ಬೆಂಗಳೂರು: ಕನ್ನಡ ರಾಜ್ಯೋತ್ಸವದ ನಿಮಿತ್ತ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಕಂಪನಿ ‘hmt ಕನ್ನಡಿಗ’ ಎಂಬ ನೂತನ ಸರಣಿಯ ಕೈಗಡಿಯಾರಗಳನ್ನು ಬಿಡುಗಡೆ ಮಾಡಿದ್ದು, ಇವುಗಳ ಬೆಲೆ ₹3,500ರಿಂದ ₹3,600 ಇರಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಭಾನುವಾರ ತಿಳಿಸಿದರು.
ಚೈನ್ ಮತ್ತು ಬೆಲ್ಟ್ (ಸ್ಟ್ರಾಪ್) ನಮೂನೆಯ ಎಂಟು ನೂತನ ಕೈಗಡಿಯಾರಗಳನ್ನು ಕುಮಾರಸ್ವಾಮಿ ನಾಡಿಗೆ ಸಮರ್ಪಿಸಿದರು. ಈ ಗಡಿಯಾರಗಳು ವಿದ್ಯುಕ್ತವಾಗಿ ಅನಾವರಣಗೊಂಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ, ಮುಖ್ಯವಾಗಿ ಎಚ್ಎಂಟಿ ಮಳಿಗೆಗಳಲ್ಲಿ ದೊರೆಯಲಿವೆ ಎಂದು ಅವರು ಹೇಳಿದರು.
ಸಚಿವರ ಪ್ರಕಾರ, ಈ ಗಡಿಯಾರಗಳು ರೇಡಿಯಂ ಹೊಳಪು ಹೊಂದಿದ್ದು, ಬೆಲ್ಟ್ ಗಡಿಯಾರಗಳಿಗೆ ಇಟಲಿಯ ಅಪ್ಪಟ ಚರ್ಮದ ಬೆಲ್ಟ್ಗಳನ್ನು ಅಳವಡಿಸಲಾಗಿದೆ; ಒಂದು ಬೆಲ್ಟಿನ ಬೆಲೆಯೇ ₹450. ಎಲ್ಲ ವಯೋಮಾನದ ಪುರುಷರು, ಮಹಿಳೆಯರು ಹಾಗೂ ಯುವಜನರಿಗೆ ಸರಿಹೊಂದುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಸಚಿವರು ಮಾತನಾಡುವ ಮುನ್ನ ಎಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕುಮಾರ್ ಅವರು ಹೊಸ ಗಡಿಯಾರಗಳ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಿದರು.
ಒಂದು ಕಾಲದಲ್ಲಿ ‘ಭಾರತದ ಸಮಯಪಾಲಕ’ ಎಂದೇ ಖ್ಯಾತಿ ಪಡೆದಿದ್ದ ಎಚ್ಎಂಟಿ ಕೈಗಡಿಯಾರಗಳು ಕರ್ನಾಟಕದ ಅಸ್ಮಿತೆಯಾಗಿದ್ದವು ಎಂದ ಕುಮಾರಸ್ವಾಮಿ, 1953ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಕಾರ್ಖಾನೆಯಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದರು, ಗಡಿಯಾರ ವಿಭಾಗದಲ್ಲೇ ಸುಮಾರು ಏಳು ಸಾವಿರ ಕಾರ್ಮಿಕರಿದ್ದರು ಎಂದು ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಎಚ್ಎಂಟಿ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದರು.
ಸಚಿವರ ಆಹ್ವಾನದ ಮೇರೆಗೆ ಆಗಮಿಸಿದ್ದ ಕನ್ನಡಪರ ಸಂಘಟನೆಗಳ ಪ್ರಮುಖರ ಜತೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
