ಬೆಂಗಳೂರಿನಲ್ಲಿ ಸಿಕ್ಕಿಂ ಮೂಲದ ಯುವತಿ ಹತ್ಯೆ; ಸಂಬಂಧಿಕನನ್ನು ವಶಕ್ಕೆ ಪಡೆದ ಬೆಳ್ಳಂದೂರು ಪೊಲೀಸರು
ಬೆಂಗಳೂರು, ಜೂನ್ 14: ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕನ್ನಹಳ್ಳಿ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಸಿಕ್ಕಿಂ ಮೂಲದ 22 ವರ್ಷದ ಯುವತಿಯೊಬ್ಬಳು ಹತ್ಯೆಯಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಂಬಂಧಿಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶುಕ್ರವಾರ ಬೆಳಿಗ್ಗೆ ಸುಮಾರು 6 ಗಂಟೆ ವೇಳೆಗೆ ಯುವತಿಯ ಹತ್ಯೆ ಕುರಿತು ಮಾಹಿತಿ ಬಂದ ತಕ್ಷಣ ಬೆಳ್ಳಂದೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬಳಿಕ ಹಿರಿಯ ಅಧಿಕಾರಿಗಳು ಹಾಗೂ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದರು.
ಪ್ರಾಥಮಿಕ ತನಿಖೆಯಲ್ಲಿ ಮೃತ ಯುವತಿ ಸಿಕ್ಕಿಂ ಮೂಲದವಳಾಗಿದ್ದು, ದೊಡ್ಡಕನ್ನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ನ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಳು ಎಂಬುದು ತಿಳಿದುಬಂದಿದೆ. ಆಕೆ ಸ್ಥಳೀಯ ಸಲೂನ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು.
ಸಿಕ್ಕಿಂನಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು
ಪೊಲೀಸರ ಪ್ರಕಾರ, ಯುವತಿ ಹಾಗೂ ಆರೋಪಿತ ಇಬ್ಬರೂ ಸಿಕ್ಕಿಂ ಮೂಲದವರಾಗಿದ್ದು, ಕಳೆದ ಒಂದು ವರ್ಷದಿಂದ ಪರಸ್ಪರ ಪರಿಚಯ ಹೊಂದಿದ್ದರು. ಇಬ್ಬರೂ ಸಿಕ್ಕಿಂನಲ್ಲಿಯೇ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಸುಮಾರು ಒಂದು ತಿಂಗಳ ಹಿಂದೆ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಆರೋಪಿತ, ಇದೇ ಪ್ರದೇಶದ ಹೋಟೆಲ್ ಒಂದರಲ್ಲಿ ಕುಕ್ ಅಸಿಸ್ಟೆಂಟ್ ಹಾಗೂ ವೇಟರ್ ಆಗಿ ಕೆಲಸ ಮಾಡುತ್ತಿದ್ದನು. ಆತ ಕಳೆದ ಒಂದು ತಿಂಗಳಿಂದ ಯುವತಿ ವಾಸಿಸುತ್ತಿದ್ದ ಮನೆಯಲ್ಲಿ ತಂಗಿದ್ದನು ಎಂದು ತಿಳಿದುಬಂದಿದೆ.
ವೈಯಕ್ತಿಕ ವಿಚಾರಕ್ಕೆ ಜಗಳ, ಚಾಕುವಿನಿಂದ ಹಲ್ಲೆ ಶಂಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ ಇಬ್ಬರ ನಡುವೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಜಗಳ ತೀವ್ರಗೊಂಡ ವೇಳೆ ಮನೆಯಲ್ಲಿ ಇದ್ದ ಅಡುಗೆಮನೆಯ ಚಾಕುವನ್ನು ಬಳಸಿಕೊಂಡು ಆರೋಪಿತ ಯುವತಿಯ ಕುತ್ತಿಗೆ ಭಾಗಕ್ಕೆ ಇರಿದಿರುವ ಶಂಕೆ ವ್ಯಕ್ತವಾಗಿದೆ.
ಅಪರಾಧ ಸ್ಥಳದಿಂದ ಲಭ್ಯವಾದ ಪ್ರಾಥಮಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿತನನ್ನು ಗುರುತಿಸಲಾಗಿದ್ದು, ಆತ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಬಂಧದ ಸ್ವರೂಪದ ಕುರಿತು ತನಿಖೆ
ಯುವತಿ ಹಾಗೂ ಆರೋಪಿತನ ನಡುವಿನ ನಿಖರ ಸಂಬಂಧದ ಕುರಿತು ಪೊಲೀಸರು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇಬ್ಬರೂ ಸಂಬಂಧಿಕರಾಗಿರುವ ಸಾಧ್ಯತೆ ಇದ್ದು, ಕುಟುಂಬ ಸದಸ್ಯರು ಹಾಗೂ ಪರಿಚಿತರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಂದೂರು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಹತ್ಯೆಗೆ ನಿಖರ ಕಾರಣ ಏನು, ಜಗಳಕ್ಕೆ ಕಾರಣವಾದ ವಿಚಾರ ಯಾವುದು ಹಾಗೂ ಘಟನೆಯ ಹಿಂದೆ ಬೇರೆ ಯಾವುದೇ ಅಂಶಗಳಿವೆಯೇ ಎಂಬುದರ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
