ಬೆಂಗಳೂರು: ಬೈಯಪ್ಪನಹಳ್ಳಿ–ಹೊಸೂರು ರೈಲು ಮಾರ್ಗದ ದ್ವಿಪಥೀಕರಣದ ಭಾಗವಾಗಿ ಹೀಲಲಿಗೆ, ಮಾರನಾಯಕನಹಳ್ಳಿ ಮತ್ತು ಕಾರ್ಮೆಲಾರಂನಲ್ಲಿ ಮೇಲ್ಮಾರ್ಗದ ವಿದ್ಯುತ್ ಕಾಮಗಾರಿ ನಡೆಯುತ್ತಿದೆ ಎಂದು ಕೆ-ರೈಡ್ ತಿಳಿಸಿದೆ. ಯಶವಂತಪುರದಲ್ಲಿ ಉಪನಗರ ರೈಲು ಯೋಜನೆಯ ಕಾರಿಡಾರ್ 2ರ ವಿದ್ಯುತ್ ಕಾಮಗಾರಿಯ ಒಂದು ಹಂತ ಪೂರ್ಣಗೊಂಡಿದೆ.
48 ಕಿ.ಮೀ. ದ್ವಿಪಥೀಕರಣ ಮಾರ್ಗದ ಹೀಲಲಿಗೆ ಮತ್ತು ಮಾರನಾಯಕನಹಳ್ಳಿಯಲ್ಲಿ ಟವರ್ ಕಾರ್ ಬಳಸಿ ಮೇಲ್ಮಾರ್ಗದ ವಿದ್ಯುತ್ ಉಪಕರಣಗಳ ಭಾರ ವರ್ಗಾವಣೆ ಹಾಗೂ ಹಳಿ ಬದಲಿಸುವ ವ್ಯವಸ್ಥೆಯ ಪರಿಶೀಲನೆ ನಡೆಯುತ್ತಿದೆ. ಎರಡೂ ಕಡೆ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಲಲಿಗೆಯಲ್ಲಿ ಹಳಿಯ ಬಳಕೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆ-ರೈಡ್ ತಿಳಿಸಿದೆ.

ಕಾರ್ಮೆಲಾರಂನಲ್ಲಿ ವಿದ್ಯುತ್ ಪೂರೈಕೆ ಮತ್ತು ಹಳಿಯ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ವಿದ್ಯುತ್ ಉಪಕರಣಗಳಿಗೆ ಆಧಾರ ಅಳವಡಿಸುವ ಮತ್ತು ಮೇಲ್ಮಾರ್ಗದ ಉಪಕರಣಗಳ ಭಾರ ವರ್ಗಾಯಿಸುವ ಕಾಮಗಾರಿ ನಡೆಸಲಾಗುತ್ತಿದೆ. ಯಶವಂತಪುರದಲ್ಲಿ ಕಾರಿಡಾರ್ 2ರ ಸಿ2ಬಿ ಪ್ಯಾಕೇಜ್ ಅಡಿ ವಿದ್ಯುತ್ ಸೌಲಭ್ಯಗಳ ಸ್ಥಳಾಂತರದ ಭಾಗವಾಗಿ ಅಗತ್ಯ ಮತ್ತು ಇತರೆ ವಿದ್ಯುತ್ ಪ್ಯಾನೆಲ್ಗಳ ಅಳವಡಿಕೆ ಪೂರ್ಣಗೊಂಡಿದೆ. ಒಟ್ಟಾರೆ ಕಾಮಗಾರಿ ಮುಗಿಯುವ ದಿನಾಂಕವನ್ನು ಕೆ-ರೈಡ್ ತಿಳಿಸಿಲ್ಲ.
