ಆರ್ಇಆರ್ಎ ಜಾರಿಯನ್ನೇ ಬಲಪಡಿಸಲಿ ಕರ್ನಾಟಕ ಅಪಾರ್ಟ್ಮೆಂಟ್ ಮಸೂದೆ: ಸಿಎಂಗೆ ತೇಜಸ್ವಿ ಸೂರ್ಯ ಸಲಹೆ
ಬೆಂಗಳೂರು: ಕರ್ನಾಟಕದ ಹಳೆಯ ಅಪಾರ್ಟ್ಮೆಂಟ್ ಕಾನೂನುಗಳನ್ನು ಬದಲಿಸಿ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ–2026 ಜಾರಿಗೆ ತರುವ ರಾಜ್ಯ ಸರ್ಕಾರದ ಕ್ರಮವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದಾರೆ. ಆದರೆ ಈ ಮಸೂದೆ ಹೊಸ ಸಮಾನಾಂತರ ಕಾನೂನು ಚೌಕಟ್ಟನ್ನು ನಿರ್ಮಿಸುವ ಬದಲು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ (RERA), 2016ರ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ಕರ್ನಾಟಕದ ಲಕ್ಷಾಂತರ ಅಪಾರ್ಟ್ಮೆಂಟ್ ಮಾಲೀಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಹೊಸ ಕಾನೂನುಗಳ ಕೊರತೆಯಲ್ಲ, ಬದಲಾಗಿ RERA ಕಾಯ್ದೆಯ ಸೆಕ್ಷನ್ 17ರ ಪರಿಣಾಮಕಾರಿ ಅನುಷ್ಠಾನವಾಗದಿರುವುದಾಗಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಸಾಮಾನ್ಯ ಪ್ರದೇಶಗಳ ಹಕ್ಕುಪತ್ರ (Conveyance) ವರ್ಗಾವಣೆ ಹಾಗೂ ಅಪಾರ್ಟ್ಮೆಂಟ್ ಆಡಳಿತದಲ್ಲಿ ಉತ್ತರದಾಯಿತ್ವದ ಕೊರತೆ ಪ್ರಮುಖ ಸಮಸ್ಯೆಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಅಪಾರ್ಟ್ಮೆಂಟ್ ಮಾಲೀಕರು, ನಿವಾಸಿಗಳ ಕಲ್ಯಾಣ ಸಂಘಗಳು (RWAs), ಹೌಸಿಂಗ್ ಫೆಡರೇಷನ್ಗಳು ಹಾಗೂ ಕಾನೂನು ತಜ್ಞರೊಂದಿಗೆ ನಡೆಸಿದ ಸಮಾಲೋಚನೆಗಳ ಆಧಾರದ ಮೇಲೆ ರಾಜ್ಯ ಸರ್ಕಾರಕ್ಕೆ ಸಮಗ್ರ ಶಿಫಾರಸುಗಳನ್ನು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ತೇಜಸ್ವಿ ಸೂರ್ಯ ಸಲ್ಲಿಸಿರುವ ಪ್ರಮುಖ ಶಿಫಾರಸುಗಳು ಇಂತಿವೆ:
- RERA ಸೆಕ್ಷನ್ 17ರ ಅಡಿಯಲ್ಲಿ ನಿಗದಿತ ಅವಧಿಯೊಳಗೆ ಸಾಮಾನ್ಯ ಪ್ರದೇಶಗಳ ಹಕ್ಕುಪತ್ರವನ್ನು ಅಪಾರ್ಟ್ಮೆಂಟ್ ಸಂಘಗಳಿಗೆ ಕಡ್ಡಾಯವಾಗಿ ವರ್ಗಾಯಿಸುವ ವ್ಯವಸ್ಥೆ.
