ಬೆಂಗಳೂರು/ಜೈಪುರ, ಜೂನ್ 13: ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆಗಾಗಿ ಜೈಪುರಕ್ಕೆ ತೆರಳಿದ್ದ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತರಲ್ಲಿ ಹೆಚ್ಎಎಲ್ ಪೊಲೀಸ್ ಠಾಣೆಯ ಪಿಎಸ್ಐ ಅನಿತಾ, ಹೆಡ್ ಕಾನ್ಸ್ಟೇಬಲ್ಗಳಾದ ಯತೀಶ್ ಹಾಗೂ ಉಳ್ಳವಪ್ಪ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ಸಂಬಂಧ ಈ ಮೂವರು ಪೊಲೀಸ್ ಸಿಬ್ಬಂದಿಗಳು ಜೈಪುರಕ್ಕೆ ತೆರಳಿದ್ದರು. ಈ ವೇಳೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಗೆ ಪರಿಹಾರ ಕಲ್ಪಿಸುವುದು ಹಾಗೂ ಬೆಂಗಳೂರಿಗೆ ಬಂಧಿಸಿ ಕರೆದೊಯ್ಯುವುದನ್ನು ತಪ್ಪಿಸುವುದಾಗಿ ಹೇಳಿ ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಲಂಚದ ಬೇಡಿಕೆಗೆ ಸಂಬಂಧಿಸಿದಂತೆ ಆರೋಪಿಯ ಕಡೆಯವರು ಜೈಪುರ ಎಸಿಬಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದರು.
ಗಂಗೌರ್ ಹೋಟೆಲ್ನಲ್ಲಿ ಎಸಿಬಿ ಕಾರ್ಯಾಚರಣೆ
ಜೈಪುರದ ಗಂಗೌರ್ ಹೋಟೆಲ್ನಲ್ಲಿ ತಂಗಿದ್ದ ವೇಳೆ ಆರೋಪಿತ ಪೊಲೀಸ್ ಸಿಬ್ಬಂದಿಗಳು ಲಂಚದ ಹಣ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.
ಕಾರ್ಯಾಚರಣೆಯ ವೇಳೆ ₹2 ಲಕ್ಷ ಬೇಡಿಕೆಯ ಭಾಗವಾಗಿ ₹40,000 ಸ್ವೀಕರಿಸುತ್ತಿದ್ದಾಗ ಮೂವರು ಸಿಬ್ಬಂದಿಗಳನ್ನು ಎಸಿಬಿ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಎಸ್ಪಿ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ಕಾರ್ಯಾಚರಣೆ
ಈ ಕಾರ್ಯಾಚರಣೆಯನ್ನು ಜೈಪುರ ಎಸಿಬಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಭೂಪೇಂದ್ರ ಚೌಧರಿ ಅವರ ನೇತೃತ್ವದಲ್ಲಿ ನಡೆಸಲಾಗಿದೆ.
ದಾಳಿಯ ಬಳಿಕ ಮೂವರು ಸಿಬ್ಬಂದಿಗಳನ್ನು ವಶಕ್ಕೆ ಪಡೆದು ಎಸಿಬಿ ಕಚೇರಿಗೆ ಕರೆದೊಯ್ಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣದ ತನಿಖೆ ಮುಂದುವರಿಕೆ
ಪ್ರಾಥಮಿಕ ತನಿಖೆಯ ಪ್ರಕಾರ, “ಪ್ರಕರಣದಲ್ಲಿ ನಿಮಗೆ ಪರಿಹಾರ ದೊರಕುವಂತೆ ಮಾಡುತ್ತೇವೆ. ಬೆಂಗಳೂರಿಗೆ ಬಂಧಿಸಿ ಕರೆದೊಯ್ಯುವುದಿಲ್ಲ” ಎಂದು ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಪೊಲೀಸರಿಗೆ ಮುಜುಗರದ ಬೆಳವಣಿಗೆ
ಅಧಿಕೃತ ತನಿಖಾ ಕರ್ತವ್ಯದ ನಿಮಿತ್ತ ಬೇರೆ ರಾಜ್ಯಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿಗಳೇ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವುದು ಬೆಂಗಳೂರು ಪೊಲೀಸ್ ಇಲಾಖೆಗೆ ಮುಜುಗರದ ಸಂಗತಿಯಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ರಾಜಸ್ಥಾನ ಎಸಿಬಿ ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಅಂತಿಮ ವರದಿ ಹೊರಬಂದ ಬಳಿಕ ಇಲಾಖಾ ಮಟ್ಟದಲ್ಲಿಯೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
