ಅಕ್ರಮ ಗೋವು ಸಾಗಣೆ, ಗೋಹತ್ಯೆ ಮಾಡಿದರೆ 7 ವರ್ಷ ಜೈಲು, ₹10 ಲಕ್ಷ ದಂಡ: ಬಕ್ರೀದ್ ಮುನ್ನ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ
ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾಡಳಿತ ಅಕ್ರಮ ಗೋವು ಹಾಗೂ ಒಂಟೆ ಸಾಗಣೆ ಮತ್ತು ಹತ್ಯೆ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದು, ಕಾನೂನು ಉಲ್ಲಂಘನೆ ಮಾಡಿದವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹10 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಈ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ವಾಹನಗಳ ತಪಾಸಣೆಯನ್ನು ಕಡ್ಡಾಯಗೊಳಿಸಿ, ಅಕ್ರಮವಾಗಿ ಗೋವು ಅಥವಾ ಒಂಟೆ ಸಾಗಣೆ ನಡೆಸುತ್ತಿರುವುದು ಪತ್ತೆಯಾದರೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ರಮ ಸಾಗಣೆಯಲ್ಲಿ ಬಳಸುವ ವಾಹನಗಳನ್ನು ವಶಪಡಿಸಿಕೊಂಡು, ಅವುಗಳಲ್ಲಿರುವ ಗೋವುಗಳನ್ನು ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ಗೋಶಾಲೆಗಳಿಗೆ ಸುರಕ್ಷಿತವಾಗಿ ಸಾಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಹೊರ ರಾಜ್ಯಗಳು ಹಾಗೂ ಇತರೆ ಜಿಲ್ಲೆಗಳಿಂದ ಪ್ರಾಣಿಗಳನ್ನು ಕಳ್ಳಸಾಗಣೆ ಮೂಲಕ ತರುವುದು ಗಂಭೀರ ಅಪರಾಧವಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರಪತ್ರ ವಿತರಣೆ ಹಾಗೂ ಆಟೋರಿಕ್ಷಾ ಮೂಲಕ ಪ್ರಚಾರ ನಡೆಸುವಂತೆ ಸೂಚಿಸಿದರು.
ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೈಸೂರು ರಸ್ತೆ (ಕುಂಭಳಗೂಡು), ತುಮಕೂರು ರಸ್ತೆ (ಎಕ್ಸಿಬಿಷನ್ ಸೆಂಟರ್), ಮಾಗಡಿ ರಸ್ತೆ (ತಾವರೆಕೆರೆ), ಹೊಸೂರು ರಸ್ತೆ (ಅತ್ತಿಬೆಲೆ), ಹಳೆ ಮದ್ರಾಸ್ ರಸ್ತೆ (ಹೊಸಕೋಟೆ ಸಮೀಪ) ಸೇರಿದಂತೆ ನಗರದ ಹೊರವಲಯಗಳಲ್ಲಿ ಒಟ್ಟು 10 ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಕೇಂದ್ರಗಳಲ್ಲಿ ಮೂರು ಪಾಳಿಗಳಲ್ಲಿ 24 ಗಂಟೆಗಳ ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅಕ್ರಮ ಗೋಹತ್ಯೆ ಅಥವಾ ಒಂಟೆ ಹತ್ಯೆ ಕಂಡುಬಂದಲ್ಲಿ ಸಾರ್ವಜನಿಕರು ಬಿಬಿಎಂಪಿ ಸಹಾಯವಾಣಿ ಸಂಖ್ಯೆ 1533 ಗೆ ಕರೆ ಮಾಡಿ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಬ್ಬದ ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಪ್ರಾಣಿ ವಧೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿಯಮಾನುಸಾರ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಪರಮೇಶ್ವರ್ ಹಾಗೂ ಜಿ.ಬಿ.ಎ ಉಪ ನಿರ್ದೇಶಕ ಡಾ. ಚಂದ್ರಯ್ಯ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
