕೈಗೊಳ್ಳಲಿದೆ ಎಂದು ಸಹ ಸುರೇಶ್ ಕುಮಾರ್ ವಿವರಿಸಿದರು.

ಹಾಜರಾತಿ ಕಡ್ಡಾಯವಿಲ್ಲ-ಪೋಷಕರ ಸಮ್ಮತಿ ಪತ್ರ ಕಡ್ಡಾಯ;

ಈ ಮೊದಲು ನಿರ್ಧಾರ ಕೈಗೊಂಡಂತೆ 6ರಿಂದ 8ನೇ ತರಗತಿಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಶಾಲೆಗೆ ಬರುವಾಗ ಒಪ್ಪಿಗೆ ಪತ್ರ ತರಬೇಕಿರುವುದು ಕಡ್ಡಾಯವಾಗಿದೆ. ಹಾಗೆಯೇ ಶಾಲೆಗೆ ಹಾಜರಾಗುವುದು ಕಡ್ಡಾಯವೇನಿಲ್ಲ. ಕೇರಳ ಭಾಗದಿಂದ ಗಡಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟೀವ್ ಫಲಿತಾಂಶವಿದ್ದರೆ ಮಾತ್ರವೇ ಶಾಲೆಗೆ ಹಾಜರಾಗಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಶಾಲೆಗಳನ್ನು ಆರಂಭಿಸುವ ಸಂಬಂಧದಲ್ಲಿ ಈಗಾಗಲೇ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಐದು ಸಭೆಗಳನ್ನು ನಡೆಸಿ ಅವರು ಮಾರ್ಗದರ್ಶನದನ್ವಯವೇ ಶಾಲೆಗಳು ನಡೆಯುತ್ತಿದ್ದು, ಎಲ್ಲ ತರಗತಿಗಳಲ್ಲಿ ಹಾಜರಾತಿ ಕಡ್ಡಾಯವಲ್ಲವಾದರೂ ಶೇ. 70-89ರಷ್ಟು ಹಾಜರಾತಿ ಇದೆ ಎಂದು ಅವರು ವಿವರಿಸಿದರು. ಈ ಮೊದಲು ಆರಂಭವಾಗಿರುವ ಶಾಲೆಗಳ ಹಾಜರಾತಿ, ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ, ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆಯನ್ನು ಗಮನಿಸಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ 6ರಿಂದ 8ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ ಎಂದು ಅವರು ವಿವರಿಸಿದರು.

ಜ. 28ರಂದು ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತಂತೆ ಫೆಬ್ರವರಿ ಎರಡನೇ ವಾರದಲ್ಲಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಇಂದು ಉಳಿದ ತರಗತಿಗಳನ್ನು ಸಮಿತಿಯ ಮಾರ್ಗದರ್ಶನದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಯಲಿವೆ.

ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್:

ಶಾಲೆಗಳ ಸುರಕ್ಷತೆ ಮತ್ತು ಶಾಲೆಗಳಲ್ಲಿ ನಿಯಮಗಳ ಪಾಲನೆಯನ್ನು ಗಮನಿಸುವ ಹಾಗೂ ಸ್ಥಳೀಯ ಅಗತ್ಯತೆಗಗಳಿಗನುಸಾರವಾಗಿ ಶಾಲೆಗಳ ಆರಂಭಿಸುವ ಸಂಬಂಧದಲ್ಲಿ ಜಿಲ್ಲಾಧಿಕಾರಿಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ವಿವರಿಸುವ ಸಂಬಂಧದಲ್ಲಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಲಯಗಳನ್ನು ತೆರೆಯಲಿದ್ದಾರೆ. ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸಂಸ್ಥೆಯ ನಿಗಮಗಳು ಬಸ್ ಚಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ. ಈ ಕುರಿತಂತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಅಜೀಂಪ್ರೇಂಜೀ ವಿವಿ ನಡೆಸಿದ ಸಮೀಕ್ಷೆಯೊಂದರಲ್ಲಿ ಶಾಲೆಗಳು ಆರಂಭವಾಗದೇ ಇರುವುದರಿಂದ ಶೇ. 92ರಷ್ಟು ಮಕ್ಕಳು ಗಣಿತದಲ್ಲಿ ಹಿಂದೆ ಬಿದ್ದಿದ್ದರೆ, ಶೆ. 80ರಷ್ಟು ಮಕ್ಕಳು ಅಕ್ಷರಗಳನ್ನೇ ಮರೆತಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಶಾಲಾರಂಭಕ್ಕೆ ಎಲ್ಲ ವಲಯಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕೋವಿಡ್ ತಾಂತ್ರಿಕ ರಾಜ್ಯ ಸಲಹಾ ಸಮಿತಿ ಸೂಚಿಸಿದಂತೆ ಎಸ್ ಒ ಪಿ ಯನ್ವಯ ಸಾಮಾಜಿಕ ಅಂತರ ಪಾಲಿಸಬೇಕಿರುವುದರಿಂದ ವಿದ್ಯಾರ್ಥಿಗಳ ಮತ್ತು ಲಭ್ಯ ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿಗಳನ್ನು ಪಾಳಿ ಇಲ್ಲವೇ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮತ್ತು ಬದಲಾವಣೆ ಮಾಡಿಕೊಳ್ಳಲು ಶಾಲೆಗಳಿಗೆ ಅವಕಾಶವಿದೆ. ಗ್ರಂಥಾಲಯ, ಪ್ರಾರ್ಥನಾ ಕೊಠಡಿ, ಪ್ರಯೋಗಲಯ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಕೊಠಡಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ ಎಂದು ಸಚಿವರು ವಿವರಿಸಿದರು.

