ಬೆಂಗಳೂರು, ಜೂನ್ 16: ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳೊಂದಿಗೆ ನಡೆಸಿದ ಮೊದಲ ಪರಿಶೀಲನಾ ಸಭೆಯಲ್ಲೇ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಗುಂಡಿ ಮುಚ್ಚುವುದೇ ಒಂದು ಉದ್ಯಮವಾಗಿದೆಯೇ?” ಎಂದು ಇಂಜಿನಿಯರ್ಗಳನ್ನು ಖಡಕ್ ಆಗಿ ಪ್ರಶ್ನಿಸಿದರು.
ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ನಡೆಸಿದ ಮೊದಲ ಅಧಿಕೃತ ಸಭೆಯಲ್ಲಿ ಸಚಿವರು ನಗರದ ರಸ್ತೆ ನಿರ್ವಹಣೆ, ಕಾಮಗಾರಿಗಳ ಗುಣಮಟ್ಟ ಹಾಗೂ ನಿರಂತರವಾಗಿ ಉದ್ಭವಿಸುತ್ತಿರುವ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
“ರಸ್ತೆ ಮಾಡುವುದು ರಾಕೆಟ್ ಸೈನ್ಸ್ ಏನಾದರೂನಾ? ಪ್ರತೀ ಬಾರಿ ರಸ್ತೆ ಮಾಡಿದ ನಂತರ ಗುಂಡಿಗಳು ಏಕೆ ಉಂಟಾಗುತ್ತವೆ? ಮಳೆ ಬರುತ್ತದೆ ಎಂಬುದು ನಮಗೆ ಗೊತ್ತಿಲ್ಲವೇ? ರಸ್ತೆ ಎಷ್ಟು ವರ್ಷ ಬಾಳಿಕೆ ಬರಬೇಕು ಎಂಬುದು ಗೊತ್ತಿಲ್ಲವೇ?” ಎಂದು ಸಚಿವರು ಪ್ರಶ್ನಿಸಿದರು.
ರಸ್ತೆ ನಿರ್ಮಾಣದ ಬಳಿಕ ವರ್ಷಪೂರ್ತಿ ಗುಂಡಿ ಮುಚ್ಚುವ ಕೆಲಸವೇ ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಇದು ಬೆಂಗಳೂರಿನ ನಾಗರಿಕರ ನಡುವೆ ದೊಡ್ಡ ಚರ್ಚೆಯ ವಿಷಯವಾಗಿದೆ ಎಂದು ಹೇಳಿದರು.
“ರಸ್ತೆ ಮಾಡುತ್ತೇವೆ, ನಂತರ ಗುಂಡಿಗಳು ಬರುತ್ತವೆ, ಮತ್ತೆ ಗುಂಡಿ ಮುಚ್ಚುತ್ತೇವೆ. ವರ್ಷಪೂರ್ತಿ ಇದೇ ಕೆಲಸ ನಡೆಯುತ್ತಿದೆ. ನನ್ನ ಸರಳ ಪ್ರಶ್ನೆ ಏನೆಂದರೆ, ಗುಂಡಿಗಳು ಬರಲೇಬಾರದು ಅಲ್ವಾ? ಗುಂಡಿ ಮುಚ್ಚುವುದೇ ಒಂದು ಪ್ರತ್ಯೇಕ ಉದ್ಯಮವಾಗಿ ಬಿಟ್ಟಿದೆಯೇ?” ಎಂದು ಪ್ರಶ್ನಿಸಿದರು.
