ಮುಂಬೈ ರೋಡ್ಶೋಗೆ ಭರ್ಜರಿ ಸ್ಪಂದನೆ: ಮುಂದಿನ ಐದು ವರ್ಷಗಳಲ್ಲಿ ₹1.20 ಲಕ್ಷ ಕೋಟಿ ಹೂಡಿಕೆಗೆ ಜಿಂದಾಲ್ ಬದ್ಧತೆ
ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮುಂಬೈನಲ್ಲಿ ಆರಂಭಿಸಿರುವ ಎರಡು ದಿನಗಳ ರೋಡ್ಶೋಗೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆತಿದ್ದು, ಜಿಂದಾಲ್ ಸಮೂಹವು ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ₹1.20 ಲಕ್ಷ ಕೋಟಿ ಹೂಡಿಕೆ ಮಾಡುವ ಬದ್ಧತೆ ವ್ಯಕ್ತಪಡಿಸಿದೆ.
ರೋಡ್ಶೋ ಅಂಗವಾಗಿ ಸಚಿವರು ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಆಚಾರ್ಯ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉಕ್ಕು, ಉತ್ಪಾದನೆ ಹಾಗೂ ಇತರೆ ಕೈಗಾರಿಕಾ ವಲಯಗಳಲ್ಲಿ ಹೂಡಿಕೆ ವಿಸ್ತರಣೆ ಕುರಿತು ಚರ್ಚಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಸೋಮವಾರವೇ ಮುಂಬೈಗೆ ತೆರಳಿದ ಸಚಿವರು, ಮೊದಲ ದಿನ ಜಿಂದಾಲ್, ಎಲ್ & ಟಿ, ಬಿಸ್ಲೆರಿ, ರೇಮಂಡ್, ಟಾರ್ಕ್, ಹೀರಾನಂದಾನಿ, ಸನೋಫಿ, ಮ್ಯಾಗ್ನಂ, ಬಾಲು ಫೋರ್ಜ್, ಮ್ಯಾಕ್ಸ್ ಏರೋಸ್ಪೇಸ್ ಸೇರಿದಂತೆ ಪ್ರಮುಖ ಕಂಪನಿಗಳ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಜಿಂದಾಲ್ನಿಂದ ₹1.20 ಲಕ್ಷ ಕೋಟಿ ಹೂಡಿಕೆ
ಜಿಂದಾಲ್ ಸಮೂಹವು ಕರ್ನಾಟಕವನ್ನು ತನ್ನ ಆದ್ಯತೆಯ ಹೂಡಿಕೆ ತಾಣವೆಂದು ಪರಿಗಣಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ₹1.20 ಲಕ್ಷ ಕೋಟಿ ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.
ಕಳೆದ ಮೂರು ದಶಕಗಳಲ್ಲಿ ಜಿಂದಾಲ್ ಸಮೂಹವು ರಾಜ್ಯದಲ್ಲಿ ಈಗಾಗಲೇ ಸುಮಾರು ₹1.30 ಲಕ್ಷ ಕೋಟಿ ಹೂಡಿಕೆ ಮಾಡಿದ್ದು, ವಿಶೇಷವಾಗಿ ಬಳ್ಳಾರಿ ಮತ್ತು ವಿಜಯನಗರ ಭಾಗಗಳ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಕಂಪನಿಯ ಮುಂದಿನ ಹಂತದ ವಿಸ್ತರಣೆಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
ಬಿಸ್ಲೆರಿ, ರೇಮಂಡ್ಗೆ ವಿಜಯಪುರ, ಚಾಮರಾಜನಗರ ಹಾಗೂ ಬಳ್ಳಾರಿಯಲ್ಲಿ ಹೂಡಿಕೆ ಆಹ್ವಾನ
ಬಾಟಲಿ ನೀರಿನ ಉತ್ಪಾದನಾ ಸಂಸ್ಥೆ ಬಿಸ್ಲೆರಿ ರಾಜ್ಯದಲ್ಲಿ ತನ್ನ ಸಾಮರ್ಥ್ಯ ವಿಸ್ತರಣೆ ಹಾಗೂ ಹೊಸ ಹೂಡಿಕೆ ಕುರಿತು ಆಸಕ್ತಿ ತೋರಿದ್ದು, ಇದು ಸಾಕಾರಗೊಂಡರೆ ಸುಮಾರು 2,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಹಿನ್ನೆಲೆಯಲ್ಲಿ ವಿಜಯಪುರ ಅಥವಾ ಚಾಮರಾಜನಗರ ಜಿಲ್ಲೆಗಳಲ್ಲಿ ಹೂಡಿಕೆ ಮಾಡುವಂತೆ ಸರ್ಕಾರ ಸಲಹೆ ನೀಡಿದೆ.
