ಬೆಂಗಳೂರು:
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಮೇಯರ್ ಆಯ್ಕೆ ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಮತ್ತು ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಉಸ್ತುವಾರಿಗಳೂ ಆದ ನಿರ್ಮಲ್‍ಕುಮಾರ್ ಸುರಾಣ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 36ನೇ ವಾರ್ಡ್‍ನಿಂದ ಸ್ಪರ್ಧಿಸಿ ಡಾ. ಶಂಭುಲಿಂಗ ಬಳವಟ್ಟಿ ಅವರು ಗೆಲುವು ಸಾಧಿಸಿದ್ದು, ಅವರು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾದರು.
ನಿರ್ಮಲ್‍ಕುಮಾರ್ ಸುರಾಣ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಅಶ್ವತ್ಥನಾರಾಯಣ ಅವರು ಡಾ. ಶಂಭುಲಿಂಗ ಬಳವಟ್ಟಿ ಮತ್ತು ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 36 ನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಡಾ. ಶಂಭುಲಿಂಗ ಬಳಬಟ್ಟಿ ಹಾಗೂ ಅವರ ಬೆಂಬಲಿಗರು ಇಂದು ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. pic.twitter.com/7XCiix1mln
— BJP Karnataka (@BJP4Karnataka) September 23, 2021
ಪಕ್ಷದ ಶಾಸಕರು ಮತ್ತು ರಾಜ್ಯ ವಕ್ತಾರರಾದ ರಾಜ್‍ಕುಮಾರ್ ಪಾಟೀಲ ತೇಲ್ಕೂರ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೋಡ್, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷರಾದ ಸಿದ್ದಾಜಿ ಎಸ್. ಪಾಟೀಲ್ ಹಾಗೂ ಕಲಬುರ್ಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೆವಾಡಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ಡಾ. ಶಂಭುಲಿಂಗ ಬಳಬಟ್ಟಿ ಅವರ ಸೇರ್ಪಡೆಯಿಂದ ಪಾಲಿಕೆಯಲ್ಲಿ ಬಿಜೆಪಿ ಕಾರ್ಪೊರೇಟರ್‍ಗಳ ಸಂಖ್ಯೆ 24ಕ್ಕೆ ಏರಿದೆ.
ಕಲಬುರ್ಗಿ ಮಹಾನಗರ ಪಾಲಿಕೆ ಹಲವು ವರ್ಷಗಳಿಂದ ಕಾಂಗ್ರೆಸ್ ಆಡಳಿತದಲ್ಲಿತ್ತು. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದರು. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸುವಂತಾಗಲು ಅಲ್ಲಿ ಮೇಯರ್ ಆಗಿ ಬಿಜೆಪಿಯ ಕಾರ್ಪೊರೇಟರ್ ಆಯ್ಕೆಗೆ ಸಹಕಾರ ಸಿಗುವ ವಿಶ್ವಾಸವಿದೆ ಎಂದು ಮುಖಂಡರು ಈ ಸಂದರ್ಭದಲ್ಲಿ ತಿಳಿಸಿದರು.
ಜೆಡಿಎಸ್ ಮುಖಂಡರ ಜೊತೆ ಸಚಿವರಾದ ಆರ್.ಅಶೋಕ್ ಮತ್ತು ಸ್ಥಳೀಯ ಶಾಸಕರು ಮಾತುಕತೆ ನಡೆಸುತ್ತಿದ್ದು, ಅವರು ಸ್ಪಂದಿಸುವ ವಿಶ್ವಾಸವಿದೆ ಎಂದು ತಿಳಿಸಿದರು.