ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾನುವಾರ ವಾರ್ಡ್ ಒನ್ ಅಭಿಯಾನ ಆರಂಭವಾಗಿದ್ದು, ಆರು ವಾರ್ಡ್ಗಳಲ್ಲಿ ಸ್ವಚ್ಛತೆ ಮತ್ತು ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಯಿತು. ಇದಕ್ಕಾಗಿ ಸುಮಾರು 200 ಸಿಬ್ಬಂದಿ, 33 ಟ್ರ್ಯಾಕ್ಟರ್ಗಳು, 17 ಟಿಪ್ಪರ್ಗಳು ಹಾಗೂ 8 ಜೆಸಿಬಿಗಳನ್ನು ನಿಯೋಜಿಸಲಾಗಿತ್ತು.
ಪ್ರತಿ ವಿಭಾಗದಿಂದ ಒಂದರಂತೆ ಆಯ್ಕೆಯಾದ ವಾರ್ಡ್ಗಳು:
- ಸಿ.ವಿ. ರಾಮನ್ ನಗರ ವಿಭಾಗ – ನ್ಯೂ ತಿಪ್ಪಸಂದ್ರ
- ಶಾಂತಿನಗರ ವಿಭಾಗ – ಅಶೋಕನಗರ
- ಗಾಂಧಿನಗರ ವಿಭಾಗ – ನೆಹರು ನಗರ
- ಶಿವಾಜಿನಗರ ವಿಭಾಗ – ವಸಂತನಗರ
- ಚಾಮರಾಜಪೇಟೆ ವಿಭಾಗ – ಚಾಮರಾಜಪೇಟೆ
- ಚಿಕ್ಕಪೇಟೆ ವಿಭಾಗ – ಸುಂಕೇನಹಳ್ಳಿ
ರಸ್ತೆ ಬದಿಯ ಕಟ್ಟಡ ತ್ಯಾಜ್ಯ ಮತ್ತು ಅನಧಿಕೃತ ಬ್ಯಾನರ್ಗಳ ತೆರವು, ರಸ್ತೆ ಗುಂಡಿ ಮುಚ್ಚುವಿಕೆ, ಪಾದಚಾರಿ ಮಾರ್ಗ ದುರಸ್ತಿ ಹಾಗೂ ಕರ್ಬ್ ಅಳವಡಿಕೆ, ಪಾದಚಾರಿ ಮಾರ್ಗ ಒತ್ತುವರಿ ತೆರವು, ಅನಧಿಕೃತ ಒಎಫ್ಸಿ ಕೇಬಲ್ಗಳು ಮತ್ತು ಮರಗಳಿಂದ ನೇತಾಡುವ ಕೇಬಲ್ಗಳ ತೆರವು, ರಸ್ತೆ ಬದಿಯ ಚರಂಡಿ ಸ್ವಚ್ಛತೆ, ಬೀದಿ ದೀಪ ದುರಸ್ತಿ, ಒಣಗಿದ ಮತ್ತು ಅಪಾಯಕಾರಿ ಮರದ ಕೊಂಬೆಗಳ ತೆರವು, ರಸ್ತೆ ಮಧ್ಯದ ವಿಭಜಕಗಳಲ್ಲಿನ ತ್ಯಾಜ್ಯ ತೆರವು ಹಾಗೂ ಸೊಳ್ಳೆ ನಿಯಂತ್ರಣ ರಾಸಾಯನಿಕ ಸಿಂಪಡಣೆ ಕಾರ್ಯಗಳನ್ನು ನಡೆಸಲಾಯಿತು. ಬಿಡಾಡಿ ವಾಹನಗಳನ್ನು ಗುರುತಿಸಿ ನೋಟಿಸ್ ಅಂಟಿಸಲಾಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಅವರು ಎಂ.ಜಿ. ರಸ್ತೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್ ಒನ್ ಅಭಿಯಾನ ನಡೆಯುತ್ತಿದೆ.
ಕಾಮಗಾರಿಗಳನ್ನು ಪರಿಶೀಲಿಸಿದ ಜಗದೀಶ್ ಜಿ., ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿಟ್ಟು ದುರಸ್ತಿಗೊಳಿಸಬೇಕು, ಒತ್ತುವರಿ ತೆರವುಗೊಳಿಸಬೇಕು, ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ನಿಂತಿರುವ ಬಿಡಾಡಿ ವಾಹನಗಳನ್ನು ತೆರವುಗೊಳಿಸಬೇಕು ಹಾಗೂ ಗುರುತಿಸಲಾದ ಕಸದ ಬ್ಲ್ಯಾಕ್ಸ್ಪಾಟ್ಗಳನ್ನು ಸ್ವಚ್ಛಗೊಳಿಸಿ ಮತ್ತೆ ಕಸ ಸೇರದಂತೆ ನಿಗಾ ಇಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಿ, ಅಗತ್ಯವಿರುವೆಡೆ ಗುಣಮಟ್ಟದೊಂದಿಗೆ ಡಾಂಬರೀಕರಣ ಮಾಡಬೇಕು, ಹಾಳಾದ ಕಸದ ಡಬ್ಬಿಗಳನ್ನು ಬದಲಿಸಬೇಕು ಹಾಗೂ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅನಧಿಕೃತ ಕೇಬಲ್ಗಳನ್ನು ತೆರವುಗೊಳಿಸಬೇಕು ಎಂದೂ ತಿಳಿಸಿದರು.
ಪಾಲಿಕೆಯ ಎಂಜಿನಿಯರಿಂಗ್, ಅರಣ್ಯ, ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣಾ ವಿಭಾಗಗಳು ಬೆಸ್ಕಾಂ, ಜಲಮಂಡಳಿ ಹಾಗೂ ಸಂಚಾರ ಪೊಲೀಸರೊಂದಿಗೆ ಸಮನ್ವಯದಿಂದ ಕೆಲಸ ಮಾಡಿದವು. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಎನ್ಜಿಒಗಳ ಸುಮಾರು 200 ಸ್ವಯಂಸೇವಕರು ಭಾಗವಹಿಸಿದ್ದರು.