ಅದೇ ರೀತಿ, ಜೀನ್ಸ್ ಉತ್ಪಾದನಾ ಘಟಕ ಸ್ಥಾಪಿಸಲು ಉದ್ದೇಶಿಸಿರುವ ರೇಮಂಡ್ ಲೈಫ್ಸ್ಟೈಲ್ ಲಿಮಿಟೆಡ್ ಸಂಸ್ಥೆಗೆ ಕಚ್ಚಾ ವಸ್ತು ಹಾಗೂ ಮಾರುಕಟ್ಟೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಬಳ್ಳಾರಿ ಅಥವಾ ವಿಜಯಪುರ ಜಿಲ್ಲೆಗಳಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಚಿಪ್ ವಿನ್ಯಾಸ ಕೇಂದ್ರ, ರೋಬೋಟಿಕ್ಸ್ ಹಾಗೂ ಸಂಶೋಧನಾ ಪಾರ್ಕ್
ಎಲ್ & ಟಿ ಸಂಸ್ಥೆ ಕೈಗಾರಿಕಾ ರೋಬೋಟಿಕ್ಸ್ ಕ್ಷೇತ್ರಕ್ಕೆ ಪ್ರವೇಶಿಸುವ ಯೋಜನೆ ಹೊಂದಿದ್ದು, ಬೆಂಗಳೂರುದಲ್ಲಿ ಜಾಗತಿಕ ಮಟ್ಟದ ಚಿಪ್ ವಿನ್ಯಾಸ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಇದರ ಜೊತೆಗೆ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಮೀಸಲಾದ ವಿಶೇಷ ಸಂಶೋಧನೆ ಮತ್ತು ನಾವೀನ್ಯತಾ ಪಾರ್ಕ್ ಸ್ಥಾಪಿಸುವ ಉದ್ದೇಶವನ್ನೂ ಕಂಪನಿ ಪ್ರತಿನಿಧಿಗಳು ಹಂಚಿಕೊಂಡಿದ್ದಾರೆ. ಯೋಜನೆ ಅಂತಿಮಗೊಂಡರೆ ಅಗತ್ಯ ಹೈ-ವೋಲ್ಟೇಜ್ ಹಾಗೂ ಎಲೆಕ್ಟ್ರಾನಿಕ್ ಪರೀಕ್ಷಾ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಸಚಿವರು ತಿಳಿಸಿದರು.
ಸೆಮಿಕಂಡಕ್ಟರ್, ಡೇಟಾ ಸೆಂಟರ್ ಮತ್ತು ಎಐ ಕ್ಷೇತ್ರಗಳಲ್ಲಿ ಆಸಕ್ತಿ
ಟಾರ್ಕ್ ಸೆಮಿಕಂಡಕ್ಟರ್ಸ್ ಸಂಸ್ಥೆ ಕರ್ನಾಟಕದಲ್ಲಿ ಸೆಮಿಕಂಡಕ್ಟರ್, ಡೇಟಾ ಸೆಂಟರ್ ಹಾಗೂ ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ವ್ಯಕ್ತಪಡಿಸಿದ್ದು, ಕಾಂಪೌಂಡ್ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪಿಸುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದೆ.
ಇದೇ ವೇಳೆ, ಟಿಸಿಪಿಎಲ್ ಪ್ಯಾಕೇಜಿಂಗ್ ಲಿಮಿಟೆಡ್ ಸಂಸ್ಥೆ ರಾಜ್ಯದಲ್ಲಿ ಫಿಲ್ಮ್ಸ್ ಮತ್ತು ಲ್ಯಾಮಿನೇಟ್ಸ್ ಉತ್ಪಾದನಾ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ.
ಉದ್ಯೋಗ, ಸಂಶೋಧನೆ ಮತ್ತು ಕೈಗಾರಿಕಾ ಬೆಳವಣಿಗೆಗೆ ಒತ್ತು
ಎಲ್ಲ ಹೂಡಿಕೆದಾರರೊಂದಿಗೂ ಹೆಚ್ಚಿನ ಹೂಡಿಕೆ, ಉತ್ಪಾದನಾ ವಿಸ್ತರಣೆ, ಉದ್ಯೋಗ ಸೃಷ್ಟಿ, ಸಂಶೋಧನೆ ಮತ್ತು ಅಭಿವೃದ್ಧಿ, ಡೇಟಾ ಸೆಂಟರ್ ಸ್ಥಾಪನೆ ಹಾಗೂ ಕೈಗಾರಿಕೆಗಳಿಗೆ ಅಗತ್ಯ ಭೂಮಿ ಮತ್ತು ನೀರಿನ ಲಭ್ಯತೆ ಕುರಿತಂತೆ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.
ಈ ಸಭೆಗಳಲ್ಲಿ ಡಾ. ನಿರಂಜನ್ ಹೀರಾನಂದಾನಿ (ಟಾರ್ಕ್), ಸಾಕೇತ್ ಕನೋರಿಯಾ (ಟಿಸಿಪಿಎಲ್), ಆ್ಯಂಜೆಲೋ ಜಾರ್ಜ್ (ಬಿಸ್ಲೆರಿ), ಗಿರೀಶ್ ಅಡ್ವಾಣಿ (ರೇಮಂಡ್), ಅರುಣ್ ರಾಮಚಂದ್ರಾನಿ (ಎಲ್ & ಟಿ), ಹಾಗೂ ವಿರಳ್ ಷಾ ಮತ್ತು ರುಚಿರ್ ಷಾ (ಸನೋಫಿ) ಭಾಗವಹಿಸಿದ್ದರು.
ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಹಾಗೂ ಕೈಗಾರಿಕಾ ಆಯುಕ್ತೆ ಖುಷ್ಬೂ ಗೋಯೆಲ್ ಉಪಸ್ಥಿತರಿದ್ದರು.
