ಬೆಂಗಳೂರು, ನ.27: “ಸ್ವಾಮೀಜಿಗಳು ರಾಜಕಾರಣದಿಂದ ದೂರ ಇರಬೇಕು. ವಿವಾದಾತ್ಮಕ ಹೇಳಿಕೆ ಕೊಟ್ಟು ದೇಶದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯಿಸಿದರು.
ಮುಸಲ್ಮಾನರ ಮತದಾನದ ಹಕ್ಕು ಹಿಂಪಡೆಯಬೇಕು ಎಂಬ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಸಿದ ಡಿಸಿಎಂ ಅವರು, ” ಸ್ವಾಮೀಜಿಗಳು ಇಂತಹ ವಿವಾದಾತ್ಮಕ ಹೇಳಿಕೆ ನೀಡಬಾರದು. ಸಮಾಜದ ಶಾಂತಿ ಕೆಡಿಸುವ ಕೆಲಸ ಮಾಡಬಾರದು. ಅವರು ರಾಜಕಾರಣದಿಂದ ದೂರ ಇರೋದು ಒಳ್ಳೆಯದು. ಮತದಾನ ಎಂಬುದು ಸಂವಿಧಾನದ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಬಂದಿರುವ ಹಕ್ಕು. ಇಲ್ಲಿ ಒಬ್ಬ ವ್ಯಕ್ತಿ ಜನಿಸಿದರೆ ಸಂವಿಧಾನದಿಂದ ಸಿಗುವ ಹಕ್ಕುಗಳಲ್ಲಿ ಇದು ಕೂಡ ಒಂದು” ಎಂದು ತಿಳಿಸಿದರು.