ಇತರ ರಾಜ್ಯಗಳಲ್ಲಿ ಹೆಚ್ಚು ಮಳೆಯಾಗಿದ್ದರೂ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
“ಹೆಚ್ಚು ಮಳೆಯಾಗುವ ರಾಜ್ಯಗಳಲ್ಲೂ ಉತ್ತಮ ರಸ್ತೆಗಳಿವೆ. ಅಲ್ಲಿ ರಸ್ತೆ ಹಾಳಾದ ಕೂಡಲೇ ದುರಸ್ತಿ ಮಾಡಲಾಗುತ್ತದೆ. ಅಲ್ಲಿ ಹೊಣೆಗಾರಿಕೆ ಇದೆ. ಇಲ್ಲಿ ಮಾತ್ರ ‘ಇದು ನಮ್ಮ ವ್ಯಾಪ್ತಿಯಲ್ಲ’, ‘ಅದು ನಮ್ಮ ಜವಾಬ್ದಾರಿಯಲ್ಲ’ ಎಂದು ಎಲ್ಲರೂ ಕೈ ತೊಳೆಯುತ್ತಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂಲದಲ್ಲೇ ಸಮಸ್ಯೆ ತಡೆಯಬೇಕು
ಸಮಸ್ಯೆ ಬಂದ ಬಳಿಕ ಪರಿಹಾರ ಹುಡುಕುವುದಕ್ಕಿಂತ, ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಸಚಿವರು ಒತ್ತಿ ಹೇಳಿದರು.
“ಪ್ರಿವೆನ್ಷನ್ ಇಸ್ ಬೆಟರ್ ದ್ಯಾನ್ ಕ್ಯೂರ್. ಕೆಲವು ಕೆಲಸಗಳು ಸಂಕೀರ್ಣವಾಗಿರಬಹುದು. ಆದರೆ ಮೂಲಭೂತ ಕೆಲಸಗಳನ್ನು ಸರಿಯಾಗಿ ಮಾಡಿದರೆ ಅನೇಕ ಸಮಸ್ಯೆಗಳು ಉದ್ಭವಿಸುವುದೇ ಇಲ್ಲ. ಆರಂಭದಲ್ಲೇ ಗುಣಮಟ್ಟದ ಕೆಲಸ ಮಾಡಿದರೆ ರಸ್ತೆ ಗುಂಡಿಗಳಂತಹ ಸಮಸ್ಯೆಗಳನ್ನು ತಡೆಯಬಹುದು,” ಎಂದು ಹೇಳಿದರು.
ಇಂಜಿನಿಯರ್ಗಳಿಗೆ ನೇರ ಪ್ರಶ್ನೆ
ಸಭೆಯಲ್ಲಿ ಹಾಜರಿದ್ದ ಮುಖ್ಯ ಇಂಜಿನಿಯರ್ಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಗುಂಡಿಗಳಿಲ್ಲದ ರಸ್ತೆ ನಿರ್ಮಾಣ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
“ಒಂದು ಕಡೆ ರಸ್ತೆ ಮಾಡುತ್ತೀರಿ, ಮತ್ತೊಂದು ಕಡೆ ಗುಂಡಿಗಳು ಬರುತ್ತವೆ. ಮತ್ತೆ ವರ್ಷಪೂರ್ತಿ ಗುಂಡಿ ಮುಚ್ಚುವ ಕೆಲಸ. ಬೆಂಗಳೂರಿನ ಬಗ್ಗೆ ಮಾತನಾಡಿದರೆ ರಸ್ತೆ ಗುಂಡಿಗಳೇ ಮೊದಲಿಗೆ ನೆನಪಾಗುತ್ತವೆ. ಗುಂಡಿಗಳಿಲ್ಲದ ರಸ್ತೆ ನಿರ್ಮಿಸಲು ಸಾಧ್ಯವಿಲ್ಲವೇ? ಇತರ ರಾಜ್ಯಗಳಲ್ಲಿ ಸಾಧ್ಯವಾಗಿರುವುದು ಇಲ್ಲಿ ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಪ್ರಶ್ನಿಸಿದರು.
ಸಭೆಯಲ್ಲಿ ರಸ್ತೆ ಕಾಮಗಾರಿಗಳ ಗುಣಮಟ್ಟ, ನಿರ್ವಹಣಾ ವ್ಯವಸ್ಥೆ ಮತ್ತು ಅಧಿಕಾರಿಗಳ ಜವಾಬ್ದಾರಿತನದ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಭವಿಷ್ಯದಲ್ಲಿ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಹಾಗೂ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.