ತಾವು ಈ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳು ಎಲ್ಲ ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾವು ಈ ಹಿಂದೆ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಯಾವುದೇ ಶಾಲೆಯಿಂದ ಕೋವಿಡ್ ಸೋಂಕು ಹರಡುವಿಕೆ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಮಕ್ಕಳು ಭೌತಿಕವಾಗಿ ಶಾಲೆಗಳಲ್ಲಿ ಹಾಜರಾಗುತ್ತಿರುವ ಕಾರಣ ಕಲಿಕಾ ಆಸಕ್ತಿ ಹೆಚ್ಚಿದೆ. ಬೋಧನೆ ಪರಿಣಾಮಕಾರಿಯಾಗುತ್ತಿದೆ ಎಂದು ತಿಳಿಸಿದ ಸಚಿವರು ಶಾಲೆ ಆರಂಭವಾದ ಮೇಲೆ ಮಕ್ಕಳಿಗಾಗಲೀ ಇಲ್ಲವೇ ಶಿಕ್ಷಕರಿಗಾಗಲಿ ಯಾವುದೇ ಸೋಂಕು ಹರಡಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಒಂದನೇ ತರಗತಿಯಿಂದ ಎಲ್ಲ ತರಗತಿಗಳು ಆರಂಭವಾಗಿವೆ. ದೆಹಲಿ ಮತ್ತು ಒರಿಸ್ಸಾದಲ್ಲಿ 9ರಿಂದ ಮೇಲಿನ ತರಗತಿಗಳು, ಕೇರಳದಲ್ಲಿ 10ರಿಂದ ಮೇಲಿನ ತರಗತಿಗಳು, ಮಹಾರಾಷ್ಟ್ರದಲ್ಲಿ 5ರಿಂದ ಮೇಲಿನ ತರಗತಿಗಳು ಹರಿಯಾಣದಲ್ಲಿ 9ರಿಂದ ಮೇಲಿನ ತರಗತಿಗಳು ಆರಂಭವಾಗಿವೆ ಎಂದು ಸಚಿವರು ವಿವಿಧ ರಾಜ್ಯಗಳ ಶೈಕ್ಷಣಿಕ ಚಟುವಟಿಕೆಗಳನ್ನು ವಿವರಿಸಿದರು.

ಈಗಾಗಲೇ ಆರಂಭವಾಗಿರುವ 10ನೇ ತರಗತಿ ಸರಾಸರಿ ಹಾಜರಾತಿ – 70.7%, 9ನೇ ತರಗತಿ ಸರಾಸರಿ ಹಾಜರಾತಿ – 60.30%, 6 ರಿಂದ 8ನೇ ತರಗತಿ ವಿದ್ಯಾಗಮ ಕಾರ್ಯಕ್ರಮದ ಸರಾಸರಿ ಹಾಜರಾತಿ– 50.5 % ಇದೆ. ಪಿಯು ತರಗತಿಗಳಲ್ಲೂ ಶೇ. 75ಕ್ಕೂ ಹೆಚ್ಚು ಹಾಜರಾತಿ ಇದೆ. ಟಿ.ಎ.ಸಿ. ಶಿಫಾರಸ್ಸಿನಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಎಸ್.ಓ.ಪಿ ಅನುಸಾರ ತೆಗೆದುಕೊಂಡಿದ್ದರಿಂದ ಹಾಗೂ ಶಿಕ್ಷಕರಿಗೆ ಮುಂಚಿತವಾಗಿ ಕೋವಿಡ್-19 ಪರೀಕ್ಷೆಗಳನ್ನು ಮಾಡಿಸಿದ್ದ ಹಿನ್ನಲೆಯಲ್ಲಿ ಯಾವುದೇ ಶಾಲೆಯಿಂದ ಸೋಂಕು ಹರಡುವಿಕೆ ಕುರಿತು ಈ ವರೆಗೆ ವರದಿಯಾಗಿಲ್ಲ. ಈ ಎಲ್ಲ ಅಂಶಗಳನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ ಎಲ್ಲ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಮುಂದಿನ ಶೈಕ್ಷಣಿಕ ಸಾಲು:

2021-22 ಸಾಲಿನ ಶೈಕ್ಷಣಿಕ ವರ್ಷವನ್ನು 2021ರ ಜುಲೈ 15ರಿಂದ ಏಕಕಾಲದಲ್ಲಿ ಆರಂಭವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here