- ಪ್ರಸ್ತಾವಿತ ಸಮರ್ಥ ಪ್ರಾಧಿಕಾರ, RERA, ಸ್ಥಳೀಯ ಯೋಜನಾ ಪ್ರಾಧಿಕಾರಗಳು, ಉಪ ನೋಂದಣಾಧಿಕಾರಿಗಳು ಹಾಗೂ ಸಿವಿಲ್ ನ್ಯಾಯಾಲಯಗಳ ನಡುವಿನ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟವಾಗಿ ನಿರ್ಧರಿಸುವುದು.
- ರಾಜ್ಯದ ಎಲ್ಲಾ ಅಪಾರ್ಟ್ಮೆಂಟ್ ಸಂಘಗಳಿಗೆ ಏಕರೂಪದ ಆಡಳಿತ ವ್ಯವಸ್ಥೆ, ಮಾನದಂಡಿತ ನೋಂದಣಿ, ಮಾದರಿ ಉಪನಿಯಮಗಳು, ಹಣಕಾಸು ಬಹಿರಂಗತೆ ಹಾಗೂ ದೂರು ಪರಿಹಾರ ವ್ಯವಸ್ಥೆ ರೂಪಿಸುವುದು.
- ಡೀಮ್ಡ್ ಕನ್ವೇಯನ್ಸ್ ಜಾರಿಗೊಳಿಸುವಲ್ಲಿ ವಿಫಲವಾಗುವ ಪ್ರವರ್ತಕರ ವಿರುದ್ಧ ಕಠಿಣ ಜಾರಿ ಕ್ರಮ ಹಾಗೂ ದಂಡಾತ್ಮಕ ವ್ಯವಸ್ಥೆ.
- CERSAI ವ್ಯವಸ್ಥೆಯೊಂದಿಗೆ ಏಕೀಕರಣ ಮಾಡಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಮನೆ ಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸುವುದು.
- ನೋಂದಣಿಯ ನಂತರ ಸ್ವಯಂಚಾಲಿತವಾಗಿ ಮ್ಯೂಟೇಶನ್ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಆದಾಯ ಹಾಗೂ ನೋಂದಣಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು.
- ಅಪಾರ್ಟ್ಮೆಂಟ್ ಸಂಘಗಳು ನಿರ್ವಹಣಾ ನಿಧಿ ಹಾಗೂ ಕಾರ್ಪಸ್ ನಿಧಿಯ ಬಳಕೆಯ ಕುರಿತು ಲೆಕ್ಕಪರಿಶೋಧಿತ ಹಣಕಾಸು ವರದಿಗಳು, ಬ್ಯಾಂಕ್ ಖಾತೆ ವಿವರಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಸದಸ್ಯರಿಗೆ ಸಮಯಕ್ಕೆ ಸರಿಯಾಗಿ ಒದಗಿಸುವುದನ್ನು ಕಡ್ಡಾಯಗೊಳಿಸುವುದು.
ಈ ಮಸೂದೆ RERA, 2016ಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಮತ್ತು ಈಗಾಗಲೇ ಕೇಂದ್ರ ಕಾನೂನಿನಡಿ ಮನೆ ಖರೀದಿದಾರರಿಗೆ ನೀಡಿರುವ ಹಕ್ಕುಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
“ಕರ್ನಾಟಕಕ್ಕೆ ಮತ್ತೊಂದು ಹೊಸ ಕಾನೂನು ಮಾತ್ರವಲ್ಲ, ಮನೆ ಖರೀದಿದಾರರಿಗೆ ನೈಜ ಅಧಿಕಾರ ನೀಡುವ, RERA ಅಡಿಯಲ್ಲಿ ದೊರೆತಿರುವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹಾಗೂ ಉತ್ತರದಾಯಿತ್ವಯುತ ಅಪಾರ್ಟ್ಮೆಂಟ್ ಆಡಳಿತವನ್ನು ಖಚಿತಪಡಿಸುವ ಕಾನೂನು ಅಗತ್ಯವಾಗಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ–2026 ಅಂತಿಮಗೊಳಿಸುವ ಸಂದರ್ಭದಲ್ಲಿ ತಮ್ಮ ಶಿಫಾರಸುಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರವನ್ನು ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
