ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಐತಿಹಾಸಿಕ ಒಮ್ಮತ; ತುಂಗಭದ್ರಾ ಅಣೆಕಟ್ಟು ರಕ್ಷಣೆಗಾಗಿ ಮಹತ್ವದ ನಿರ್ಧಾರ: ಸಿಎಂ ಡಿ.ಕೆ. ಶಿವಕುಮಾರ್
ಕೊಪ್ಪಳ, ಜೂನ್ 25: ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆ ಹಾಗೂ ತುಂಗಭದ್ರಾ ಅಣೆಕಟ್ಟಿನ ಸುರಕ್ಷತೆಗಾಗಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಐತಿಹಾಸಿಕ ಒಮ್ಮತದ ನಿರ್ಧಾರ ಕೈಗೊಂಡಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆದ ತುಂಗಭದ್ರಾ ಅಣೆಕಟ್ಟಿನ 33 ಸ್ಪಿಲ್ವೇ ಗೇಟ್ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ಜಲಸಂಪನ್ಮೂಲ ನಿರ್ವಹಣೆ ಹಾಗೂ ರೈತರ ಹಿತಾಸಕ್ತಿಗೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದರು.
ತುಂಗಭದ್ರಾ ನದಿ ನೀರಿನ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ರೈತರ ಹಿತಾಸಕ್ತಿಯನ್ನು ಕಾಪಾಡಲು ಮೂರು ರಾಜ್ಯಗಳು ಒಗ್ಗಟ್ಟಿನ ನಿರ್ಧಾರ ಕೈಗೊಂಡಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಉತ್ತಮ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅಣೆಕಟ್ಟಿನ 19ನೇ ಸ್ಪಿಲ್ವೇ ಗೇಟ್ ಹಾನಿಗೊಳಗಾದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಅಧಿಕಾರಿಗಳು ಮಧ್ಯರಾತ್ರಿ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದ್ದರು ಎಂದು ಶಿವಕುಮಾರ್ ಸ್ಮರಿಸಿದರು.
“ಮುಂದಿನ ದಿನ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಕೇವಲ ಒಂದು ವಾರದಲ್ಲೇ ಗೇಟ್ ಬದಲಾಯಿಸುವ ಕಾರ್ಯ ಪೂರ್ಣಗೊಳಿಸಲಾಯಿತು. ಇದರಿಂದ ಸಾವಿರಾರು ರೈತರ ಹಿತಾಸಕ್ತಿ ರಕ್ಷಿಸಲಾಯಿತು,” ಎಂದು ಅವರು ಹೇಳಿದರು.
ತುಂಗಭದ್ರಾ ಅಣೆಕಟ್ಟಿನ 33 ಸ್ಪಿಲ್ವೇ ಗೇಟ್ಗಳ ಬದಲಾವಣೆ ಮತ್ತು ಅಣೆಕಟ್ಟಿನ ಸುರಕ್ಷತೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಸಹಕಾರವನ್ನು ಮುಖ್ಯಮಂತ್ರಿ ಶ್ಲಾಘಿಸಿದರು.
“ಇತಿಹಾಸವನ್ನು ಕೇವಲ ಓದುವುದಲ್ಲ, ಹೊಸ ಇತಿಹಾಸವನ್ನು ಸೃಷ್ಟಿಸುವುದು ನಮ್ಮ ಗುರಿ. ಒಟ್ಟಾಗಿ ಚರ್ಚಿಸಿ, ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ,” ಎಂದು ಅವರು ಹೇಳಿದರು.
ಒಂದು ಗಂಟೆಯ ಚರ್ಚೆಯಲ್ಲಿ ಐತಿಹಾಸಿಕ ತೀರ್ಮಾನ
ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ 33 ಟಿಎಂಸಿ ನೀರಿನ ಸಂರಕ್ಷಣೆ, ನವಲಿ ಸಮಾನಾಂತರ ಜಲಾಶಯ, ಹೂಳೆತ್ತುವ ಕಾಮಗಾರಿ ಸೇರಿದಂತೆ ಹಲವು ದೀರ್ಘಕಾಲೀನ ಪರಿಹಾರಗಳ ಕುರಿತು ಚರ್ಚಿಸಿ ಒಮ್ಮತಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಈ ತೀರ್ಮಾನವನ್ನು ಕೇಂದ್ರ ಸಚಿವರು ಅಧಿಕೃತವಾಗಿ ಪ್ರಕಟಿಸಲಿದ್ದು, ಇದು ದೇಶದ ನೀರಾವರಿ ವ್ಯವಸ್ಥೆ ಹಾಗೂ ಸಹಕಾರಾತ್ಮಕ ಒಕ್ಕೂಟ ವ್ಯವಸ್ಥೆಯಲ್ಲಿ ಐತಿಹಾಸಿಕ ಮೈಲಿಗಲ್ಲಾಗಲಿದೆ ಎಂದು ಹೇಳಿದರು.
1860ರಲ್ಲೇ ಬ್ರಿಟಿಷ್ ಇಂಜಿನಿಯರ್ ಸರ್ ಆರ್ಥರ್ ಕಾಟನ್ ಅವರು ತುಂಗಭದ್ರಾ ನದಿಗೆ ಅಣೆಕಟ್ಟು ನಿರ್ಮಿಸುವ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ಬಳಿಕ 1949ರಲ್ಲಿ ಕಾಮಗಾರಿ ಆರಂಭವಾಗಿ, ಅನೇಕ ಗಣ್ಯರ ಕೊಡುಗೆಯಿಂದ ಯೋಜನೆ ಸಾಕಾರಗೊಂಡಿತು ಎಂದು ಮುಖ್ಯಮಂತ್ರಿ ವಿವರಿಸಿದರು.
“ರೈತರಿಗೆ ಸಂಬಳವಿಲ್ಲ, ಬಡ್ತಿಯಿಲ್ಲ, ಪಿಂಚಣಿಯಿಲ್ಲ, ರಜೆ ಇಲ್ಲ ಹಾಗೂ ನಿವೃತ್ತಿಯೂ ಇಲ್ಲ. ಆದರೂ ಅವರು ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ಅಂತಹ ರೈತರ ಬದುಕು ಹಾಗೂ ಈ ಭಾಗದ ಭತ್ತದ ಕಣಜವನ್ನು ರಕ್ಷಿಸುವ ದೃಢ ಸಂಕಲ್ಪವನ್ನು ನಮ್ಮ ಸರ್ಕಾರ ಕೈಗೊಂಡಿದೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.